ADVERTISEMENT

ಕಲಾವಿದರ ಸಂಕಷ್ಟಕ್ಕೆನೆರವಾಗಲು ಮನವಿ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2020, 4:01 IST
Last Updated 27 ಅಕ್ಟೋಬರ್ 2020, 4:01 IST
ಕಲಾವಿದರಾದ ವಿಕ್ರಂ ಸೂರಿ ಮತ್ತು ಸೂರ್ಯ ಕಲಾವಿದರ ತಂಡದ ನೃತ್ಯ ವೈಭವದ ನೋಟ
ಕಲಾವಿದರಾದ ವಿಕ್ರಂ ಸೂರಿ ಮತ್ತು ಸೂರ್ಯ ಕಲಾವಿದರ ತಂಡದ ನೃತ್ಯ ವೈಭವದ ನೋಟ   

ಹುಳಿಯಾರು: ‘ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಕಲಾವಿದರು ಸಂಕಷ್ಟದಲ್ಲಿದ್ದಾರೆ. ಅವರ ಜತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೌಕರರು ನಿಂತುಕೊಂಡರೆ ಮುಂದಿನ ದಿನಗಳಲ್ಲಿ ನಿಮ್ಮ ಜೊತೆಗೆ ಅವರು ನಿಲ್ಲುತ್ತಾರೆ’ ಎಂದು ನಿರ್ದೇಶಕ
ಬಿ.ಎಸ್. ಲಿಂಗದೇವರು ಹೇಳಿದರು.

ಸಮೀಪದ ಕೋಡಿಪಾಳ್ಯದ ಧ್ಯಾನ ನಗರಿಯಲ್ಲಿ ರಾಷ್ಟ್ರೀಯ ನವರಾತ್ರಿ ಸಾಂಸ್ಕೃತಿಕ ಉತ್ಸವ-2020ರ ಪ್ರಯುಕ್ತ ಕಲಾವಿದರಾದ ವಿಕ್ರಂ ಸೂರಿ ಮತ್ತು ಸೂರ್ಯ ಕಲಾವಿದರ ತಂಡದಿಂದ ನಡೆದ ನೃತ್ಯ ವೈಭವ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಲಾವಿದರು ಸರ್ಕಾರಿ ಅನುದಾನದ ನಿರೀಕ್ಷೆಯಲ್ಲಿ ಕಷ್ಟದ ಜೀವನ ನಡೆಸುತ್ತಿದ್ದಾರೆ. ₹ 400 ಕೋಟಿಗೂ ಅಧಿಕ ಮೊತ್ತ ಹಣವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೌಕರರು ಸಂಬಳದ ರೂಪದಲ್ಲಿ ಪಡೆಯುತ್ತಿದ್ದಾರೆ. ತಮ್ಮ ಸಂಬಳದ ಒಂದು ಭಾಗವನ್ನು ನೀಡಿ ತಾವೇ ಕಲಾವಿದರಿಗೆ ಒಂದು ಯೋಜನೆ ರೂಪಿಸಿ ನೀಡಬೇಕು ಎಂದು ಕೋರಿದರು.

ADVERTISEMENT

ಕೋವಿಡ್–19 ಬದುಕಿನಲ್ಲಿ ಭಯ, ಆತಂಕ ಮತ್ತು ಒತ್ತಡ ತಂದಿದೆ. ಇಂತಹ ಭಯದ ವಾತಾವರಣ ಕೊರೊನಾ ಸೋಂಕಿಗಿಂತಲೂ ಅಪಾಯಕಾರಿಯಾದುದು. ಈಗ ನಾವು ಕೋವಿಡ್ ಜೊತೆ ಬದುಕಲು ಕಲಿಯಬೇಕಾಗಿದೆ. ತಪ್ಪದೆ ಮಾಸ್ಕ್‌ ಧರಿಸುವುದು, ಕೈ ‌ತೊಳೆಯುವುದು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದರು.

‘ಸಂಕಷ್ಟದ ಸಮಯದಲ್ಲೂ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಹೇಮಾವತಿ ಹರಿಯುತ್ತಿರುವುದು ರೈತರಲ್ಲಿ ಆಶಾಭಾವನೆ ಮೂಡಿದೆ’ ಎಂದರು.

ಮಾತಾ ಚಾರಿಟೇಬಲ್‌ ಟ್ರಸ್ಟ್‌ನ ಗಂಗಾಧರ್‌, ಪಿಎಸ್‌ಐ ಕೆ.ಟಿ. ರಮೇಶ್‌ ಇದ್ದರು. ವಿಕ್ರಮ್ ಸೂರಿ ಮತ್ತು ನಮಿತಾ ರಾವ್ ಬಳಗದವರಿಂದ ನೃತ್ಯ ವೈಭವ ಕಾರ್ಯಕ್ರಮವು ಕೋವಿಡ್ ಮಾರ್ಗಸೂಚಿ ಅನ್ವಯ ಯಶಸ್ವಿಯಾಗಿ ನಡೆಯಿತು. ಸುಮಾರು 200 ಪ್ರೇಕ್ಷಕರು ಮಾಸ್ಕ್ ಧರಿಸಿ ಅಂತರ
ಕಾಪಾಡಿಕೊಂಡು ಭಾಗಿ ಯಾಗಿದ್ದು ವಿಶೇಷವಾಗಿತ್ತು.
ಇತ್ತೀಚೆಗೆ ನಿಧನರಾದ ತೊಟ್ಟವಾಡಿ ನಂಜುಂಡಸ್ವಾಮಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಆಯ್ಕೆ: ಇಲ್ಲಿನ ಮಾತಾ ಚಾರಿಟೇಬಲ್‌ ಟ್ರಸ್ಟ್‌ನ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ನಿರ್ದೇಶಕ ಬಿ.ಎಸ್. ಲಿಂಗದೇವರು ಅವರನ್ನು ಆಯ್ಕೆ ಮಾಡಲಾಯಿತು. ಈ ಹಿಂದೆ ತೊಟ್ಟವಾಡಿ ನಂಜುಂಡಸ್ವಾಮಿ ಕಾರ್ಯದರ್ಶಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.