ತುಮಕೂರಿನಲ್ಲಿ ಭಾನುವಾರ ನಡೆದ ಭಾರತ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮವನ್ನು ಚಿಂತಕ ಜಿ.ರಾಮಕೃಷ್ಣ ತಮಟೆ ಬಾರಿಸುವ ಮೂಲಕ ಉದ್ಘಾಟಿಸಿದರು. ಎನ್.ಕೆ.ಸುಬ್ರಮಣ್ಯ, ಟಿ.ಆರ್.ರೇವಣ್ಣ, ಸಿ.ಯತಿರಾಜು, ಸಾತಿ ಸುಂದರೇಶ್, ಎನ್.ಎಸ್.ಸ್ವಾಮಿ, ಗಿರೀಶ್, ಎ.ಗೋವಿಂದರಾಜು ಹಾಜರಿದ್ದರು
ತುಮಕೂರು: ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಹೊರಗಿನವರು ನಮ್ಮ ಸಂಪತ್ತು ಲೂಟಿ ಮಾಡುತ್ತಿದ್ದರು, ಈಗ ರಾಷ್ಟ್ರದ ಒಳಗಿನವರೇ ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಚಿಂತಕ ಜಿ.ರಾಮಕೃಷ್ಣ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಭಾರತ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ಶತಮಾನೋತ್ಸವ ಸಂಭ್ರಮ ಸಮಾರಂಭದಲ್ಲಿ ಮಾತನಾಡಿದರು.
ದೇಶದ ಪರಿಸ್ಥಿತಿ ಏನಾಗಿದೆ ಎಂಬುವುದು ಎಲ್ಲರಿಗೂ ಗೊತ್ತಿದೆ. ಆದರೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ನಮಗೆ ನಾವು ಹೇಳಿಕೊಂಡು, ಮಿತ್ರಪಕ್ಷ ಬಲಪಡಿಸಿ ಮುನ್ನಡೆಯಬೇಕು. ಸಿಪಿಐ ಆಶಯ ಪೂರೈಸುವುದಕ್ಕೆ ಕಂಕಣ ಬದ್ಧರಾಗಿರಬೇಕು. ಪಕ್ಷದ ತ್ಯಾಗ, ಬಲಿದಾನ, ಹೋರಾಟದ ಪರಂಪರೆ ಮುಂದುವರಿಸಬೇಕು ಎಂದು ಕರೆ ನೀಡಿದರು.
ಯಾವುದೋ ಒಂದು ದೇಶದ ಅಧ್ಯಕ್ಷ ಯುದ್ಧ ನಿಲ್ಲಿಸಿ ಎಂದ ತಕ್ಷಣ ಭಾರತ ಯುದ್ಧ ನಿಲ್ಲಿಸುತ್ತದೆ. ದೇಶದಿಂದ ಒಂದು ಪ್ರತಿಕ್ರಿಯೆ ಬೇಡವೇ?ದೇಶಕ್ಕೆ ಅಷ್ಟು ಸಾರ್ವಭೌಮತ್ವ ಇಲ್ಲವೇ? ರಾಷ್ಟ್ರದ ಪ್ರಜೆಗಳನ್ನು ಪ್ರತಿನಿಧಿಸುವವರಿಗೆ ನಾಚಿಕೆ ಆಗುವುದಿಲ್ಲವೇ? ಎಂದು ಕಿಡಿಕಾರಿದರು.
ಪ್ರಸ್ತುತ ದೇಶ ಎದುರಿಸುತ್ತಿರುವ ವಿಪತ್ತುಗಳ ನಿವಾರಣೆಗೆ ನಾವು ಸಿದ್ಧರಾಗಬೇಕು. ಜನಪರ ಕಾಳಜಿ ಹೊಂದಿರುವ ಹೋರಾಟ ರೂಪಿಸಬೇಕು. 100 ವರ್ಷದ ಹಿಂದೆ ಸ್ಥಾಪಿಸಿದ ಪಕ್ಷ ಇಂದಿಗೂ ಕುಂಟುತ್ತಾ ಸಾಗುತ್ತಿದೆ. ಇದರಲ್ಲಿ ನಮ್ಮ ತಪ್ಪು ಸಹ ಇದೆ. ಹಿಂದಿನ ತಪ್ಪು ತಿದ್ದಿಕೊಂಡು ಮುಂದೆ ಸಾಗಲು ಇದು ಸಕಾಲ ಎಂದು ಅಭಿಪ್ರಾಯಪಟ್ಟರು.
ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್, ‘ಬಿಳಿಯ ಬಂಡವಾಳಶಾಹಿಗಳು ದೇಶ ಬಿಟ್ಟು ಹೋದರು, ಕರಿಯ ಬಂಡವಾಳಶಾಹಿಗಳು ದೇಶ ಆಳಲು ಶುರು ಮಾಡಿದರು. ಬೆಂಕಿ ಪೊಟ್ಟಣದಿಂದ ಹಿಡಿದು ಚಹಾ ಪುಡಿಯ ವರೆಗೆ ಜಿಎಸ್‌ಟಿ ವಿಧಿಸಲಾಗುತ್ತದೆ. ಇದರ ಬಗ್ಗೆ ಚರ್ಚಿಸದೆ ಹಿಂದೂ, ಮುಸ್ಲಿಂ ಧರ್ಮದ ಹೆಸರಿನಲ್ಲಿ ದ್ವೇಷ ಬಿತ್ತಲಾಗುತ್ತಿದೆ. ರಾಷ್ಟ್ರದ ಶೇ 60 ರಷ್ಟು ಸಂಪತ್ತು ಶೇ 1 ರಷ್ಟು ಜನ ಅನುಭವಿಸುತ್ತಿದ್ದಾರೆ. ಸಂಪತ್ತು ಸಮಾನ ಹಂಚಿಕೆಯಾಗುತ್ತಿಲ್ಲ’ ಎಂದು ಹೇಳಿದರು.
ಸಮಾರಂಭದ ಪ್ರಯುಕ್ತ ಟೌನ್‌ಹಾಲ್ ವೃತ್ತದಿಂದ ಕನ್ನಡ ಭವನದ ವರೆಗೆ ಮೆರವಣಿಗೆ ನಡೆಯಿತು. ಹತ್ತಾರು ಜನ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್.ರೇವಣ್ಣ, ಪರಿಸರವಾದಿ ಸಿ.ಯತಿರಾಜು, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಗೋವಿಂದರಾಜು, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ಎಐಟಿಯುಸಿ ಜಿಲ್ಲಾ ಘಟಕದ ಅಧ್ಯಕ್ಷ ಕಂಬೇಗೌಡ, ಎಸ್‌ಯುಸಿಐ ಜಿಲ್ಲಾ ಕಾರ್ಯದರ್ಶಿ ಎನ್.ಎಸ್.ಸ್ವಾಮಿ ಇತರರು ಭಾಗವಹಿಸಿದ್ದರು.
ಬಡವರ ಪರ ಹೋರಾಟ ದುಡಿಯುವ ವರ್ಗ ಕಾರ್ಮಿಕರು ಬಡವರು ರೈತರ ಪರವಾಗಿ ಸಿಪಿಐ ಹೋರಾಟ ನಡೆಸುತ್ತಿದೆ. ಜನರು ಎಚ್ಚೆತ್ತುಕೊಂಡು ಮುಂದಿನ ದಿನಗಳಲ್ಲಿ ಸಮಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಜನರ ಏಳಿಗೆ ಬಯಸುವ ಸಿಪಿಐ ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸಬೇಕು. ಗಿರೀಶ್ ಸಿಪಿಐ ಜಿಲ್ಲಾ ಸಂಚಾಲಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.