ತುಮಕೂರು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಲೋಕಾಯುಕ್ತ ವಿಶೇಷ ತನಿಖಾ ತಂಡದ ಎಡಿಜಿಪಿ ಎಂ.ಚಂದ್ರಶೇಖರ್ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಶಾಸಕ ಬಿ.ಸುರೇಶ್‌ಗೌಡ ಒತ್ತಾಯಿಸಿದ್ದಾರೆ.
ತಕ್ಷಣ ಚಂದ್ರಶೇಖರ್ ಎರವಲು ಸೇವೆ ಮುಕ್ತಾಯಗೊಳಿಸಿ ಅವರ ವಿರುದ್ಧ ಸಿಬಿಐ ತನಿಖೆ ಆರಂಭಿಸಬೇಕು. ಅಧಿಕಾರಿಗಳು ಗೂಂಡಾಗಳ ತರ ವರ್ತಿಸಬಾರದು. ಈ ಸರ್ಕಾರದಲ್ಲಿ ಮಾನ–ಮರ್ಯಾದೆ, ಮಿತಿಗಳು ಉಳಿದಿಲ್ಲ ಎನ್ನುವುದಕ್ಕೆ ಚಂದ್ರಶೇಖರ್ ಮಾತು ಒಂದು ನಿದರ್ಶನ. ರಾಜಭವನದ ವಿರುದ್ಧವೇ ತನಿಖೆಗೆ ಮುಂದಾಗುವ ದುರಹಂಕಾರ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ್ದಾರೆ.
ಒಬ್ಬ ಅಧಿಕಾರಿಯನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳನ್ನು ಹಣಿಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾವಿಸಿದ್ದರೆ ಅದು ಮೂರ್ಖತನದ ಪರಮಾವಧಿ. ಅಧಿಕಾರಿ ಮೊದಲು ಗೌರವದಿಂದ ನಡೆದುಕೊಳ್ಳುವುದನ್ನು ಕಲಿಯಬೇಕು. ಕೆಳಹಂತದ ಅಧಿಕಾರಿಗಳಿಗೆ ಮಾದರಿಯಾಗಿರಬೇಕು. ಕುಮಾರಸ್ವಾಮಿ ಅವರ ವಿರುದ್ಧ ಹಂದಿ ಎನ್ನುವ ಪದ ಬಳಸಿರುವ ಅಧಿಕಾರಿಯೇ ಹಂದಿಗೆ ಸಮ ಎಂದು ಕಿಡಿಕಾರಿದ್ದಾರೆ.
ಇದು ಅತ್ಯಂತ ಗಂಭೀರ ವಿಷಯ. ನಾವು ಎಲ್ಲಿಗೆ ಹೋಗಿ ಮುಟ್ಟುತ್ತಿದ್ದೇವೆ. ಈ ದೇಶದಲ್ಲಿ ಪ್ರಜಾಪ್ರಭುತ್ವ ಹೇಗೆ ಉಳಿಯುತ್ತದೆ. ಜನಪ್ರತಿನಿಧಿಗಳಾಗಿ ನಾವು ಯಾವ ರೀತಿ ಕೆಲಸ ಮಾಡುವುದು ಎಂದು ತಿಳಿಯುತ್ತಿಲ್ಲ. ಇಂತಹ ಅಧಿಕಾರಿಗಳ ಕೆಲಸದ ಅವಧಿ ಮುಗಿದ ತಕ್ಷಣಕ್ಕೆ ಅವರ ಕೇಡರ್ ರಾಜ್ಯಕ್ಕೆ ಕಳುಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.