ADVERTISEMENT

ಶೇಂಗಾ ಬೆಳೆಗಾರದ ಹಿತ ಕಾಯಲು ಒತ್ತಾಯ: ಸದನದಲ್ಲಿ ‘ಪ್ರಜಾವಾಣಿ’ ವರದಿ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 5:19 IST
Last Updated 19 ಡಿಸೆಂಬರ್ 2025, 5:19 IST
<div class="paragraphs"><p>ಶಿರಾದ ಕೃಷಿ ಉತ್ಪನ್ನ ಮಾರುಕಟ್ಟೆ</p></div>

ಶಿರಾದ ಕೃಷಿ ಉತ್ಪನ್ನ ಮಾರುಕಟ್ಟೆ

   

ಶಿರಾ: ತಾಲ್ಲೂಕಿನಲ್ಲಿ ಶೇಂಗಾ ಬೆಳೆ ವಿಫಲವಾಗಿರುವ ಬಗ್ಗೆ ಡಿ‌ಸೆಂಬರ್ 10ರಂದು ‘ಪ್ರಜಾವಾಣಿ’ಯಲ್ಲಿ ‘ಭಣಗುಡುತ್ತಿರುವ ಶೇಂಗಾ ಮಾರುಕಟ್ಟೆ’ ಶೀರ್ಷಿಕೆಯಡಿ ಪ್ರಕಟವಾಗಿದ್ದ ವರದಿಯನ್ನು ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ವಿಧಾನಪರಿಷತ್‌ನಲ್ಲಿ ಪ್ರಸ್ತಾಪಿಸಿದರು.

ತಾಲ್ಲೂಕಿನಲ್ಲಿ ಶೇಂಗಾ ಪ್ರಮುಖ ಬೆಳೆಯಾಗಿದ್ದು ಈ ಬಾರಿ ಇಳುವರಿ ಕುಂಠಿತವಾದ ಹಿನ್ನೆಲೆಯಲ್ಲಿ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿರುವ ಬಗ್ಗೆ ವರದಿ ಪ್ರಕಟವಾಗಿದ್ದು ವಿಧಾನ ಮಂಡಲದಲ್ಲಿ ಚಿದಾನಂದ ಎಂ.ಗೌಡ ಅವರು ಪ್ರಜಾವಾಣಿಯಲ್ಲಿ ಪ್ರಕಟವಾದ ವರದಿಯನ್ನು ಸದನದ ಗಮನಕ್ಕೆ ತರುವ ಮೂಲಕ ಸರ್ಕಾರ ರೈತರ ನೋವಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಒಂದು ಕಾಲದಲ್ಲಿ ಏಷ್ಯಾದಲ್ಲೇ ಪ್ರಸಿದ್ಧವಾಗಿದ್ದ ಮತ್ತು ಶೇಂಗಾ ವಹಿವಾಟಿಗೆ ಹೆಸರಾಗಿದ್ದ ಶಿರಾ ಮಾರುಕಟ್ಟೆ ಇಂದು ಕಳೆಗುಂದಿದೆ. ತುಮಕೂರು, ಚಿತ್ರದುರ್ಗ ಮತ್ತು ನೆರೆಯ ಆಂಧ್ರಪ್ರದೇಶದ ರೈತರು ಇಲ್ಲಿಗೆ ಬರುತ್ತಿದ್ದರು. ಆದರೆ ಸಕಾಲಕ್ಕೆ ಮಳೆಯಾಗದೆ ಬೆಳೆ ಸಂಪೂರ್ಣ ಕೈಕೊಟ್ಟಿದೆ. ಇಳುವರಿ ಶೇ 60-70 ರಷ್ಟು ಕುಸಿದಿದೆ ಎಂದರು.

ಉತ್ಪಾದನೆ ಕಡಿಮೆಯಾಗಿರುವುದರಿಂದ ಮಾರುಕಟ್ಟೆಯಲ್ಲಿ ಶೇಂಗಾ ಎಣ್ಣೆ ಬೆಲೆ ಜನರ ಕೈಗೆಟುಕದಂತಾಗಿದೆ. ರೈತರು ಬಿತ್ತನೆಗೆಂದು ಇಟ್ಟುಕೊಂಡಿದ್ದ ಶೇಂಗಾ ಕೂಡ ಖಾಲಿಯಾಗಿದೆ. ಹಾಕಿದ ಬಂಡವಾಳ ವಾಪಸ್ ಸಿಗದೆ ರೈತರು ಸಾಲದ ಸುಳಿಗೆ ಸಿಲುಕಿದ್ದಾರೆ. ಈ ಹಂತದಲ್ಲಿ ಸರ್ಕಾರ ರೈತರ ಕೈಹಿಡಿಯದಿದ್ದರೆ ಅವರು ಕೃಷಿಯಿಂದ ವಿಮುಖರಾಗುವ ಅಪಾಯವಿದೆ ಎಂದು ಎಚ್ಚರಿಸಿದರು.

ಬರಪೀಡಿತ ಪ್ರದೇಶದ ಶೇಂಗಾ ಬೆಳೆಗಾರರಿಗೆ ಹೆಕ್ಟೇರ್ ಆಧಾರದಲ್ಲಿ ತಕ್ಷಣವೇ ವಿಶೇಷ ಬೆಳೆ ಹಾನಿ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದರು.

ಸಭಾಧ್ಯಕ್ಷರು ಶೇಂಗಾ ಬೆಳೆಗಾರರ ಹಿತರಕ್ಷಣೆಗಾಗಿ ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.