ADVERTISEMENT

ಅಗ್ನಿ ಶಾಮಕ ಠಾಣೆ ಬಳಿ ಮೇಲ್ಸೇತುವೆ ನಿರ್ಮಾಣ

ರಸ್ತೆ ಸುರಕ್ಷತಾ ನಿಯಮಗಳ ಕುರಿತ ಜಾಗೃತಿ ಮತ್ತು ಜನಸಂಪರ್ಕ ಸಭೆಯಲ್ಲಿ ಕೆಎಸ್ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರಕುಮಾರ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2019, 15:59 IST
Last Updated 20 ಜೂನ್ 2019, 15:59 IST
ಜನಸಂಪರ್ಕ ಸಭೆಯಲ್ಲಿ ಕೆಎಸ್‌ಆರ್‌ಟಿಸಿ ತುಮಕೂರು ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರಕುಮಾರ ಮಾತನಾಡಿದರು. ವಿಜಯಲಕ್ಷ್ಮಿ, ಫಕ್ರುದ್ಧೀನ್, ರಮೇಶ್ ನಾಯ್ಕ್ ಇದ್ದರು
ಜನಸಂಪರ್ಕ ಸಭೆಯಲ್ಲಿ ಕೆಎಸ್‌ಆರ್‌ಟಿಸಿ ತುಮಕೂರು ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರಕುಮಾರ ಮಾತನಾಡಿದರು. ವಿಜಯಲಕ್ಷ್ಮಿ, ಫಕ್ರುದ್ಧೀನ್, ರಮೇಶ್ ನಾಯ್ಕ್ ಇದ್ದರು   

ತುಮಕೂರು: ನಗರದ ಕ್ಯಾತಸಂದ್ರ-ಬಟವಾಡಿ ನಡುವೆ ಅಗ್ನಿ ಶಾಮಕ ಠಾಣೆಯ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇಲ್ಸೆತುವೆ (ಸ್ಕೈ ವಾಕ್‌) ನಿರ್ಮಾಣಕ್ಕೆ ಹೈಕೋರ್ಟ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಆದೇಶಿಸಿದ್ದು, ಸೇತುವೆ ನಿರ್ಮಾಣಕ್ಕೆ ರಸ್ತೆ ವಿಸ್ತರಣೆ ಕಾಮಗಾರಿಗೆ 1 ವರ್ಷ ಕಾಲಾವಕಾಶ ಬೇಕಾಗುತ್ತದೆ ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ತುಮಕೂರು ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರಕುಮಾರ್ ತಿಳಿಸಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯ ಆಶ್ರಯದಲ್ಲಿ ಬುಧವಾರ ಸಂಜೆ ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ ‘ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಅರಿವು ಹಾಗೂ ಜನ ಸಂಪರ್ಕ ಸಭೆ" ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಲು ನಮ್ಮ ಸಂಸ್ಥೆ ಹಗಲಿರುಳು ಶ್ರಮಿಸುತ್ತಿದೆ. ಅಗ್ನಿಶಾಮಕ ಠಾಣೆ ಬಳಿ ಬಸ್ ನಿಲುಗಡೆಗೆ ಸಾರ್ವಜನಿಕರ ಮನವಿ ಮೇರೆಗೆ ಹೈಕೋರ್ಟ್ ಮೇಲ್ಸೇತುವೆ ನಿರ್ಮಾಣಕ್ಕೆ ಆದೇಶಿಸಿದೆ’ ಎಂದು ಹೇಳಿದರು.

ADVERTISEMENT

ನಗರ ಠಾಣೆ ಸಬ್‌ ಇನ್‌ಸ್ಪೆಕ್ಟರ್ ವಿಜಯಲಕ್ಷ್ಮಿ ಮಾತನಾಡಿ, ‘ರಸ್ತೆ ಸುರಕ್ಷತೆ ಬಗ್ಗೆ, ಸುರಕ್ಷಿತ ಸಂಚಾರದ ಬಗ್ಗೆ ಎಲ್ಲರೂ ಎಚ್ಚರಿಕೆ ವಹಿಸಬೇಕು. ಪ್ರತಿ ದಿನ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ವಾಹನ ಚಾಲನೆ ಮಾಡುವಾಗ ಎಚ್ಚರಿಕೆವಹಿಸಬೇಕು. ನಮ್ಮ ಹಾಗೂ ಇತರರ ಸುರಕ್ಷತೆಯೂ ಬಹು ಮುಖ್ಯ’ ಎಂದು ಹೇಳಿದರು.

‘ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಬಾರದು. ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸಲೇಬಾರದು. ವಿರುದ್ಧ ದಿಕ್ಕಿನಿಂದ ಬರುವ ವಾಹನ ಚಾಲಕರ, ಪಾದಚಾರಿಗಳ ಚಲನವಲನಗಳನ್ನು ಗಮನಿಸಿ ವಾಹನಗಳನ್ನು ಚಲಾಯಿಸಬೇಕು’ ಎಂದು ತಿಳಿಸಿದರು.

ವಿಭಾಗಿಯ ಸಂಚಾರ ಅಧಿಕಾರಿ ಫಕ್ರುದ್ದೀನ್ ಮಾತನಾಡಿ, ‘ರಸ್ತೆ ಅಪಘಾತ ತಡೆಗಟ್ಟುವುದರಲ್ಲಿ ಸಾರ್ವಜನಿಕರ ಪಾತ್ರ ಮಹತ್ವವಾದುದು. ಗ್ರಾಮೀಣ ರಸ್ತೆಗಳಲ್ಲಿ ಸಂಭವಿಸುವ ಬೈಕ್ ಸವಾರರ ಅಪಘಾತಗಳಿಂದ ಮರಣ ಪ್ರಮಾಣ ಹೆಚ್ಚಾಗುತ್ತಿವೆ. ರಾತ್ರಿ ಸಮಯದಲ್ಲಿ ಚಾಲನೆ ಮಾಡುವಾಗ ಹೆಚ್ಚು ಜಾಗರೂಕರಾಗಿರಲು ಹಾಗೂ ರಸ್ತೆ ಬದಿ ನಿಲ್ಲಿಸಿರುವ ಇತರೆ ವಾಹನಗಳ ಬಗ್ಗೆ ಎಚ್ಚರ ವಹಿಸಿ ಚಾಲನೆ ಮಾಡುವುದು ಸೂಕ್ತ’ ಎಂದು ತಿಳಿಸಿದರು.

ಗೋಕುಲ ಬಡವಾಣೆ ನಿವಾಸಿ ನಚಿಕೇತ್ ಮಾತನಾಡಿ, ‘ರಸ್ತೆ ಸುರಕ್ಷತೆ ಬಗ್ಗೆ ಮಕ್ಕಳಿಗೆ ಪಠ್ಯ ಪುಸ್ತಕಗಳಲ್ಲಿ ಮಾಹಿತಿ ನೀಡಬೇಕು.ದ್ವಿಚಕ್ರವಾಹನ ಸವಾರರು ಹೆಲ್ಮೆಟ್ ಧರಿಸಿ ಸುರಕ್ಷಿತವಾಗಿ ಪ್ರಯಾಣಿಸಬೇಕು’ ಎಂದು ಸಲಹೆ ನೀಡಿದರು.

ನಗರದ ಹಲವಾರು ನಿವಾಸಿಗಳು ತಮ್ಮ ಅಹವಾಲುಗಳನ್ನು ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಸಹಾಯಕ ಸಂಚಾರ ಅಧಿಕಾರಿ ಮಂಜುನಾಥ್ ,ಕಾನೂನಾಧಿಕಾರಿ ಸವಿತಾ, ಸಾರ್ವಜನಿಕ ಪ್ರತಿನಿಧಿ ಹಾಗೂ ವಕೀಲ ರಮೇಶ್ ನಾಯ್ಕ್ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.