ADVERTISEMENT

ಮುರಿದು ಬೀಳುವಂತಿರುವ ಗ್ರಂಥಾಲಯ: ಮೂಟೆಯಲ್ಲಿ ಮೂಲೆ ಸೇರಿದ ಜ್ಞಾನ ಬಂಡಾರ 

ಇನ್ನೇನು ಮುರಿದು ಬೀಳುವಂತಿರುವ ಗ್ರಂಥಾಲಯ ಕಟ್ಟಡ

ಎ.ಆರ್.ಚಿದಂಬರ
Published 12 ಡಿಸೆಂಬರ್ 2023, 7:32 IST
Last Updated 12 ಡಿಸೆಂಬರ್ 2023, 7:32 IST
<div class="paragraphs"><p>ಶಿಥಿಲಾವಸ್ಥೆಯಲ್ಲಿರುವ ಸರ್ಕಾರಿ ಗ್ರಂಥಾಲಯ</p></div>

ಶಿಥಿಲಾವಸ್ಥೆಯಲ್ಲಿರುವ ಸರ್ಕಾರಿ ಗ್ರಂಥಾಲಯ

   

ಕೊರಟಗೆರೆ: ಹರಿದ ಪುಸ್ತಕ, ಮುರಿದ ಕುರ್ಚಿ, ಮಳೆ ಬಂದರೆ ಸೋರುವ, ಬಿಸಿಲಾದರೆ ಕೂರಲಾಗದಂತಿರುವ ಕಟ್ಟಡದಲ್ಲಿ ಎತ್ತನೋಡಿದರೂ ಬಟ್ಟೆಯಿಂದ ಗಂಟುಕಟ್ಟಿಟ್ಟಿರುವ ಮೂಟೆಗಳು ಕಾಣಿಸುತ್ತಿರುವುದು ಇಲ್ಲಿನ ತಾಲ್ಲೂಕು ಗ್ರಂಥಾಲಯದಲ್ಲಿ.

ತಾಲ್ಲೂಕು ಮಟ್ಟದ ಗ್ರಂಥಾಲಯ ಕಟ್ಟಡ ಪ್ರಾರಂಭವಾಗಿ ಬಹಳ ವರ್ಷಗಳೆ ಕಳೆದಿದೆ. ಹಂದಿ ಗೂಡಿನಂತಿರುವ ಕಟ್ಟಡ ಚಿಕ್ಕದಾಗಿರುವ ಕಾರಣಕ್ಕೆ ಪುಸ್ತಕ ಇಡಲು ಜಾಗವಿಲ್ಲ. ಇರುವ ಪುಸ್ತಕಗಳನ್ನು ಮೂಟೆಕಟ್ಟಿ ಎಸೆಯಲಾಗಿದೆ. ಜ್ಞಾನ ಭಂಡಾರವಾಗಬೇಕಿರುವ ಅನೇಕ ಪುಸ್ತಕಗಳು ಮೂಲೆ ಸೇರಿ ಹಾಳಾಗಿವೆ.

ADVERTISEMENT

ಪಟ್ಟಣದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತಿರುವ ಸರ್ಕಾರಿ ಗ್ರಂಥಾಲಯ ನಿರ್ಲಕ್ಷದಿಂದಾಗಿ ಶಿಥಿಲಾವಸ್ಥೆ ತಲುಪಿದೆ. ಪುಸ್ತಕಗಳನ್ನು ಜೋಡಿಸಲು ಕಪಾಟುಗಳಿಲ್ಲ. ಓದುಗರು ಕೂರಲು ಸುಸಜ್ಜಿತ ಕುರ್ಚಿ, ಬೆಂಚ್ ವ್ಯವಸ್ಥೆ ಇಲ್ಲ. ಗಾಳಿ, ಬೆಳಕಿನ ವ್ಯವಸ್ಥೆ ಇಲ್ಲಿಲ್ಲ. ಮಳೆ ಬಂದರೆ ಇಡೀ ಕಟ್ಟಡ ಸೋರುತ್ತದೆ. ಬಿಸಿಲಾದರೆ ಕಿರಿದಾದ ಜಾಗವಾದ ಕಾರಣಕ್ಕೆ ಧಗೆಯಾಗುವುದರಿಂದ ಓದುಗರು ಇಲ್ಲಿ ಕುಳಿತು ಓದಲಾಗುವುದಿಲ್ಲ.

ಓದುವ ಸ್ಥಳ ಕನಿಷ್ಠ ಪ್ರಶಾಂತ ವಾತಾವರಣ ಹಾಗೂ ಸುಸಜ್ಜಿತ ಸ್ಥಳವಾಗಿ ಇರಬೇಕು. ಆದರೆ ಇದ್ಯಾವುದನ್ನು ಇಲ್ಲಿ ಊಹಿಸಲು ಸಾಧ್ಯವಿಲ್ಲ. ಬಸ್ ನಿಲ್ದಾಣದ ಪಕ್ಕದಲ್ಲೆ ಗ್ರಂಥಾಲಯ ಇರುವ ಕಾರಣಕ್ಕೆ ಓದುಗರು ಸಹಜವಾಗಿ ಇತ್ತ ತಿರುಗಿ ನೋಡುವುದು ಸಹಜ. ಆದರೆ ಶಿಥಿಲ ರೂಪ ತಲುಪಿರುವ ಗ್ರಂಥಾಲಯ ಇನ್ನೇನು ಮುರಿದು ಬೀಳುವಂತಿದೆ.

ಸ್ಪರ್ಧಾತ್ಮಕ ಪರೀಕ್ಷೆ ಸೇರಿದಂತೆ ಕಥೆ, ಕಾದಂಬರಿ ಇತರೆ ವಿಷಯಗಳ ಪುಸ್ತಕಗಳು ಗ್ರಂಥಾಲಯದಲ್ಲಿ ಅಡಕವಾಗಿವೆ. ಆದರೆ ಜಾಗದ ಕೊರತೆಯಿಂದಾಗಿ ಮಾಹಿತಿ ಒದಗಿಸುವ, ವಿದ್ಯಾರ್ಥಿಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವಂತವರಿಗೆ ಅನುಕೂಲವಾಗಬೇಕಿರುವ ಅನೇಕ ಪುಸ್ತಕಗಳು ಇಲ್ಲಿ ಜಾಗವಿಲ್ಲದೇ ಮೂಟೆ ಸೇರಿವೆ.

ತಾಲ್ಲೂಕು ಕೇಂದ್ರದಲ್ಲಿ ಅನೇಕ ಶಾಲಾ, ಕಾಲೇಜುಗಳಿವೆ. ಸಾವಿರಾರು ಜನ ಪದವಿ ಮುಗಿಸುವ ವಿದ್ಯಾರ್ಥಿಗಳು ಇದ್ದಾರೆ. ಅದರಲ್ಲಿ ಕೆಲವರು ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಸಿದ್ಧರಾಗುತ್ತಿದ್ದಾರೆ. ಅಂತವರು ಮಾಹಿತಿಗಾಗಿ ಗ್ರಂಥಾಲಯಕ್ಕೆ ಭೇಟಿ ನೀಡಿದರೆ ಅಲ್ಲಿ ಓದಲು ಸರಿಯಾದ ವ್ಯವಸ್ಥೆ ಇಲ್ಲ. ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಇನ್ನೂ ಮರಿಚಿಕೆಯಾಗಿಯೇ ಉಳಿದಿದೆ.

ಗ್ರಂಥಾಲಯದಲ್ಲಿ ಬಟ್ಟೆ ಗಂಟಿನೊಳಗೆ ಮೂಟೆಯಾಗಿ ಮೂಲೆ ಸೇರಿರುವ ಪುಸ್ತಗಳು

ಗ್ರಂಥಾಲಯ ಪ್ರಾರಂಭವಾಗಿ ಅನೇಕ ವರ್ಷಗಳಾಗಿದೆ. ಇಲ್ಲಿವರೆಗೆ ಶೌಚಾಲಯ ಇಲ್ಲ. ನೀರಿನ ವ್ಯವಸ್ಥೆ ಮರಿಚಿಕೆಯಾಗೇ ಉಳಿದಿದೆ. ಮಳೆಗಾಲದಲ್ಲಿ ಪುಸ್ತಕ ರಕ್ಷಣೆ ನಮಗೆ ಸವಾಲಾಗಿದೆ. ಸೂಕ್ತ ವ್ಯವಸ್ಥೆ ಕೊರತೆಯಿಂದಾಗಿ ಓದುಗರು ಬರುವ ಸಂಖ್ಯೆಯೂ ಕಡಿಮೆಯಾಗಿದೆ ಎನ್ನುತ್ತಾರೆ ಗ್ರಂಥಾಲಯ ಮೇಲ್ವಿಚಾರಕಿ ಲಕ್ಷ್ಮಿ.

ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧನಾಗುತ್ತಿದ್ದೇನೆ. ಗ್ರಂಥಾಲಯಕ್ಕೆ ಭೇಟಿ ಕೊಟ್ಟರೆ ಅಲ್ಲಿ ಓದುವ ವಾತಾವರಣವೇ ಇಲ್ಲ. ಕುಳಿತುಕೊಳ್ಳಲು ಸರಿಯಾದ ಕುರ್ಚಿ ಇಲ್ಲ. ಗಾಳಿ ಬೆಳಕಿನ ವ್ಯವಸ್ಥೆ ಇಲ್ಲವೇ ಇಲ್ಲ
ಕಾರ್ತಿಕ್, ವಿದ್ಯಾರ್ಥಿ
ಓದುವ ಹವ್ಯಾಸ ಇರುವ ನಿವೃತ್ತಿ ಹೊಂದಿದವರು ಗ್ರಂಥಾಲಯಕ್ಕೆ ದಿನ ಪತ್ರಿಕೆ ವಾರ ಪತ್ರಿಕೆ ಪುಸ್ತಕ ಓದುವ ಮೂಲಕ ಸಮಯ ಕಳೆಯಲು ಬರುತ್ತಾರೆ. ಆದರೆ ಇಲ್ಲಿ ವಯಸ್ಸಾದ ಓದುಗರಿಗೆ ಸೂಕ್ತ ವ್ಯವಸ್ಥೆಯೇ ಇಲ್ಲ
ಪರ್ವತಯ್ಯ, ಹಿರಿಯ ನಾಗರಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.