ADVERTISEMENT

ಅಡುಗೆ ಅನಿಲ ಪೂರೈಕೆಗೆ ಚಾಲನೆ

2021ರ ಒಳಗೆ ಎಲ್ಲ ಮನೆಗಳಿಗೂ ಪೈಪ್‌ಲೈನ್ ಮೂಲಕ ಗ್ಯಾಸ್ ಪೂರೈಕೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 19:30 IST
Last Updated 16 ಆಗಸ್ಟ್ 2019, 19:30 IST
ಗ್ಯಾಸ್ ಸ್ಟೌ ಹಚ್ಚುವ ಮೂಲಕ ಪೈಪ್‌ಲೈನ್ ಮೂಲಕ ಅಡುಗೆ ಅನಿಲ ಪೂರೈಕೆ ಯೋಜನೆಗೆ ಶಾಸಕ ಬಿ.ಜಿ.ಜ್ಯೋತಿಗಣೇಶ್ ಚಾಲನೆ ನೀಡಿದರು
ಗ್ಯಾಸ್ ಸ್ಟೌ ಹಚ್ಚುವ ಮೂಲಕ ಪೈಪ್‌ಲೈನ್ ಮೂಲಕ ಅಡುಗೆ ಅನಿಲ ಪೂರೈಕೆ ಯೋಜನೆಗೆ ಶಾಸಕ ಬಿ.ಜಿ.ಜ್ಯೋತಿಗಣೇಶ್ ಚಾಲನೆ ನೀಡಿದರು   

ತುಮಕೂರು: ನಗರದ ಮನೆಗಳಿಗೆ ಪೈಪ್‌ಲೈನ್ ಮೂಲಕ ಅಡುಗೆ ಅನಿಲ ಸರಬರಾಜು ಮಾಡುವ ಕಾರ್ಯಕ್ಕೆ ಶುಕ್ರವಾರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಮೇಯರ್ ಲಲಿತಾ ರವೀಶ್, ಪಾಲಿಕೆ ಆಯುಕ್ತ ಭೂಬಾಲನ್ ಚಾಲನೆ ನೀಡಿದರು.

ನಗರದ 26ನೇ ವಾರ್ಡ್‌ನ ಜಯಮ್ಮ ಕವನಯ್ಯ ಅವರ ಮನೆಯ ಗ್ಯಾಸ್‌ ಸ್ಟೌ ಚಾಲನೆಗೊಳಿಸಲಾಯಿತು. ಆ ಮೂಲಕ ನಗರದಲ್ಲಿ ಮೇಘಾ ಎಂಜಿನಿಯರಿಂಗ್ ಕಂಪನಿ ಮತ್ತು ಭವಿತ್ ಕನ್ಟ್ರಕ್ಷನ್ ಸಹಯೋಗದಲ್ಲಿ ನಿರ್ಮಾಣಗೊಂಡಿರುವ ಮನೆ ಮನೆಗೆ ಪೈಪ್ ಲೈನ್ ಮೂಲಕ ಅಡುಗೆ ಅನಿಲ ಸರಬರಾಜು ಮಾಡುವ ಕಾರ್ಯಕ್ಕೆ ಚಾಲನೆ ದೊರೆಯಿತು.

ಶಾಸಕ ಜಿ.ಬಿ.ಜೋತಿಗಣೇಶ್ ಮಾತನಾಡಿ, ಬಾಂಬೆಯಿಂದ ಬೆಂಗಳೂರಿಗೆ ಪೈಪ್‌ಲೈನ್ ಮೂಲಕ ಗೇಲ್ ಕಂಪನಿಯವರು ಗ್ಯಾಸ್ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಅಂದಿನ ಸಂಸದರಾಗಿದ್ದ ಜಿ.ಎಸ್.ಬಸವರಾಜು ಅವರು ತುಮಕೂರಿನ ಮನೆ ಮನೆಗೆ ಕೊಳಾಯಿ ಮೂಲಕ ಅಡುಗೆ ಅನಿಲ ಪೂರೈಸುವ ಯೋಜನೆಗೆ ಮಂಜೂರಾತಿ ಪಡೆದಿದ್ದರು. ಆ ಭಾಗವಾಗಿ ಇಂದು ನಗರದಲ್ಲಿ ಈ ಯೋಜನೆ ಜಾರಿಗೆ ಬಂದಿದೆ. 2021ರ ವೇಳೆ ನಗರದ ಎಲ್ಲ ಮನೆಗಳಿಗೆ ಈ ಯೋಜನೆ ವಿಸ್ತಾರಗೊಳ್ಳಲಿದೆ ಎಂದರು.

ADVERTISEMENT

ಮೇಯರ್ ಲಲಿತಾ ರವೀಶ್ ಮಾತನಾಡಿ, ‘ಇದು ಒಳ್ಳೆಯ ಯೋಜನೆ. ಸ್ಮಾರ್ಟ್‌ಸಿಟಿ ಆಗುತ್ತಿರುವ ತುಮಕೂರು ಮತ್ತಷ್ಟು ಸುಸಜ್ಜಿತವಾಗಿ ಹೊಗೆ ರಹಿತ ನಗರವಾಗಲು ಸಹಕಾರಿ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಮೇಘಾ ಎಂಜಿನಿಯರಿಂಗ್ ಕಂಪನಿಯ ಅಜೇಯ್ ರೆಡ್ಡಿ, ನಗರದ ಪ್ರತಿ ಮನೆಗೆ 2021ರ ಒಳಗೆ ಗ್ಯಾಸ್ ಪೈಪ್‌ಲೈನ್ ಅಳವಡಿಸುವ ಗುತ್ತಿಗೆ ಪಡೆದಿದ್ದೇವೆ. ಸಿಲಿಂಡರ್ ಮೂಲಕ ಗ್ಯಾಸ್ ಪಡೆಯುವುದಕ್ಕೆ ಹೋಲಿಸಿದರೆ ಇದು ಅತ್ಯಂತ ಸುರಕ್ಷಿತ ಮತ್ತು ಉಳಿತಾಯದಾಯಕ ಎಂದರು.

ಈಗಾಗಲೇ ಗೋಕುಲ, ಸಪ್ತಗಿರಿ, ಜಯನಗರ, ಉಪ್ಪಾರಹಳ್ಳಿ, ಎಸ್.ಐ.ಟಿ, ಸಿದ್ದರಾಮೇಶ್ವರ ಬಡಾವಣೆ ಸೇರಿದಂತೆ ನಗರದ ಶೇ 40 ರಷ್ಟು ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ತೊಂದರೆ ಆದರೆ ಅರ್ಧ ಗಂಟೆಯೊಳಗೆ ಸರಿಪಡಿಸುವ ಕೆಲಸವನ್ನು ಕಂಪನಿ ಮಾಡಲಿದೆ ಎಂದು ಭರವಸೆ ನೀಡಿದರು.

26ನೇ ವಾರ್ಡ್ ಸದಸ್ಯ ಮಲ್ಲಿಕಾರ್ಜುನ, 26ನೇ ವಾರ್ಡ್‌ ಪ್ರಾಯೋಗಿಕವಾಗಿ ಅನೇಕ ಹೊಸ ಯೋಜನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಇತರ ವಾರ್ಡ್‌ಗಳಿಗೆ ಮಾದರಿ ಆಗಿದೆ ಎಂದರು.

ಮುಖಂಡರಾದ ಚಂದ್ರಪ್ಪ, ಕೊಪ್ಪಲ್‌ ನಾಗರಾಜು, ಭವಿತ ಕನ್ಟ್ರಕ್ಷನ್‌ನ ಅಲ್ಲಮಪ್ರಭು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.