
ತುಮಕೂರಿನಲ್ಲಿ ಶನಿವಾರ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ವತಿಯಿಂದ ‘ತಲ್ಲಣಿಸದಿರು ಮನವೇ’ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ತುಮಕೂರು: ಸಂವಿಧಾನ ಸರ್ವರಿಗೂ ಸಮಾನ ಅವಕಾಶ ಮತ್ತು ಅಧಿಕಾರ ಕೊಟ್ಟಿದೆ ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಶ್ರೀದೇವಿ ವೈದ್ಯಕೀಯ ಕಾಲೇಜಿನಲ್ಲಿ ಶನಿವಾರ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ವತಿಯಿಂದ ಆಯೋಜಿಸಿದ್ದ ‘ತಲ್ಲಣಿಸದಿರು ಮನವೇ’ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂಬೇಡ್ಕರ್ ಅವರು ಗಾಂಧಿ, ಬುದ್ಧ, ಬಸವ, ಕನಕದಾಸ, ಬಸವಣ್ಣ ಮುಂತಾದ ಮಹನೀಯರ ವಿಚಾರ ಧಾರೆ ತಿಳಿದುಕೊಂಡಿದ್ದರು. ಸಂವಿಧಾನದ ಮೂಲಕ ಅದನ್ನು ಗಟ್ಟಿಧ್ವನಿಯಲ್ಲಿ ಹೇಳಿ ಸಮಾಜದಲ್ಲಿ ಜಾಗೃತಿ ಮೂಡಿಸಿದರು. ‘ತಲ್ಲಣಿಸದಿರು ಮನವೇ’ ಕಾರ್ಯಕ್ರಮಕ್ಕೆ ಸಮಾಜದ ಎಲ್ಲ ಸಮುದಾಯಗಳ ಬೆಂಬಲ, ಸಹಕಾರ ದೊರೆಯುತ್ತಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ, ‘ನಾವು ದೇಶದ ಸಂಸ್ಕೃತಿ, ಪರಂಪರೆ ಬಗ್ಗೆ ಮಾತನಾಡುತ್ತೇವೆ. ಆದರೆ ಸಮಾಜದ ಕಟ್ಟಕಡೆಯ ವ್ಯಕ್ತಿ ಅನುಭವಿಸುವ ನೋವು, ಅಪಮಾನ, ಅವಮಾನದ ಕುರಿತು ಧ್ವನಿ ಎತ್ತುವುದಿಲ್ಲ. ವಿಜ್ಞಾನ–ತಂತ್ರಜ್ಞಾನ, ಶಿಕ್ಷಣದಲ್ಲಿ ಭಾರತ ಬೆಳೆಯುತ್ತಿದೆ. ಇದೇ ಸಮಯದಲ್ಲಿ ಒಬ್ಬ ಹೆಣ್ಣು ಮಗಳಿಗೆ ಅವಮಾನವಾಗುವಂತೆ ನಡೆಸಿಕೊಂಡರೆ ಶಿಕ್ಷಣ ಪಡೆದು ಏನು ಪ್ರಯೋಜನ. ನಮ್ಮ ನಡತೆ ಸರಿ ಹೋಗದಿದ್ದರೆ ಸಮಾಜ ಹೀಗೆಯೇ ಮುಂದುವರಿಯುತ್ತದೆ’ ಎಂದು ವಿಷಾದಿಸಿದರು.
ಪರಮೇಶ್ವರ ಸಜ್ಜನ, ಪಿಎಚ್.ಡಿ ಮಾಡಿದ್ದಾರೆ, ಆಸ್ಟ್ರೇಲಿಯಾದಲ್ಲಿ ಓದಿದ್ದಾರೆ ಎಂದು ನನ್ನ ಬಗ್ಗೆ ಮೆಚ್ಚುಗೆಯ ಮಾತನಾಡುತ್ತಾರೆ. ಆದರೆ ದಲಿತರಲ್ಲಿ ಹುಟ್ಟಬಾರದಿತ್ತು. ಅದೊಂದು ತಪ್ಪು ಎನ್ನುತ್ತಾರೆ. ಇದಕ್ಕೆ ಏನು ಉತ್ತರ ಕೊಡಬೇಕು. ಯಾವ ಆದರ್ಶ ನಿಮಗೆ ಸಮಾನತೆ ಪ್ರತಿಪಾದಿಸುತ್ತದೆ. ಗಾಂಧೀಜಿ ಹೆಸರನ್ನು ತೆಗೆದು ಆಚೆ ಬಿಸಾಕುವ ಸ್ಥಿತಿಗೆ ಬಂದಿದ್ದೇವೆ. ಯಾವ ಭಾರತದಲ್ಲಿ ನಾವಿದ್ದೇವೆ ಎಂದು ಪ್ರಶ್ನಿಸಿದರು.
ಕೃತಕ ಬುದ್ಧಿಮತ್ತೆ (ಎಐ) ಕಟ್ಟಿಕೊಂಡು ನನಗೆ ಏನಾಗಬೇಕು. ನನಗೆ ಸಮಾನತೆ ಬೇಕು. ದೇವಸ್ಥಾನಕ್ಕೆ ಹೋಗೋಣ ನಡಿ, ಯಾವ ದೇವರೂ ನಿನ್ನ ದೂರ ಮಾಡುವುದಿಲ್ಲ ಎಂಬ ಬುದ್ಧಿಮತ್ತೆ ಎಲ್ಲಿಗೆ ಹೋಗಿದೆ. ನಾವು ಯಾವ ದಿಕ್ಕಿನಲ್ಲಿ ಸಾಗುತ್ತಿದ್ದೇವೆ. ಗಾಂಧೀಜಿ, ಬುದ್ಧ, ಬಸವ, ಕನಕದಾಸರು ಸೇರಿ ಆದರ್ಶ ಸಾರಿದ ಅನೇಕರು ಇದನ್ನೇ ಹೇಳಿದರೆ? ಪ್ರತಿಯೊಬ್ಬರು ಈ ಪ್ರಶ್ನೆ ಹಾಕಿಕೊಳ್ಳಬೇಕು ಎಂದರು.
ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್, ಕಾರ್ಯಕ್ರಮದ ಸಂಯೋಜಕ ಮಂಜಪ್ಪ ಮಾಗೋಡಿ, ಪ್ರಾಧ್ಯಾಪಕ ಬಿ.ಸಿ.ನಾಗೇಂದ್ರ ಕುಮಾರ್ ಮೊದಲಾದವರು ಪಾಲ್ಗೊಂಡಿದ್ದರು.
ಎಲ್ಲರ ಹೃದಯ ತಟ್ಟುವ ಕನಕ
‘ನಮ್ಮಲ್ಲಿ ದಾಸರ ದೊಡ್ಡ ಪರಂಪರೆಯೇ ಇದೆ. ಶಂಕರಾಚಾರ್ಯರು ಪ್ರತಿಪಾದಿಸಿದ ಅದ್ವೈತದ ಸಿದ್ಧಾಂತದ ಶ್ರೇಷ್ಠವಾದ ತಿರುಳು ಕನಕದಾಸರ ರಚನೆಯಲ್ಲಿ ಅತ್ಯಂತ ಸರಳವಾದ ಭಾಷೆಯಲ್ಲಿ ಸಿಗುತ್ತದೆ. ಅವರ ಚಿಂತನೆ ಎಲ್ಲರ ಹೃದಯ ತಟ್ಟುವಂತದ್ದು’ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತಿ ತಿಳಿಸಿದರು. ಪತ್ರಕರ್ತ ದಿನೇಶ್ ಅಮಿನ್‌ಮಟ್ಟು ‘ಎನ್‌ಸಿಆರ್‌ಬಿ ಅಂಕಿ–ಅಂಶದ ಪ್ರಕಾರ ದೇಶದಲ್ಲಿ ದಿನಕ್ಕೆ 16 ದಲಿತರ ಕೊಲೆಯಾಗುತ್ತಿದೆ. ನಾಲ್ವರು ದಲಿತ ಹೆಣ್ಣು ಮಕ್ಕಳು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ಪ್ರತಿ ಗಂಟೆಗೆ 13 ಮಂದಿ ಪರಿಶಿಷ್ಟರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. ಈಚೆಗೆ ಹುಬ್ಬಳ್ಳಿಯಲ್ಲಿ ದಲಿತ ಯುವಕನನ್ನು ಮದುವೆಯಾದ ಅನ್ಯ ಜಾತಿ ಹುಡುಗಿಯನ್ನು ಅವರ ತಂದೆಯೇ ಕೊಚ್ಚಿ ಕೊಲೆ ಮಾಡಿದ್ದಾರೆ. ಅಸ್ಪೃಶ್ಯತೆ ನಿವಾರಣೆ ಆಗಿದೆಯಾ?’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.