ADVERTISEMENT

ಡಾ.ಕಾರ್ನಾಡ್ ನಿಧನ: ಪಾಲಿಕೆ ತುರ್ತು ಸಭೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2019, 16:00 IST
Last Updated 10 ಜೂನ್ 2019, 16:00 IST

ತುಮಕೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಗಿರೀಶ್ ಕಾರ್ನಾಡ್ ಅವರ ಗೌರವಾರ್ಥ ಸರ್ಕಾರ ರಜೆ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಮೇಯರ್ ಲಲಿತಾ ರವೀಶ್ ಅಧ್ಯಕ್ಷತೆಯಲ್ಲಿ ನಡೆಯಲಿದ್ದ ಮಹಾನಗರ ಪಾಲಿಕೆ ತುರ್ತು ಸಭೆಯನ್ನು ಜೂನ್ 13ಕ್ಕೆ ಮುಂದೂಡಲಾಯಿತು.

ಡಾ.ಗಿರೀಶ್ ಕಾರ್ನಾಡ್ ಹಾಗೂ ಪೌರಾಡಳಿತ ಸಚಿವರಾಗಿದ್ದ ಸಿ.ಎಸ್.ಶಿವಳ್ಳಿ ಅವರ ನಿಧನಕ್ಕೆ ಸಂತಾಪ ಕೋರಿ ಸಭೆ ಶ್ರದ್ಧಾಂಜಲಿಯನ್ನು ಸಲ್ಲಿಸಿತು.

ಸಂಸದ ಜಿ.ಎಸ್.ಬಸವರಾಜ್ ಮಾತನಾಡಿ, ‘ಡಾ.ಗಿರೀಶ್ ಕಾರ್ನಾಡ್ ಅವರು ದೇಶ ಕಂಡ ಶ್ರೇಷ್ಠ ಸಾಹಿತಿ, ನಾಟಕಕಾರರು, ಭಾಷಾ ಜ್ಞಾನಿಯಾಗಿದ್ದರು. ಜ್ಞಾನಪೀಠ ಪ್ರಶಸ್ತಿ ಪಡೆದಿದ್ದ ಅವರು ಕರ್ನಾಟಕಕ್ಕೆ ದೇಶ, ವಿದೇಶಗಳಲ್ಲಿ ಹೆಸರು ತಂದುಕೊಟ್ಟವರು. ಇಂಥವರು ನಮ್ಮ ನಾಡಿನವರು ಎಂದು ಹೇಳಿಕೊಳ್ಳಲು ಹೆಮ್ಮೆ’ ಎಂದು ನುಡಿದರು.

ADVERTISEMENT

‘ಸಚಿವರಾಗಿದ್ದ ಸಿ.ಎಸ್.ಶಿವಳ್ಳಿ ಅವರೂ ಜನಸ್ನೇಹಿ ಜನಪ್ರತಿನಿಧಿಯಾಗಿದ್ದರು. ಕ್ಷೇತ್ರದ ಅಭಿವೃದ್ಧಿ, ಬಡವರ ಪರ ಕಾಳಜಿಯುಳ್ಳವರಾಗಿದ್ದರು. ಕಿರಿಯ ವಯಸ್ಸಿನಲ್ಲೇ ಅವರು ನಿಧನವಾಗಿದ್ದು ರಾಜ್ಯ ಒಬ್ಬ ಉತ್ತಮ ಪ್ರಜಾಪ್ರತಿನಿಧಿ ಕಳೆದುಕೊಂಡಂತಾಗಿದೆ’ ಎಂದು ಹೇಳಿದರು.

ಈ ಇಬ್ಬರು ಮಹನೀಯರ ಅಗಲಿಕೆಯಿಂದ ತುಂಬಲಾರದ ನಷ್ಟವಾಗಿದೆ ಎಂದು ನುಡಿದರು.

ಮೇಯರ್ ಲಲಿತಾ ರವೀಶ್ ಅಧ್ಯಕ್ಷತೆ ವಹಿಸಿದ್ದರು. ಉಪಮೇಯರ್ ಬಿ.ಎಸ್.ರೂಪಶ್ರೀ, ಆಯುಕ್ತ ಟಿ.ಭೂಬಾಲನ್ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.