ADVERTISEMENT

ದಲಿತ ಯುವಕನ ಶವ ಮರು ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2023, 5:43 IST
Last Updated 28 ಮಾರ್ಚ್ 2023, 5:43 IST

ಕೊಡಿಗೇನಹಳ್ಳಿ: ವೈದ್ಯರು ನ್ಯಾಯಸಮ್ಮತವಾಗಿ ಶವ ಪರೀಕ್ಷೆಯ ವರದಿ ನೀಡಿಲ್ಲವೆಂದು ದಲಿತ ಸಂಘಟನೆಯ ಮುಖಂಡರು ಮತ್ತು ಕುಟುಂಬದವರು ದೂರು ನೀಡಿದ್ದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರ ಆದೇಶದ ಮೇರೆಗೆ ಸೋಮವಾರ ಹೋಬಳಿಯ ಐಡಿಹಳ್ಳಿ ಗ್ರಾಮದ ದಲಿತ ಯುವಕನ ಶವದ ಮರು ಪರೀಕ್ಷೆ ನಡೆಯಿತು.

2022ರ ಸೆ. 9ರಂದು ಐಡಿಹಳ್ಳಿಯ ಪುರುಷೋತ್ತಮ್ ಪ್ರಸಾದ್ (35) ಎಂಬಾತನನ್ನು ಕೊಡಿಗೇನಹಳ್ಳಿ ಹೋಬಳಿಯ ಬಾಲಾಜಿ ರೆಡ್ಡಿ ಎಂಬುವರು ಅವರ ತೋಟದಲ್ಲಿ ಬಾಳೆ ಗೊನೆ ಕದ್ದಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೊಡಿಗೇನಹಳ್ಳಿ ಠಾಣೆಗೆ ಕರೆತಂದು ದೂರು ನೀಡಿದ್ದರು.

ಕಡೆಗೆ ರಾಜೀ ಸಂಧಾನದ ಮೂಲಕ ಪ್ರಕರಣ ಬಗೆಹರಿದಿತ್ತು. ಕೆಲವು ದಿನಗಳ ಬಳಿಕ ಪುರುಷೋತ್ತಮ್ ಪ್ರಸಾದ್‌ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಅಸುನೀಗಿದ್ದರು. ಬಾಲಾಜಿ ರೆಡ್ಡಿ ಮತ್ತು ಆತನ ಸಂಗಡಿಗರೇ ಬಾಳೆ ಗೊನೆ ಕದ್ದ ನೆಪದಲ್ಲಿ ಚೆನ್ನಾಗಿ ಥಳಿಸಿದ್ದರಿಂದ ಯುವಕನ ದೇಹದ ಅಂಗಾಂಗಗಳಿಗೆ ಹಾನಿಯಾಗಿ ಮೃತಪಟ್ಟಿದ್ದಾನೆ ಎಂದು ದಲಿತ ಸಂಘಟನೆಯ ಮುಖಂಡರು ಮತ್ತು ಕುಟುಂಬಸ್ಥರು ದೂರು ನೀಡಿದ್ದರು.

ADVERTISEMENT

ಇದಾದ ಕೆಲವೇ ದಿನಗಳಲ್ಲಿ ಪುರುಷೋತ್ತಮ್ ಪ್ರಸಾದ್ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ ಎಂದು ವೈದ್ಯಕೀಯ ವರದಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಶವದ ಮರು ಪರೀಕ್ಷೆ ನಡೆಸುವಂತೆ ದೂರು ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.