ಕುಣಿಗಲ್: ತಾಲ್ಲೂಕಿನ ಅಂಚೇಪಾಳ್ಯ ಕೈಗಾರಿಕಾ ಪ್ರದೇಶದಲ್ಲಿರುವ ವೀನರ್‌ಬರ್ಗರ್ ಇಂಡಿಯಾ ಸಿಎಸ್ಆರ್ ನಿಧಿಯಿಂದ ತಾಲ್ಲೂಕಿನ ಯಡಿಯೂರಿನಲ್ಲಿ ದಾಸೋಹ ಸೇವಾ ಸಮಿತಿ ಸಿಬ್ಬಂದಿಗಳಿಗೆ ₹1.22 ಕೋಟಿ ವೆಚ್ಚದಲ್ಲಿ 19 ಮನೆಗಳನ್ನು ನಿರ್ಮಿಸಿದ್ದು, ಬುಧವಾರ ನಡೆದ ಕಾರ್ಯಕ್ರಮದಲ್ಲಿ ಮಾನವ ಸಂಪನ್ಮೂಲ ಅಧಿಕಾರಿ ಹೇಮಂತ್ ಮನೆಗಳನ್ನು ಹಸ್ತಾಂತರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೀನರ್‌ಬರ್ಗರ್ ಇಂಡಿಯಾ, ಟರ್ಕಿ ಆಂಡ್ ಎಕ್ಸ್‌ಪೋರ್ಟ್ ಮಾರ್ಕೆಟ್, ಏಷ್ಯಾ ಸಿಒಒ ಮೊನ್ನಂಡ ಅಪ್ಪಯ್ಯ, ‘ಹಸಿರು ಕಟ್ಟಡ ನಿರ್ಮಾಣ ಪ್ರಮುಖ ಪೂರೈಕೆದಾರ ವೀನರ್‌ಬರ್ಗರ್ ಇಂಡಿಯಾ ಸಿಎಸ್ಆರ್ ನಿಧಿಯಿಂದ 19 ಪರಿಸರ ಸ್ನೇಹಿ ಮತ್ತು ಕೈಗೆಟಕುವ ದರದ ಮನೆಗಳನ್ನು ನಿರ್ಮಿಸಿದೆ. 2024ರ ಜನವರಿಯಲ್ಲಿ ಪ್ರಾರಂಭವಾಗಿ ಡಿಸೆಂಬರ್‌ನಲ್ಲಿ ಪೂರ್ಣಗೊಂಡ ಈ ಯೋಜನೆಯು ಬಿಪಿಎಲ್ ಕುಟುಂಬಗಳಿಗೆ ಕೈಗೆಟುಕುವ ಬೆಲೆಯಲ್ಲಿ ಗುಣಮಟ್ಟದ ನೈಸರ್ಗಿಕ ವಸತಿಗಳನ್ನು ಒದಗಿಸುವ ಗುರಿ ಹೊಂದಿದೆ. ಈ ಮನೆಗಳ ನಿರ್ಮಾಣಕ್ಕಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯುತ್ತಮ ಹಸಿರು ಕಟ್ಟಡ ಸಾಮಗ್ರಿಗಳನ್ನು ಬಳಸಲಾಗಿದೆ ಎಂದರು.
ದೇಶದಾದ್ಯಂತ ಅಗತ್ಯವಿರುವ ಜನರಿಗೆ ಕೈಗೆಟುಕುವ ಬೆಲೆಯಲ್ಲಿ ಗುಣಮಟ್ಟದ, ಬಾಳಿಕೆ ಬರುವ ಮತ್ತು ನೈಸರ್ಗಿಕ ವಸತಿಗಳನ್ನು ನಿರ್ಮಿಸಲು ಯೋಜಿಸಿದ್ದು, ಸರ್ಕಾರಗಳು ಕೈಜೋಡಿಸಿದರೆ ಅನೇಕರಿಗೆ ಮನೆಗಳನ್ನು ನಿರ್ಮಿಸಲು ಸಹಕಾರಿಯಾಗುತ್ತದೆ ಎಂದರು.
‘40 ಮಂದಿ ದಾಸೋಹ ಸಿಬ್ಬಂದಿಗಳು ನಿವೇಶನ ಖರೀದಿಸಿ ಹಲವು ವರ್ಷ ಕಳೆದಿತ್ತು. ಶಕ್ತರು ಮನೆಗಳನ್ನು ನಿರ್ಮಿಸಿಕೊಂಡಿದ್ದರು. ಅಶಕ್ತರು ಮನೆ ನಿರ್ಮಾಣದ ಕನಸು, ಕನಸಾಗಿಯೇ ಉಳಿದಿದ್ದು, ವೀನರ್‌ಬರ್ಗರ್ ಇಂಡಿಯಾ ಸಂಸ್ಥೆ ಅಶಕ್ತ 19 ಕುಟುಂಬಗಳಿಗೆ ಸಕಲ ಸೌಲಭ್ಯಗಳ ಮನೆಗಳನ್ನು ನಿರ್ಮಿಸಿಕೊಟ್ಟಿದೆ’ ಎಂದು ಅಂಗವಿಕಲ ನಾಗರಾಜ್, ದಾಸೋಹ ಸಿಬ್ಬಂದಿ ಶಿವಲೀಲಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.