ADVERTISEMENT

ನಿವೇಶನಕ್ಕೆ ಒತ್ತಾಯಿಸಿ ಭಿನ್ನ ಧರಣಿ: ಪಂಚಾಯಿತಿ ಕಚೇರಿ ಬಾಗಿಲಲ್ಲೇ ಅಡುಗೆ ತಯಾರಿ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2019, 19:31 IST
Last Updated 23 ಡಿಸೆಂಬರ್ 2019, 19:31 IST
ಕೊಡಿಗೇನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಬಾಗಿಲಲ್ಲೇ ಅಡುಗೆ ತಯಾರಿಸಿ ನಿವೇಶನಕ್ಕೆ ಒತ್ತಾಯಿಸಿದ ಶಾಂತಮ್ಮ
ಕೊಡಿಗೇನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಬಾಗಿಲಲ್ಲೇ ಅಡುಗೆ ತಯಾರಿಸಿ ನಿವೇಶನಕ್ಕೆ ಒತ್ತಾಯಿಸಿದ ಶಾಂತಮ್ಮ   

ಕೊಡಿಗೇನಹಳ್ಳಿ (ಮಧುಗಿರಿ ತಾ.): ಸರ್ಕಾರದಿಂದ ಹಲವು ವರ್ಷಗಳ ಹಿಂದೆಯೇ ನಿವೇಶನ ನೀಡಿದ್ದರೂ, ಪಂಚಾಯಿತಿಯವರು ಜಾಗ ತೋರಿಸದೆ ಉದಾಸೀನ ತೋರಿದ್ದರಿಂದ ಬೇಸತ್ತ ಮಹಿಳೆಯೊಬ್ಬರು ಸೋಮವಾರ ಕೊಡಿಗೇನಹಳ್ಳಿ ಪಂಚಾಯಿತಿ ಕಚೇರಿ ಬಾಗಿಲಲ್ಲೇ ಅಡುಗೆ ಮಾಡಿ ಭಿನ್ನವಾಗಿ ಪ್ರತಿಭಟನೆ ನಡೆಸಿದರು.

‘ಕೊಡಿಗೇನಹಳ್ಳಿ ಗ್ರಾಮದ ನಾಗಪ್ಪ ಬಿನ್ ರುದ್ರಪ್ಪ ಹೆಸರಲ್ಲಿ ಸರ್ಕಾರದಿಂದ ನಿವೇಶನ ನೀಡಿದ್ದರು. ಆದರೆ, ಹಲವಾರು ವರ್ಷ ಕಳೆದರೂ ಗ್ರಾಮ ಪಂಚಾಯಿತಿಯವರು ನಮ್ಮ ನಿವೇಶನದ ಜಾಗ ತೋರಿಸುತ್ತಿಲ್ಲ. ಮನೆ ನಿರ್ಮಿಸಿಕೊಳ್ಳಬೇಕು ಜಾಗ ತೋರಿಸಿ ಎಂದರೆ ‘ನಿಮ್ಮ ಸೈಟಿಲ್ಲ’ ಎನ್ನುತ್ತಾರೆ ಪಂಚಾಯಿತಿಯವರು. ಮತ್ತೆ ಖಾತೆ, ಹಕ್ಕುಪತ್ರ ಮತ್ತು ಕಂದಾಯ ಕಟ್ಟಿರುವ ರಸೀದಿಗಳು ಹೇಗೆ ಬಂದವು. ಪಂಚಾಯಿತಿಯಿಂದ ಕಂದಾಯ ಹೇಗೆ ಕಟ್ಟಿಸಿಕೊಂಡರು’ ಎಂದು ನಾಗಪ್ಪ ಅವರ ಪತ್ನಿ ಶಾಂತಮ್ಮ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಅಣ್ಣ- ತಮ್ಮಂದಿರ ಹಾಗೂ ನೆಂಟರ ಮನೆಯಲ್ಲಿ ಎಷ್ಟು ದಿನ ಅಂತ ಇರೋಣ. ಮಕ್ಕಳು ಬೆಂಗಳೂರು ಇತರೆಡೆ ಕೂಲಿ ಕೆಲಸ ಮಾಡುತ್ತಿದ್ದಾರೆ. ಅವರ ಕೂಲಿ ಹಣದಿಂದ ಅವರಿಗೋಸ್ಕರ ಒಂದು ಸೂರನ್ನು ನಿರ್ಮಿಸೋಣ ಎಂದು ಅನೇಕ ವರ್ಷಗಳಿಂದ ಪಂಚಾಯಿತಿಗೆ ತಿರುಗಿ, ಅಧಿಕಾರಿಗಳನ್ನು ಕೇಳಿ ಕೇಳಿ ಸಾಕಾಗಿದೆ. ಆದ್ದರಿಂದ ಬೇಸತ್ತು ಪಂಚಾಯಿತಿ ಬಾಗಿಲಲ್ಲೇ ಬಂದು ಪ್ರತಿಭಟನೆ ನಡೆಸುತ್ತಿದ್ದೇನೆ’ ಎಂದು ಹೇಳಿದರು.

ADVERTISEMENT

‘ಸಂಬಂಧಿಸಿದವರು ನನಗೆ ಜಾಗ ತೋರಿಸಿ ಮನೆ ನಿರ್ಮಿಸಿಕೊಳ್ಳಲು ಅನುಕೂಲ ಕಲ್ಪಿಸಿಕೊಡಬೇಕು, ಇಲ್ಲವೇ ನಾನು ನನ್ನ ಮಕ್ಕಳು ಅಡುಗೆ ಮಾಡಿಕೊಂಡು ಇಲ್ಲೇ ಇದ್ದು ಬಿಡುತ್ತೇವೆ’ ಎಂದು ಶಾಂತಮ್ಮ ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.