ತುಮಕೂರು: ಎರಡೂವರೆ ದಶಕದಿಂದ ಬಳಕೆಯಾಗದ ಓವರ್ ಹೆಡ್ ಟ್ಯಾಂಕ್ ಸರಿಪಡಿಸಬೇಕು; ಪ್ರಯಾಣಿಕರ ತಂಗುದಾಣ ನಿರ್ಮಿಸಬೇಕು; ಚರಂಡಿ ವ್ಯವಸ್ಥೆ ಸರಿಪಡಿಸಬೇಕು... ಇದು ದೇವರಾಯಪಟ್ಟಣ, ಬಂಡೆಪಾಳ್ಯ ನಿವಾಸಿಗಳ ಪ್ರಮುಖ ಒತ್ತಾಯಗಳು.
ಮಹಾನಗರ ಪಾಲಿಕೆ ವ್ಯಾಪ್ತಿಯ 35ನೇ ವಾರ್ಡ್‌ಗೆ ಈ ಪ್ರದೇಶಗಳು ಸೇರಿಕೊಳ್ಳುತ್ತವೆ. ವಿವಿಧ ಕಡೆಗಳಲ್ಲಿ ಚರಂಡಿ ಸಂಪರ್ಕ ಸರಿಯಾಗಿಲ್ಲ. ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಿಲ್ಲ. ಮಳೆಗಾಲದ ಸಮಯದಲ್ಲಿ ನೀರು ನಿಂತಲ್ಲಿಯೇ ನಿಂತು ಗಬ್ಬು ವಾಸನೆ ಬೀರುತ್ತದೆ. ಈ ಹಿಂದೆ ಅವೈಜ್ಞಾನಿಕ ಕಾಮಗಾರಿ ನಡೆಸಿದ ಪರಿಣಾಮ ಈಗ ಜನ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂಬ ಅಸಮಾಧಾನ ಪ್ರಮುಖವಾಗಿ ವ್ಯಕ್ತವಾಗುತ್ತಿದೆ.
ದೇವರಾಯಪಟ್ಟಣದ ಮುಖ್ಯರಸ್ತೆಯಲ್ಲಿರುವ ಪ್ರಯಾಣಿಕರ ತಂಗುದಾಣ ಹಾಳಾಗಿದೆ. ಅದನ್ನು ಪಕ್ಕದಲ್ಲಿಯೇ ಇರುವ ಖಾಲಿ ಜಾಗಕ್ಕೆ ಸ್ಥಳಾಂತರಗೊಳಿಸಿ, ಆಸನಗಳ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಇಲ್ಲಿನ ಜನರ ಐದಾರು ವರ್ಷಗಳ ಬೇಡಿಕೆ. ಇದುವರೆಗೆ ಅದು ಸಾಕಾರಗೊಂಡಿಲ್ಲ. ಬಸ್ ಪ್ರಯಾಣಿಕರ ತಂಗುದಾಣ ಕುಡುಕರ ಆವಾಸ ಸ್ಥಾನವಾಗಿ ಬದಲಾಗಿದೆ.
‘ನಗರದ ಕೊನೆಯ ಭಾಗದಲ್ಲಿ ವಾರ್ಡ್‌ನ ಪ್ರದೇಶಗಳಿವೆ. ಹೀಗಾಗಿ ಅಧಿಕಾರಿಗಳು ಕೂಡ ಈ ಪ್ರದೇಶದ ಅಭಿವೃದ್ಧಿಗೆ ಒಲವು ತೋರುತ್ತಿಲ್ಲ. ತಂಗುದಾಣದ ಬಗ್ಗೆ ಹಲವು ಬಾರಿ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರೂ ಸಕಾರಾತ್ಮಕ ಉತ್ತರ ಸಿಕ್ಕಿಲ್ಲ. ಸ್ಥಳಕ್ಕೆ ಬಂದು ಭೇಟಿ ನೀಡಿದರೆ ವಾಸ್ತವದ ಸ್ಥಿತಿ ಅವರಿಗೆ ಗೊತ್ತಾಗುತ್ತದೆ. ಅಧಿಕಾರಿಗಳಿಂದ ಮಾಹಿತಿ ಪಡೆದು, ಕಚೇರಿಯಲ್ಲಿಯೇ ಉಳಿದರೆ ಜನರಿಗೆ ಪರಿಹಾರ ಸಿಗುವುದಿಲ್ಲ’ ಎಂದು ದೇವರಾಯಪಟ್ಟಣದ ನಿವಾಸಿ ಜಗದೀಶ್ ಅಸಮಾಧಾನ ವ್ಯಕ್ತಪಡಿಸಿದರು.
ದೇವರಾಯಪಟ್ಟಣದ ಅಂಬೇಡ್ಕರ್ ವಸತಿ ಶಾಲೆ ಎದುರುಗಡೆ ಸುಮಾರು 25 ವರ್ಷಗಳಿಂದ ಓವರ್ ಹೆಡ್ ಟ್ಯಾಂಕ್ ಹಾಗೆಯೇ ಇದೆ. ನಿರ್ಮಾಣದ ನಂತರ ಅದನ್ನು ಇದುವರೆಗೆ ಬಳಸಲು ಸಾಧ್ಯವಾಗಿಲ್ಲ. ಸುತ್ತಮುತ್ತಲಿನ ಜನರಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಟ್ಯಾಂಕ್ ನಿರ್ಮಿಸಲಾಗಿತ್ತು. ಟ್ಯಾಂಕ್ ಉದ್ಘಾಟನೆಯಾಗಿದ್ದು ಬಿಟ್ಟರೆ ಬೇರೆ ಬೆಳವಣಿಗೆಯಾಗಿಲ್ಲ.
ಬಂಡೆಪಾಳ್ಯದಲ್ಲಿ ವಾರಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಈ ಭಾಗದ ಜನ ಟ್ಯಾಂಕರ್ ನೀರು ಅವಲಂಬಿಸಿದ್ದಾರೆ. ಖಾಲಿ ನಿವೇಶನಗಳಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ. ಚೇಳು, ಹಾವುಗಳು ಬೀಡು ಬಿಟ್ಟಿವೆ. ಇದು ಸುತ್ತಮುತ್ತಲಿನ ಜನರ ಆತಂಕಕ್ಕೆ ಕಾರಣವಾಗಿದೆ. ಖಾಲಿ ನಿವೇಶನದಲ್ಲಿ ಕಸದ ರಾಶಿ ಹಾಕುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ಕೆಲಸವಾಗಿಲ್ಲ.
ಬಂಡೆಪಾಳ್ಯದ ರಸ್ತೆಗಳು ಅಧ್ವಾನ ಆಗಿವೆ. ರಸ್ತೆಯಲ್ಲಿ ಗುಂಡಿಗಳೇ ಹೆಚ್ಚಿವೆ. ಒಂದು ಸಣ್ಣ ಮಳೆಯಾದರೂ ನೀರು ತುಂಬಿಕೊಂಡು ವಾಹನಗಳ ಓಡಾಟಕ್ಕೆ ಕಷ್ಟವಾಗುತ್ತಿದೆ. ಮಹಾನಗರ ಪಾಲಿಕೆಯಿಂದ ಹಮ್ಮಿಕೊಂಡಿರುವ ಗುಂಡಿ ಮುಚ್ಚುವ ಕಾರ್ಯ ಕೇವಲ ಕೆಲವೇ ಭಾಗಕ್ಕೆ ಸೀಮಿತವಾದಂತೆ ಕಾಣುತ್ತಿದೆ.
* ರಸ್ತೆ ನಿರ್ಮಾಣ
* ಕುಡಿಯುವ ನೀರಿನ ಘಟಕ ಆರಂಭ
* ಪಾರ್ಕ್ ಅಭಿವೃದ್ಧಿ
* ಮುಂದಕ್ಕೆ ಸಾಗದ ಚರಂಡಿ ನೀರು
* ರಸ್ತೆ ತುಂಬೆಲ್ಲ ಗುಂಡಿಗಳು
* ಖಾಲಿ ಜಾಗದಲ್ಲಿ ಕಸ, ಗಿಡಗಂಟಿ
* ಪ್ರಯಾಣಿಕರ ತಂಗುದಾಣವಿಲ್ಲ
* ಪಾರ್ಕ್ ನಿರ್ವಹಣೆ ಕೊರತೆ
ಔಷಧಿ ಸಿಗಲ್ಲ
ಬಂಡೆಪಾಳ್ಯ ದೇವರಾಯಪಟ್ಟಣದ ಸುತ್ತಮುತ್ತಲಿನ ಜನ ಅನುಕೂಲಕ್ಕಾಗಿ ದೇವರಾಯಪಟ್ಟಣದಲ್ಲಿ ನಮ್ಮ ಕ್ಲಿನಿಕ್ ಆರಂಭಿಸಲಾಗಿದೆ. ಆದರೆ ಇಲ್ಲಿ ಅಗತ್ಯ ಔಷಧಿ ಸಿಗುತ್ತಿಲ್ಲ. ಕನಿಷ್ಠ ನಾಯಿ ಕಚ್ಚಿದರೆ ನೀಡಲು ಔಷಧಿಯೂ ಇಲ್ಲ. ರೋಗಿಗಳನ್ನು ಇಲ್ಲಿನ ಸಿಬ್ಬಂದಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಿಫಾರಸು ಮಾಡುತ್ತಿದ್ದಾರೆ. ‘ನಿತ್ಯ ನೂರಾರು ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಸಣ್ಣಪುಟ್ಟ ರೋಗಕ್ಕೂ ಚಿಕಿತ್ಸೆ ಸಿಗುತ್ತಿಲ್ಲ. ಕ್ಲಿನಿಕ್ ಆರಂಭಿಸಿ ಏನು ಪ್ರಯೋಜನ. ಇದ್ದೂ ಇಲ್ಲದಂತಾಗಿದೆ’ ಎಂದು ದೇವರಾಯಪಟ್ಟಣದ ಚಂದ್ರಮೋಹನ್ ದೂರಿದರು.
ರಸ್ತೆ ಸರಿಯಿಲ್ಲ
ಅಂಬೇಡ್ಕರ್ ಭವನದ ಪಕ್ಕದಲ್ಲಿರುವ ಅನುದಾನಿತ ಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಪಡಿಸಿಲ್ಲ. ಶಾಲೆ ಬಳಿ ಅಕ್ರಮ ಚಟುವಟಿಕೆಗಳು ಹೆಚ್ಚಾಗಿವೆ. ಮದ್ಯದ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಇದರಿಂದ ಶಾಲೆಗೆ ಬರುವ ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ. ನಾಗಾರ್ಜುನ ದೇವರಾಯಪಟ್ಟಣ ** ಸಾಂಕ್ರಾಮಿಕ ರೋಗದ ಆತಂಕ ಚರಂಡಿ ನೀರು ನಿಂತಲ್ಲೇ ನಿಂತು ಸೊಳ್ಳೆ ಉತ್ಪತ್ತಿಯಾಗಿ ಡೆಂಗಿ ಮಲೇರಿಯಾ ಹರಡುವ ಆತಂಕ ಹೆಚ್ಚಾಗಿದೆ. ಹಲವು ವರ್ಷಗಳಿಂದ ಈ ಸಮಸ್ಯೆ ಇದ್ದರೂ ಪರಿಹಾರ ಮಾರ್ಗ ಕಂಡುಕೊಳ್ಳಲು ಆಗಿಲ್ಲ. ನೀರು ಗಬ್ಬು ವಾಸನೆ ಬೀರುತ್ತದೆ. ದಾರಿಯಲ್ಲಿ ಸಾಗುವವರು ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಶರತ್ ದೇವರಾಯಪಟ್ಟಣ ** ಕೆರೆ ರಕ್ಷಿಸಿ ನಗರದ ಕಸ ತಂದು ಕೆರೆ ಏರಿ ಬಳಿ ಹಾಕುತ್ತಿದ್ದಾರೆ. ಮಳೆಗಾಲದಲ್ಲಿ ತಾಜ್ಯ ಕೆರೆ ಸೇರುತ್ತದೆ. ನೀರು ಕಲುಷಿತವಾಗುತ್ತಿದೆ. ಕೆರೆ ರಕ್ಷಣೆಗೆ ಆದ್ಯತೆ ನೀಡಬೇಕು. ಬಸ್ ನಿಲ್ದಾಣ ಅಭಿವೃದ್ಧಿ ಪಡಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಬೇಕು. ಹೇಮಂತ್ ದೇವರಾಯಪಟ್ಟಣ ** ನಿರ್ವಹಣೆ ಇಲ್ಲ ಸುಮ್ಮನೆ ಹೆಸರಿಗೆ ಮಾತ್ರ ಪಾರ್ಕ್ ಮಾಡಿದ್ದಾರೆ. ಕುಳಿತುಕೊಳ್ಳಲು ಆಸನಗಳು ಸೇರಿದಂತೆ ಯಾವುದೇ ವ್ಯವಸ್ಥೆ ಮಾಡಿಲ್ಲ. ರಸ್ತೆಗಳು ಒತ್ತುವರಿಯಾಗಿದ್ದು ಕೆಲವರು ಕಾಂಪೌಂಡ್ ಕಟ್ಟಿಕೊಂಡಿದ್ದಾರೆ. ಒಂದು ವಾಹನ ಓಡಾಡಲು ಸಾಧ್ಯವಾಗುತ್ತಿಲ್ಲ. ತುಂಬಾ ಸಮಸ್ಯೆಯಾಗುತ್ತಿದೆ. ರೇಣುಕಾರಾಧ್ಯ ಬಂಡೆಪಾಳ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.