ಶಿರಾ: ಹೇಮಾವತಿ ಲಿಂಕ್ ಕೆನಾಲ್ ಅವೈಜ್ಞಾನಿಕವಾಗಿದ್ದು, ಜಿಲ್ಲೆಯ ಹಿತಾಸಕ್ತಿಯನ್ನು ಬಲಿಕೊಡದೆ ಯೋಜನೆಯನ್ನು ಕೂಡಲೇ ರದ್ದು ಪಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಆಗ್ರಹಿಸಿದರು.
ಹೇಮಾವತಿ ತುಮಕೂರು ಶಾಖಾ ನಾಲೆಯಿಂದ 12 ಅಡಿ ವ್ಯಾಸದ ಬೃಹತ್ ಪೈಪ್‌ಲೈನ್ ಮೂಲಕ ಹೇಮಾವತಿ ನೀರನ್ನು ಕುಣಿಗಲ್ ಮತ್ತೆ ಅಲ್ಲಿಂದ ಮಾಗಡಿವರೆಗೆ ಕೊಂಡೊಯ್ಯುವ ಯೋಜನೆಗೆ ತೀವ್ರ ವಿರೋಧವಿದೆ. ಜಿಲ್ಲೆಯ ಹೇಮಾವತಿ ಲಿಂಕ್ ಕೆನಾಲ್ ಯೋಜನೆ ಬಗ್ಗೆ ಚರ್ಚಿಸಲು ವಿಧಾನಸೌಧದಲ್ಲಿ ಕರೆದಿರುವ ಸಭೆಗೆ ಜಿಲ್ಲೆಯ ಹಿರಿಯ ರೈತ ಮುಖಂಡರು ಹಾಗೂ ರೈತ ಸಂಘದವರನ್ನು ಆಹ್ವಾನಿಸದಿರುವುದು ಆಕ್ಷೇಪನಾರ್ಹ ಎಂದರು.
ಹೇಮಾವತಿ ಲಿಂಕ್ ಕೆನಾಲ್ ಮೂಲಕ ಮಾಗಡಿಗೆ ನೀರು ತೆಗೆದುಕೊಂಡು ಹೋದರೆ ಮುಂದಿನ ದಿನಗಳಲ್ಲಿ ಹೇಮಾವತಿ ಮೂಲ ಯೋಜನೆ ವ್ಯಾಪ್ತಿಯ ಶಿರಾ, ಮಧುಗಿರಿ, ಕೊರಟಗೆರೆ, ಚಿಕ್ಕನಾಯಕನಹಳ್ಳಿ, ಗುಬ್ಬಿ, ತಿಪಟೂರು, ತುರುವೇಕೆರೆ, ತುಮಕೂರು ನಗರ, ತುಮಕೂರು ಗ್ರಾಮಾಂತರ ಭಾಗದ ಕುಡಿಯುವ ನೀರಿನ ಯೋಜನೆಗಳಿಗೆ ತೀವ್ರ ತೊಂದರೆಯಾಗಲಿದೆ ಎನ್ನುವುದು ರೈತ ಮುಖಂಡರ ವಾದ.
ಈ ಸಂಬಂಧ ರಚಿಸಲಾಗಿರುವ ತಾಂತ್ರಿಕ ಸಮಿತಿ ವರದಿಯೂ ಒಪ್ಪಿಕೊಳ್ಳುವಂತಿಲ್ಲ. ಆದ್ದರಿಂದ ಈ ಯೋಜನೆಯನ್ನು ತಕ್ಷಣವೇ ರದ್ದು ಪಡಿಸುವಂತೆ ಒತ್ತಾಯಿಸಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿರುವುದಾಗಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.