ADVERTISEMENT

ತಿಪಟೂರು: ಮಿಶ್ರ ಬೆಳೆಯಿಂದ ಆದಾಯ ದ್ವಿಗುಣ

ತೆಂಗಿನ ರೋಗ ಹತೋಟಿ, ಜೇನು ಕೃಷಿ ಕ್ಷೇತ್ರೋತ್ಸವ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2023, 4:52 IST
Last Updated 3 ಮಾರ್ಚ್ 2023, 4:52 IST
ತೆಂಗಿನ ಮರಗಳಿಗೆ ಬೇರಿನ ಮೂಲಕ ಕಾಂಡ ಸೋರುವ ರೋಗಕ್ಕೆ ಶಿಲೀಂಧ್ರ ನಾಶಕವನ್ನು ಉಪಚರಿಸುವ ವಿಧಾನ ಕುರಿತು ಪ್ರಾತ್ಯಕ್ಷಿಕೆ ಮೂಲಕ ತೋರಿಸಲಾಯಿತು
ತೆಂಗಿನ ಮರಗಳಿಗೆ ಬೇರಿನ ಮೂಲಕ ಕಾಂಡ ಸೋರುವ ರೋಗಕ್ಕೆ ಶಿಲೀಂಧ್ರ ನಾಶಕವನ್ನು ಉಪಚರಿಸುವ ವಿಧಾನ ಕುರಿತು ಪ್ರಾತ್ಯಕ್ಷಿಕೆ ಮೂಲಕ ತೋರಿಸಲಾಯಿತು   

ತಿಪಟೂರು: ‘ತೆಂಗಿನ ಬೆಳೆಗಾರರು ಆದಾಯ ವೃದ್ಧಿಗೆ ತೆಂಗಿನ ಜೊತೆಗೆ ಅಂತರ ಬೆಳೆ, ಮಿಶ್ರ ಬೆಳೆ ಬೆಳೆಯಲು ಮುಂದಾಗಬೇಕು’ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಚ್.ಆರ್. ಚಂದ್ರಶೇಖರ್ ತಿಳಿಸಿದರು.

ತಾಲ್ಲೂಕಿನ ಕಸಬಾ ಹೋಬಳಿಯ ಮಾದೀಹಳ್ಳಿಯಲ್ಲಿ ಬುಧವಾರ ತೋಟಗಾರಿಕೆ ಇಲಾಖೆಯಿಂದ ದಯಾನಂದ್ ಅವರ ತೆಂಗಿನ ತೋಟದಲ್ಲಿ ರೋಗ ಮತ್ತು ಕೀಟ ನಿರ್ವಹಣೆ ಹಾಗೂ ಜೇನು ಕೃಷಿ ಬಗ್ಗೆ ನಡೆದ ಒಂದು ದಿನದ ಕ್ಷೇತ್ರೋತ್ಸವದಲ್ಲಿ ಅವರು ಮಾತನಾಡಿದರು.

ಕಳೆದ ಕೆಲವು ತಿಂಗಳುಗಳಿಂದ ತಾಲ್ಲೂಕಿನ ತೆಂಗಿನ ಬೆಳೆಯಲ್ಲಿ ಅನೇಕ ರೋಗಗಳು ಕಾಣಿಸಿಕೊಂಡಿವೆ. ಅದನ್ನು ಹೋಗಲಾಡಿಸಲು ರೈತರು ತೆಂಗಿನ ತೋಟಗಳಲ್ಲಿ ಸಮಗ್ರ ಕೀಟ ಮತ್ತು ರೋಗ ನಿರ್ವಹಣೆ ಕ್ರಮ ಅನುಸರಿಸಬೇಕು ಎಂದರು.

ADVERTISEMENT

ಇಲಾಖೆಯಿಂದ ಅನೇಕ ರೋಗ ನಿರೋಧಕ ಜೈವಿಕ ವಿಧಾನ ಅನುಸರಿಸಲಾಗುತ್ತಿದೆ. ಸತತ ಪರಿಶ್ರಮ, ಸಮಗ್ರ ನಿರ್ವಹಣೆಯಿಂದ ರೋಗಗಳನ್ನು ಹತೋಟಿಗೆ ತರಲು ಸಾಧ್ಯ. ತೆಂಗು ಬೆಳೆಗಾರರು ಆದಾಯ ವೃದ್ಧಿಗಾಗಿ ಅಂತರ ಬೆಳೆಗಳಾಗಿ ಕೋಕೊ, ಕಾಳುಮೆಣಸು, ಜಾಯಿಕಾಯಿ, ಬೆಣ್ಣೆ ಹಣ್ಣು ಬೆಳೆಯಬೇಕೆಂದು ತಿಳಿಸಿದರು.

ತೋಟಗಾರಿಕೆ ಇಲಾಖೆಯ ಸಹಾಯಕ ತೋಟಗಾರಿಕೆ ನಿರ್ದೇಶಕ ಡಾ.ಕೆ.ಎಸ್. ನವೀನ್ ಕುಮಾರ್ ಮಾತನಾಡಿ, ತೆಂಗು ಬೆಳೆಯಲ್ಲಿ ಪ್ರಮುಖವಾಗಿರುವ ರೋಗ ಮತ್ತು ಕೀಟಗಳು ಹಾಗೂ ಅವುಗಳ ಹತೋಟಿ ಬಗ್ಗೆ ಮಾಹಿತಿ ನೀಡಿದರು.

ತೆಂಗಿನ ಮರಗಳಿಗೆ ಬೇರಿನ ಮೂಲಕ ಕಾಂಡ ಸೋರುವ ರೋಗಕ್ಕೆ ಶಿಲೀಂಧ್ರ ನಾಶಕವನ್ನು ಉಪಚಾರ ಮಾಡುವ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿದರು. ಇಲಾಖೆಯ ದೊಡ್ಡ ಪ್ರಮಾಣದ ಪ್ರಯೋಗ ಶಾಲೆಯಲ್ಲಿ ತೆಂಗಿನ ಬಿಳಿನೊಣ ಬಾಧೆ ಹತೋಟಿಗಾಗಿ ಉತ್ಪಾದನೆ ಮಾಡುವ ಐಸೀರಿಯಾ ಶೀಲಿಂಧ್ರ ನಾಶಕವನ್ನು ರೈತರಿಗೆ ಉಚಿತವಾಗಿ
ವಿತರಿಸಲಾಯಿತು.

ಕ್ಷೇತ್ರೋತ್ಸವದಲ್ಲಿ ಪ್ರಗತಿಪರ ರೈತ ಮಹಿಳೆ ರೇಖಾ, ಇಲಾಖೆಯ ಜೇನು ಕೃಷಿ ಸಹಾಯಕ ಶ್ರೀಧರ್, ತೋಟಗಾರಿಕೆ ಇಲಾಖೆಯ ಅಧಿಕಾರಿಗಳಾದ ಎಂ. ಕರಣ್, ಕೆ.ಎನ್. ರಕ್ಷಿತ, ಅಶ್ವಿನಿ ಬಡ್ನಿ, ಮಲ್ಲಿಕಾರ್ಜುನ ಹೆಬ್ಬಾಳ, ಗವಿರಂಗನಾಥಸ್ವಾಮಿ, ಶಿವಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.