ADVERTISEMENT

ತುಮಕೂರು: ಕಾಂಗ್ರೆಸ್ ಬಲ ವೃದ್ಧಿ, ಬಿಜೆಪಿ, ಜೆಡಿಎಸ್‌ಗೆ ಹಿನ್ನಡೆ

*ಫಲ ನೀಡದ ದೇವೇಗೌಡರ ಪ್ರಚಾರ * ಕೈ ಪಾಳಯದ ಸಾಂಘಿಕ ಹೋರಾಟಕ್ಕೆ ಜಯ

ಕೆ.ಜೆ.ಮರಿಯಪ್ಪ
Published 15 ಡಿಸೆಂಬರ್ 2021, 4:43 IST
Last Updated 15 ಡಿಸೆಂಬರ್ 2021, 4:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತುಮಕೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ಮೂಲಕ ಜಿಲ್ಲೆಯಲ್ಲಿ ತನ್ನ ಶಕ್ತಿಯನ್ನು ಹೆಚ್ಚಿಸಿಕೊಂಡಿದ್ದರೆ, ಜೆಡಿಎಸ್‌ಗೆ ಸ್ಥಾನ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.ಆಡಳಿತರೂಢ ಬಿಜೆಪಿಗೆ ತೀವ್ರ ಹಿನ್ನಡೆಯಾಗಿದೆ.

ಜಿಲ್ಲೆಯ ಕಾಂಗ್ರೆಸ್ ನಾಯಕರ ಒಗ್ಗಟ್ಟು ಗೆಲುವು ತಂದುಕೊಟ್ಟಿದೆ. ಶಾಸಕ ಡಾ.ಜಿ. ಪರಮೇಶ್ವರ, ಮುಖಂಡ ಟಿ.ಬಿ. ಜಯಚಂದ್ರ ಹಾಗೂ ಇತರ ನಾಯಕರು ಹಿಂದಿನ ಭಿನ್ನಾಭಿಪ್ರಾಯ ಮರೆತು ಒಟ್ಟಾಗಿ ಚುನಾವಣೆ ಎದುರಿಸಿದರು. ಆರಂಭದಿಂದ ಕೊನೆಯವರೆಗೂ ಪಕ್ಷದಲ್ಲಿ ಒಂದು ಸಣ್ಣ ಅಪಸ್ವರವೂ ಬರದಂತೆ ನೋಡಿಕೊಂಡಿದ್ದು ಗೆಲುವಿನ ದಡ ಸೇರಿಸಿದೆ.

ಮೂರು ಪಕ್ಷಗಳು ಯಾವುದೇ ವಿಚಾರಗಳನ್ನುಮುಂದಿಟ್ಟುಕೊಂಡು ಚುನಾವಣೆ ಎದುರಿಸಲಿಲ್ಲ. ತಮ್ಮ ‘ಶಕ್ತಿ’ಯನ್ನಷ್ಟೇ ನಂಬಿದ್ದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ಅವರು ಸಹಕಾರ ಸಂಸ್ಥೆಗಳ ಮುಖಾಂತರ ಮತದಾರರನ್ನು ತಲುಪುವ ಮೂಲಕ ತಮ್ಮ ಪುತ್ರ ಆರ್. ರಾಜೇಂದ್ರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ADVERTISEMENT

ಕಳೆದ ಬಾರಿ ಸೋತಿದ್ದ ಅನುಕಂಪವೂ ಒಂದಷ್ಟು ಮತಗಳನ್ನು ತಂದುಕೊಟ್ಟಿದೆ. ‘ಋಣ’ ಸಂದಾಯವೂ ನೆರವಿಗೆ ಬಂದಿದೆ. ಜೆಡಿಎಸ್‌ನಿಂದ ಹೊರಗೆ ಬಂದಿರುವ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್, ತುರುವೇಕೆರೆಯಲ್ಲಿ ಪರಿಷತ್ ಸದಸ್ಯ ಬೆಮಲ್ ಕಾಂತರಾಜ್ ಸಹ ಮತ ಕೊಡಿಸಿರುವುದು ಗೆಲುವಿನ ಮೆಟ್ಟಿಲೇರುವಂತೆ ಮಾಡಿದೆ.

ಬಿಜೆಪಿಗೆ ಹಿನ್ನಡೆ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಡೆದ ಶಿರಾ ಉಪ ಚುನಾವಣೆ, ವಿಧಾನ ಪರಿಷತ್ ಪದವೀಧರರ ಕ್ಷೇತ್ರ, ಶಿಕ್ಷಕರ ಕ್ಷೇತ್ರಗಳಲ್ಲಿ ಸರಣಿ ಗೆಲುವು ಸಾಧಿಸಿತ್ತು. ಆದರೆ, ಈ ಚುನಾವಣೆಯಲ್ಲಿ ಮುಗ್ಗರಿಸಿದೆ. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ಬಿ. ಸುರೇಶ್‌ಗೌಡ ನೇತೃತ್ವದಲ್ಲಿ ಹಿಂದಿನ ಚುನಾವಣೆಗಳು ನಡೆದಿದ್ದವು. ಈ ಬಾರಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ನಾಯಕತ್ವದಲ್ಲಿ ಚುನಾವಣೆ ಎದುರಿಸಿ ಸೋಲು ಕಂಡಿದೆ.

ಜಿಲ್ಲೆಯಲ್ಲಿ ಇಬ್ಬರು ಸಚಿವರು ಸೇರಿದಂತೆ ಐವರು ಶಾಸಕರು, ಇಬ್ಬರು ವಿಧಾನ ಪರಿಷತ್ ಸದಸ್ಯರು, ಕೇಂದ್ರ ಸಚಿವ ಸೇರಿ ಇಬ್ಬರು ಸಂಸದರು, ನಾಲ್ವರು ವಿವಿಧ ನಿಗಮ, ಮಂಡಳಿ ಅಧ್ಯಕ್ಷರನ್ನು ಒಳಗೊಂಡ ದೊಡ್ಡಮಟ್ಟದ ಅಧಿಕಾರದ ಬಲ ಬಿಜೆಪಿ ಬಳಿ ಇತ್ತು. ಇತರೆ ಎರಡು ಪಕ್ಷಗಳಿಗಿಂತ ಹೆಚ್ಚು ಶಕ್ತಿಯನ್ನು ಹೊಂದಿದೆ. ಕೇಂದ್ರ, ರಾಜ್ಯದಲ್ಲಿ ಆಡಳಿತ ನಡೆಸುವ ಮೂಲಕ ಅಧಿಕಾರವನ್ನು ತಮ್ಮ ಕೈಯಲ್ಲೇ ಕೇಂದ್ರೀಕರಿಸಿಕೊಂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲೆಗೆ ಬಂದು ಸಭೆ ನಡೆಸಿ ಗೆಲುವಿನತಂತ್ರಗಾರಿಕೆ ರೂಪಿಸಿದ್ದರು. ಒಗ್ಗಟ್ಟಿನ ಮಂತ್ರ ಜಪಿಸಿದ್ದರು. ಇಷ್ಟೆಲ್ಲ ‘ಶಕ್ತಿ– ಪ್ರಯತ್ನ’ ನಡೆಸಿದರೂ ಗೆಲುವುದಕ್ಕಿಸಿಕೊಳ್ಳಲು ಸಾಧ್ಯವಾಗಿಲ್ಲ.

‘ನಮ್ಮಲ್ಲಿ ದೊಡ್ಡ ಶಕ್ತಿ ಇದೆ. ಅಧಿಕಾರ ಬಲವಿದೆ. ಇಂತಹ ವಾತಾವರಣದಲ್ಲಿ ಈ ಚುನಾವಣೆಯಲ್ಲಿ ಸೋತರೆ ಅದಕ್ಕಿಂತನಾಚಿಕೆಗೇಡು ಮತ್ತೊಂದಿಲ್ಲ’ ಎಂದು ಸಚಿವ ಮಾಧುಸ್ವಾಮಿ ಸವಾಲು ಹಾಕಿದ್ದರು. ಮತದಾರರ ಮುಂದೆ ಯಾವ ಸವಾಲೂ ಕೆಲಸ ಮಾಡುವುದಿಲ್ಲ ಎಂಬುದು ಸಾಬೀತಾಗಿದೆ. ಚುನಾವಣೆ ತಂತ್ರಗಾರಿಕೆ ರೂಪಿಸುವಲ್ಲೂ ಬಿಜೆಪಿ ಮುಖಂಡರು ಎಡವಿರುವುದನ್ನು ಫಲಿತಾಂಶ ತೋರಿಸಿಕೊಟ್ಟಿದೆ. ಪಕ್ಷದ ಒಳೇಟು ಸಹ ಅಭ್ಯರ್ಥಿ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಗೌಡರು ಬಂದರೂ ಸಾಧ್ಯವಾಗಲಿಲ್ಲ: ಸತತ ಎರಡು ಬಾರಿ ಪರಿಷತ್‌ನಲ್ಲಿ ಗೆಲ್ಲುತ್ತಾ ಬಂದಿದ್ದ ಜೆಡಿಎಸ್‌ಗೆ ಈ ಸಲ ಅದೃಷ್ಟ ಕೈಕೊಟ್ಟಿದ್ದು, ಮೂರನೇ ಸ್ಥಾನಕ್ಕೆ ಕುಸಿದಿದೆ.

ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಲೋಕಸಭೆ ಸೋಲಿನ ನಂತರ ಜಿಲ್ಲೆಯಲ್ಲಿ ಮತ್ತೊಮ್ಮೆ ಸೋಲಿನ ಆಘಾತ ಎದುರಿಸಿದ್ದಾರೆ. ಜಿಲ್ಲೆಗೆ ಬಂದು ಪ್ರಚಾರ ಮಾಡಿ, ಬಹುತೇಕ ತಾಲ್ಲೂಕುಗಳಲ್ಲಿ ಸುತ್ತಾಡಿದರು.ಜಿಲ್ಲೆಯ ಉಸ್ತುವಾರಿಯನ್ನು ನಾನೇ ವಹಿಸಿಕೊಂಡಿದ್ದು, ‘ಲೋಕಸಭೆಯಲ್ಲಿ ನನ್ನ ಸೋಲಿಗೆ ಕಾರಣರಾದವರಿಗೆ ತಕ್ಕ ಪಾಠ ಕಲಿಸಬೇಕು’ ಎಂದು ಪ್ರಚಾರದ ಸಮಯದಲ್ಲಿ ಹೇಳಿಕೊಂಡು ಬಂದರು. ಆದರೆ, ಈ ಯಾವ ವಿಚಾರಗಳೂ ಪ್ರಭಾವ ಬೀರಿದಂತೆ ಕಾಣುತ್ತಿಲ್ಲ.

ಸ್ಥಳೀಯ ಸಂಸ್ಥೆಗಳಲ್ಲಿ ಇತರೆ ಪಕ್ಷಗಳಿಗಿಂತ ಜೆಡಿಎಸ್ ಬೆಂಬಲಿಗರ ಸಂಖ್ಯೆ ಹೆಚ್ಚಿದೆ. ಗ್ರಾಮೀಣ ಮಟ್ಟದಲ್ಲಿ ಪಕ್ಷ ಗಟ್ಟಿಯಾಗಿದ್ದು, ಕಾರ್ಯಕರ್ತರು ಇದ್ದಾರೆ. ಆದರೆ, ಇರುವ ಶಕ್ತಿಯನ್ನು ಬಳಸಿಕೊಳ್ಳುವ ನಾಯಕರ ಕೊರತೆಯನ್ನು ಎದುರಿಸುತ್ತಿದೆ.

ಜಿಲ್ಲೆಯಲ್ಲಿ ಪಕ್ಷ ಮುನ್ನಡೆಸುವ ನಾಯಕರಿಲ್ಲದೆ ಸೊರಗಿದ್ದು, ಇದರ ಪರಿಣಾಮ ಚುನಾವಣೆ ಫಲಿತಾಂಶದ ಮೇಲೆ ಬೀರಿದೆ. ಚುನಾವಣೆ ಹೊಸ್ತಿಲಲ್ಲಿ ಶಾಸಕ ಎಸ್.ಆರ್. ಶ್ರೀನಿವಾಸ್ ಅವರನ್ನು ಪಕ್ಷದಿಂದ ದೂರ ತಳ್ಳಿದ್ದು, ಪರಿಷತ್ ಸದಸ್ಯ ಬೆಮಲ್ ಕಾಂತರಾಜು ದೂರ ಸರಿದಿದ್ದು ಹಿನ್ನಡೆಗೆ ದಾರಿ ಮಾಡಿಕೊಟ್ಟಿತು. ಜಿಲ್ಲಾ ಮಟ್ಟದ ನಾಯಕರು ಗೆಲುವಿಗೆ ಬೇಕಾದ ತಂತ್ರಗಾರಿಕೆಯನ್ನೇ ರೂಪಿಸಲಿಲ್ಲ. ಜಿಲ್ಲಾ ಮಟ್ಟದಲ್ಲಿ ನಾಯಕರ ಕೊರತೆಯಿಂದಾಗಿ ಪಕ್ಷ ದಿನದಿಂದ ದಿನಕ್ಕೆ ಸೊರಗುತ್ತಿದೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.