ಮಧುಗಿರಿ: ತಿಂಗಳೊಳಗಾಗಿ 150 ಮಂದಿಗೆ ಸಾಗುವಳಿ ಚೀಟಿ ಹಾಗೂ ಸಾಗುವಳಿ ಚೀಟಿ ನೀಡಿರುವ 120 ಮಂದಿಗೆ ಖಾತೆ ಮತ್ತು ಪಹಣಿ ನೀಡಲಾಗುವುದು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ತಾಲ್ಲೂಕು ಕಚೇರಿಯಲ್ಲಿ ಬುಧವಾರ ಬಗರ್ ಹುಕುಂ ಸಕ್ರಮೀಕರಣ ಸಮಿತಿ ಸಭೆಯಲ್ಲಿ ಮಾತನಾಡಿ, ಹಲವು ವರ್ಷಗಳಿಂದ ಸಾಗುವಳಿ ಚೀಟಿ ನೀಡಿರುವವರಿಗೆ ಖಾತೆ ಮತ್ತು ಪಹಣಿಯನ್ನು ಮಾಡಿಕೊಡಬೇಕೆಂದು ತಹಶೀಲ್ದಾರ್ ಅವರಿಗೆ ಸೂಚಿಸಿದರು. ಮಧುಗಿರಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರನ್ನು ಕರೆಸಿ ಅವರ ಮೂಲಕವೇ ಸಾಗುವಳಿ ಚೀಟಿ ಹಾಗೂ ಸಾಗುವಳಿ ಚೀಟಿ ನೀಡಿರುವವರಿಗೆ ಖಾತೆ ಮತ್ತು ಪಹಣಿಯನ್ನು ವಿತರಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
14 ಮಂದಿಗೆ ಸಾಗುವಳಿ ಚೀಟಿ ನೀಡಲು ಸಭೆಯಲ್ಲಿ ಅನುಮೋದಿಸಲಾಯಿತು. ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಿಗರು ಸ್ಥಳೀಯವಾಗಿ ವಾಸ ಇರಬೇಕು. ಸಾರ್ವಜನಿಕರಿಂದ ದೂರು ಬಾರದಂತೆ ಎಲ್ಲರೂ ಕೆಲಸ ಮಾಡಬೇಕು ಎಂದು ತಿಳಿಸಿದರು.
ತಾಲ್ಲೂಕಿನಲ್ಲಿ ಅವಶ್ಯಕತೆ ಇರುವ ಕಡೆಗಳಲ್ಲಿ ನಾಡ ಕಚೇರಿಯ ಕಟ್ಟಡ ನಿರ್ಮಾಣಕ್ಕೆ ಅನುದಾನ ಕೊಡಿಸಲಾಗುವುದು. ನೂತನ ತಾಲ್ಲೂಕು ಕಚೇರಿ ಕಟ್ಟಡ ನಿರ್ಮಾಣಕ್ಕೆ ಜಾಗ ಗುರುತಿಸಿದರೆ ಉತ್ತಮ ಕಟ್ಟಡ ನಿರ್ಮಾಣಕ್ಕೂ ಸರ್ಕಾರದಿಂದ ಹಣ ಮಂಜೂರು ಮಾಡಿಸಲಾಗುವುದು ಎಂದರು.
ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಶೀಲ್ದಾರ್ ಶಿರಿನ್ ತಾಜ್, ಬಗರ್ ಹುಕುಂ ಸಮಿತಿ ಸದಸ್ಯ ಎಂ.ಎಸ್.ಮಲ್ಲಿಕಾರ್ಜುನಯ್ಯ, ಸೊಸೈಟಿ ರಾಮಣ್ಣ, ತಾ.ಪಂ.ಇಒ ಲಕ್ಷ್ಮಣ್, ಎಒ ಮಧುಸೂದನ್, ಅರಣ್ಯ ಇಲಾಖೆ ಅಧಿಕಾರಿ ಸುರೇಶ್, ಕಂದಾಯ ನಿರೀಕ್ಷಕ ಹಾಗೂ ಗ್ರಾಮ ಲೆಕ್ಕಿಗರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.