ADVERTISEMENT

ಧರ್ಮಸ್ಥಳದಲ್ಲಿ ಸಾವು: ತನಿಖೆಗೆ ಕಮ್ಯುನಿಸ್ಟ್‌ ಪಕ್ಷ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 7:28 IST
Last Updated 20 ಜುಲೈ 2025, 7:28 IST
ಸಿಪಿಎಂ
ಸಿಪಿಎಂ   

ತುಮಕೂರು: ಧರ್ಮಸ್ಥಳದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದ ಕೆಲ ದಶಕಗಳಲ್ಲಿ ನಡೆದ ಅಸಹಜ ಸಾವುಗಳ ಬಗ್ಗೆ ಮರು ತನಿಖೆ ನಡೆಸಬೇಕು ಎಂದು ಭಾರತ ಕಮ್ಯುನಿಸ್ಟ್‌ ಪಕ್ಷ (ಸಿಪಿಎಂ) ಒತ್ತಾಯಿಸಿದೆ.

‘ಧರ್ಮಸ್ಥಳ ದೇಗುಲದಲ್ಲಿ ಸ್ವಚ್ಛತಾ ಕಾರ್ಯ ಮಾಡಿಕೊಂಡಿದ್ದ ವ್ಯಕ್ತಿ ನೂರಾರು ಅಪರಿಚಿತ ಶವ ಹೂತಿದ್ದೇನೆ ಎಂದು ಹೇಳುತ್ತಿದ್ದಾರೆ. ಪೊಲೀಸರು, ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ ನಂತರವೂ ಸರ್ಕಾರ ಕ್ಷಿಪ್ರಗತಿಯಲ್ಲಿ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಬಿ.ಉಮೇಶ್‌, ಕಾರ್ಯದರ್ಶಿ ಎನ್‌.ಕೆ.ಸುಬ್ರಮಣ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೂತಿರುವ ಕಳೇಬರ ಹೊರ ತೆಗೆಯುವುದಾಗಿ ದೂರುದಾರ ಹೇಳಿದ್ದಾರೆ. ಈ ಬಗ್ಗೆ ಪೋಲೀಸರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಪೊಲೀಸರು ಸಮರ್ಪಕ ತನಿಖೆಗೆ ಆಸಕ್ತಿ ತೋರದೆ, ದೂರುದಾರರ ಮಂಪರು ಪರೀಕ್ಷೆ ಮಾಡಲು ಅನುಮತಿ ಕೇಳಿರುವುದು ಆಶ್ಚರ್ಯ ಉಂಟು ಮಾಡಿದೆ. ಇದು ಯಾರನ್ನೋ ರಕ್ಷಿಸಲು ನಡೆಯುತ್ತಿರುವ ಪ್ರಯತ್ನದ ಭಾಗ ಎಂಬುವುದನ್ನು ದೃಢ ಪಡಿಸುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

2012ರಲ್ಲಿ ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ, ಅದನ್ನು ಮುಚ್ಚಿ ಹಾಕಲು ನಡೆದ ಪ್ರಯತ್ನ ಮರೆಯಲಾರದ ಸಂಗತಿ. ಆರೋಪಿ ಸ್ಥಾನದಲ್ಲಿ ಅಮಾಯಕನೊಬ್ಬ ಜೈಲು ಶಿಕ್ಷೆ ಅನುಭವಿಸಿದರು. ಪ್ರಕರಣದ ವಿಚಾರಣೆ ನಡೆಸಿದ ಸಿಬಿಐ ನ್ಯಾಯಾಲಯವು ತನಿಖಾಧಿಕಾರಿ, ಶವ ಪರೀಕ್ಷೆ ಮಾಡಿದ ವೈದ್ಯಾಧಿಕಾರಿ ಉದ್ದೇಶ ಪೂರ್ವಕವಾಗಿ ಸಾಕ್ಷಿ ನಾಶ ಮಾಡಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿತ್ತು. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸದೆ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.