ADVERTISEMENT

ರೌಡಿಗಳಿಗೆ ಸಿಪಿಐ ಅತಿರೇಕದ ಆವಾಜ್

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೊ; ವ್ಯಾಪಕ ಟೀಕೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2019, 13:44 IST
Last Updated 2 ಸೆಪ್ಟೆಂಬರ್ 2019, 13:44 IST
   

ತುಮಕೂರು: ಠಾಣೆ ಆವರಣದಲ್ಲಿ ರೌಡಿಗಳ ಪರೇಡ್ ನಡೆಸಿದ ತಿಲಕ್ ಪಾರ್ಕ್ ಠಾಣೆಯ ಸರ್ಕಲ್ ಇನ್‌ಸ್ಪೆಕ್ಟರ್ ಪಾರ್ವತಮ್ಮ ರೌಡಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡುವ ಭರದಲ್ಲಿ ಆಡಿದ ಅತಿರೇಕದ ಮಾತುಗಳು ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ.

ಪಾರ್ವತಮ್ಮ ಅವರು ರೌಡಿಗಳನ್ನು ತರಾಟೆಗೆ ತೆಗೆದುಕೊಳ್ಳುವಾಗ ಆಡಿದ ಮಾತುಗಳ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಸರ್ವಾಂಗಗಳನ್ನು ಮುಚ್ಚಿಕೊಂಡಿರಬೇಕು. ಮಗ್ನೆ ನೀನು ಮದುವೆಯನ್ನೇ ಆಗಬೇಡ. ಮದುವೆಯಾಗಿ ಮಾಡಬಾರದ ಕೆಲಸ ಮಾಡಿ ಬೀದಿ ಹೆಣ ಆಗ್ತೀಯಾ. ನಿನ್ನ ಹೆಂಡತಿ ಇನ್ನೊಬ್ಬರ ಪಾಲಾಗುತ್ತಾಳೆ. ಮಕ್ಕಳು ಬೀದಿ ಪಾಲಾಗುತ್ತವೆ ಎಂದು ಹೇಳಿದ್ದಾರೆ.

ADVERTISEMENT

ನಿಮ್ಗೆ ತಿನ್ನೋಕು ಗತಿ ಇಲ್ಲ. ಉಡೋಕೆ ಬಟ್ಟೆಯೂ ಇಲ್ಲ. ರೌಡಿಶೀಟರ್‌ಗಳಿಗೆ ನಾನು ಏನು ಬೇಕಾದರೂ ಮಾಡಬಹುದು. ನೀವು ಸಾಯೋತನಕ ಯಾವುದೇ ಕೇಸಿನಲ್ಲೂ ಫಿಟ್ ಮಾಡಬಹುದು. ಒಂದಿಷ್ಟು ಜನರನ್ನು ಎನ್‌ ಕೌಂಟರ್ ಮಾಡಿದರೆ ಉಳಿದವರು ಸುಮ್ಮನೆ ಇರ್ತೀರಾ. ಚನ್ನಪ್ಪನ ಪಾಳ್ಯದ ಹೆಣ್ಣುಮಕ್ಕಳು ಬಾರಿ ಆಟ ಆಡ್ತಾರೆ. ಅವರಿಗೂ ಬುದ್ಧಿ ಹೇಳಬೇಕು ಎಂದು ಎಚ್ಚರಿಕೆ ನೀಡಿರುವುದು ವಿಡಿಯೊದಲ್ಲಿದೆ.

ಪೊಲೀಸ್ ಅಧಿಕಾರಿಯಾಗಿ ರೌಡಿ ಶೀಟರ್‌ಗಳನ್ನು ಸೌಮ್ಯವಾಗಿ, ದಯನೀಯವಾಗಿ ಮಾತನಾಡಿಸಿ ಎಂದು ಸಮಾಜ ಹೇಳುವುದಿಲ್ಲ. ಹಾಗೆ ಮಾತನಾಡಿಸುವುದನ್ನು ಒಪ್ಪುವುದಿಲ್ಲ. ಆದರೆ, ಈ ಅಧಿಕಾರಿ ಆಡಿದ ಒಂದಿಷ್ಟು ಮಾತುಗಳು ಅತಿರೇಕವಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.