ADVERTISEMENT

ಬೆಂಗಳೂರು ಕಾಲ್ತುಳಿತ: ಎಡಿಜಿಪಿ ಅಮಾನತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 4:17 IST
Last Updated 10 ಜೂನ್ 2025, 4:17 IST
   

ತುಮಕೂರು: ಆರ್‌ಸಿಬಿ ತಂಡದ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ಗುಪ್ತಚರ ವಿಭಾಗದ ಎಡಿಜಿಪಿಯನ್ನು ಅಮಾನತು ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಆಗ್ರಹಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಬೆಂಗಳೂರು ನಗರ ಪೊಲೀಸ್ ಕಮಿಷನರ್, ಡಿಸಿಪಿ, ಎಸಿಪಿ ಅಮಾನತು ಮಾಡಲಾಗಿದೆ. ಸರ್ಕಾರದ ಕಡೆಯಿಂದ ತಪ್ಪಾಗಿದೆ. ಆದರೆ ಪ್ರಮುಖವಾಗಿ ಗುಪ್ತಚರ ವಿಭಾಗದಿಂದ ಲೋಪ ಕಂಡುಬಂದಿದ್ದು, ಮೊದಲು ಎಡಿಜಿಪಿ ಅಮಾನತು ಮಾಡಬೇಕಿತ್ತು’ ಎಂದು ಹೇಳಿದರು.

ಕೇವಲ ಪೊಲೀಸ್ ಕಮಿಷನರ್ ಅಮಾನತು ಮಾಡುವುದರಿಂದ ನ್ಯಾಯ ಸಿಗುವುದಿಲ್ಲ. ಗುಪ್ತಚರ ವಿಭಾಗದ ಎಡಿಜಿಪಿಯನ್ನು ಅಮಾನತು ಮಾಡಿ, ಅವರ ವಿರುದ್ಧವೂ ತನಿಖೆ ನಡೆಸಿದ್ದರೆ ಅದಕ್ಕೊಂದು ಬೆಲೆ ಇರುತಿತ್ತು. ಈಗಲೂ ಅಂತಹ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ADVERTISEMENT

ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ನಿರ್ಮಾಣಕ್ಕೆ ವಿರೋಧವಿದೆ. ಕೇವಲ ಕುಣಿಗಲ್ ಭಾಗಕ್ಕೆ ಮಾತ್ರ ನೀರು ಎಂದು ಹೇಳುತ್ತಿದ್ದಾರೆ. ಕೊರಟಗೆರೆ, ಮಧುಗಿರಿ ಭಾಗಕ್ಕೆ ಎಷ್ಟು ನೀರು ಹರಿಸಲಾಗಿದೆ ಎಂಬ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡುತ್ತಿಲ್ಲ ಎಂದರು.

ಸಚಿವ ಕೆ.ಎನ್.ರಾಜಣ್ಣ ಅಭಿನಂದನಾ ಸಮಾರಂಭವನ್ನು ಜೂನ್ 21ರಂದು ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇತರ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.