ADVERTISEMENT

ಹಿಂದುಳಿದವರಿಗೆ ಟಿಕೆಟ್‌ ನೀಡಲು ಆಗ್ರಹ

ಕಡೆಗಣಿಸಿದರೆ ತಕ್ಕ ಪಾಠ ಕಲಿಸುವ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2023, 15:33 IST
Last Updated 7 ಮಾರ್ಚ್ 2023, 15:33 IST
ಡಿ.ಟಿ. ಶ್ರೀನಿವಾಸ್
ಡಿ.ಟಿ. ಶ್ರೀನಿವಾಸ್   

ತುಮಕೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪ್ರವರ್ಗ 1ರ ಜಾತಿಗಳ ಮುಖಂಡರಿಗೆ ಟಿಕೆಟ್ ನೀಡುವಂತೆ ಪ್ರವರ್ಗ–1ರ ಜಾತಿಗಳ ಒಕ್ಕೂಟ ಆಗ್ರಹಿಸಿದೆ.

ಪ್ರವರ್ಗ–1ರ ಅಭ್ಯರ್ಥಿಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು. ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ವತಿಯಿಂದ ಮುಖಂಡ ರೇಣುಕಯ್ಯ ಉಪ್ಪಾರ್ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಬೇಕು ಎಂದು ರಾಜ್ಯ ಘಟಕದ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್ ಇಲ್ಲಿ ಮಂಗಳವಾರ ಒತ್ತಾಯಿಸಿದರು.

ತುಳಿತಕ್ಕೆ ಒಳಗಾದ ಸಮುದಾಯಕ್ಕೆ ಆದ್ಯತೆ ಕೊಡಬೇಕು. ಹಲವು ಕ್ಷೇತ್ರಗಳಲ್ಲಿ ಸಮುದಾಯದ ಜನರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಅರ್ಜಿ ಸಲ್ಲಿಸಿದ ಎಲ್ಲರಿಗೂ ಮಣೆ ಹಾಕಬೇಕು. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರು ಪಕ್ಷಗಳಿಂದ ಸ್ಪರ್ಧೆಗೆ ಉತ್ಸಾಹ ತೋರುವ ಪ್ರವರ್ಗ–1 ಜಾತಿಗಳ ಮುಖಂಡರಿಗೆ ಅವಕಾಶ ಕೊಡಬೇಕು. ಟಿಕೆಟ್ ನೀಡದಿದ್ದರೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಾಗುವುದು. ನಮ್ಮ ಅಸ್ತಿತ್ವಕ್ಕಾಗಿ ಹೋರಾಟ ಅನಿವಾರ್ಯವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ADVERTISEMENT

ಮುಖಂಡ ಧನಿಯಾ ಕುಮಾರ್,‌ ‘ಹಿಂದುಳಿದವರು ಜಾಸ್ತಿ ಇರುವ ಕಡೆ ಟಿಕೆಟ್ ನೀಡುವಂತೆ ಕೇಳುತ್ತಿದ್ದೇವೆ. ಇತ್ತೀಚೆಗೆ ಕಾಂಗ್ರೆಸ್ ಹಿಂದುಳಿದ ಸಮುದಾಯವನ್ನು ಕೈಬಿಡುತ್ತಿದೆ‌. ಜಿಲ್ಲೆಯಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಹಿಂದುಳಿದ ಅಭ್ಯರ್ಥಿಗಳಿಗೆ ಅವಕಾಶ ಕೊಡಬೇಕು. ಟಿಕೆಟ್ ನೀಡದವರಿಗೆ ಮತ ಹಾಕಿಸಲ್ಲ. 11 ಕ್ಷೇತ್ರದಲ್ಲೂ ಮತ ನೀಡುವುದಿಲ್ಲ’ ಎಚ್ಚರಿಸಿದರು.

ಒಕ್ಕೂಟದ ಪದಾಧಿಕಾರಿಗಳಾದ ಎಚ್.ಬಿ.ಬಂಡಿ, ಗಂಗಪ್ಪ, ಮಂಜುನಾಥ್, ಲೋಕೇಶ್, ರೇಣುಕಯ್ಯ ಉಪ್ಪಾರ್, ನರಸಿಂಹಮೂರ್ತಿ, ಶ್ರೀನಿವಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.