ADVERTISEMENT

ಜಾತಿ ಗಣತಿ ವರದಿ | ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ: ಗೃಹ ಸಚಿವ ಜಿ.ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2025, 20:14 IST
Last Updated 13 ಏಪ್ರಿಲ್ 2025, 20:14 IST
ಜಿ.ಪರಮೇಶ್ವರ
ಜಿ.ಪರಮೇಶ್ವರ   

ತಿಪಟೂರು (ತುಮಕೂರು): ಜಾತಿ ಜನಗಣತಿ ವರದಿ ಅನುಷ್ಠಾನ ಕುರಿತು ಏಪ್ರಿಲ್‌ 17ರಂದು ನಡೆಯುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಕೂಲಂಕಷವಾಗಿ ಚರ್ಚಿಸಲಾಗುವುದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದ್ದಾರೆ.

ಜಾತಿ ಗಣತಿ ವರದಿಯ ಪ್ರತಿಗಳನ್ನು ಎಲ್ಲಾ ಸಚಿವರಿಗೂ ಈಗಾಗಲೇ ತಲುಪಿಸಲಾಗಿದೆ. ವರದಿಯಯನ್ನು ಎಲ್ಲರೂ ಓದಿ, ಪರಿಶೀಲಿಸಿದ ನಂತರ ವರದಿ ಅನುಷ್ಠಾನ ಕುರಿತು ಚರ್ಚಿಸಲಾಗುವುದು ಎಂದು ಭಾನುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಸವಲತ್ತುಗಳಿಂದ ವಂಚಿತವಾಗಿರುವ ಜಾತಿಗಳಿಗೆ ಮೀಸಲಾತಿ, ಶಿಕ್ಷಣ, ಉದ್ಯೋಗ ಹಾಗೂ ಸೌಲಭ್ಯ ಕಲ್ಪಿಸಲು ಈ ಜಾತಿ ಗಣತಿ ವರದಿ ಅಗತ್ಯ ಎಂದು ಅವರು ಸಮರ್ಥಿಸಿಕೊಂಡರು.

ADVERTISEMENT

‘ನಮ್ಮ ಹಿಂದಿನ ಸರ್ಕಾರದಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಮಾಹಿತಿ ಸಂಗ್ರಹಿಸಲಾಗಿದೆ. ಹತ್ತು ವರ್ಷ ಕಳೆದರೂ ವರದಿ ಸ್ವೀಕಾರ ಮಾಡಿಲ್ಲ. ಗಣತಿ ವೇಳೆ ಸಂಗ್ರಹ ಮಾಡಿರುವ ಅಂಶಗಳ ಬಗ್ಗೆ ಚರ್ಚಿಸಬೇಕಿದೆ. ವರದಿ ನೋಡದೆ ಮಾತನಾಡುವುದು ಸರಿಯಲ್ಲ. ಮೇಲ್ನೋಟಕ್ಕೆ ವರದಿಯಲ್ಲಿರುವ ಶೇ 80ರಷ್ಟು ಮಾಹಿತಿ ಸಮರ್ಪಕವಾಗಿದೆ. ವರದಿ ಪರಾಮರ್ಶೆ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ತಿಳಿಸಿದರು.

* * *

ವೈಜ್ಞಾನಿಕ ಗಣತಿಗೆ ಕಾಂಗ್ರೆಸ್‌ ಶಾಸಕ ಒತ್ತಾಯ

ತಿಪಟೂರು (ತುಮಕೂರು): ಜಾತಿ ಜನಗಣತಿ 10 ವರ್ಷಗಳ ಹಿಂದೆ ನಡೆದಿದ್ದು, ವರದಿ ವೈಜ್ಞಾನಿಕವಾಗಿಲ್ಲ ಎಂಬ ಆತಂಕವಿದೆ ಎಂದು ಶಾಸಕ ಡಾ.ಎಚ್‌.ಡಿ.ರಂಗನಾಥ್‌ ಪ್ರತಿಕ್ರಿಯಿಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಜಾತಿಗಣತಿ ವರದಿ ಯಾರೂ ನೋಡಿಲ್ಲ. ವರದಿ ಹೇಗೆ ಬರುತ್ತದೆ ಅಂತ ನೋಡಬೇಕು. ವರದಿಯಲ್ಲಿ ಸಣ್ಣಪುಟ್ಟ ಲೋಪದೋಷ ಆಗಿರುವುದು ಕಂಡು ಬರುತ್ತಿದೆ. ಮತ್ತೊಮ್ಮೆ ವೈಜ್ಞಾನಿಕವಾಗಿ ಗಣತಿ ಮಾಡಬೇಕು ಎಂದು ಒತ್ತಾಯಿಸುತ್ತೇನೆ. ನಮ್ಮ ಸಮುದಾಯದ ಹಿತಾಸಕ್ತಿ ಕಾಪಾಡುವುದು ನಮ್ಮ ಜವಾಬ್ದಾರಿ’ ಎಂದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿಯಲಿ ಎಂಬುವುದು ಎಲ್ಲ ಶಾಸಕರ ಬಯಕೆ. 2028ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ 150 ಸ್ಥಾನ ಗೆಲ್ಲಬೇಕಾದರೆ ಡಿ.ಕೆ. ಶಿವಕುಮಾರ್‌ ಅಧ್ಯಕ್ಷರಾಗಿರಬೇಕು ಎಂಬುವುದು ಎಲ್ಲ ಶಾಸಕರ ಅಭಿಪ್ರಾಯ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.