ಶಿರಾ: ನಗರದ ಜಾಜಮ್ಮನಕಟ್ಟೆಯಲ್ಲಿ ಜೈವಿಕ ತಂತ್ರಜ್ಞಾನವನ್ನು ಬಳಸಿಕೊಂಡು ನೀರನ್ನು ನೈಸರ್ಗಿವಾಗಿ ಶುದ್ಧೀಕರಿಸುವ ವಿನೂತನ ಪ್ರಯೋಗಕ್ಕೆ ಶುಕ್ರವಾರ ಶಾಸಕ ಟಿ.ಬಿ.ಜಯಚಂದ್ರ ಚಾಲನೆ ನೀಡಿದರು.
ತಮಿಳುನಾಡಿನ ‘ಮಿರಾಕಲ್ ಇನ್ ವಾಟರ್ ಸಲ್ಯೂಷನ್’ ಕಂಪನಿ ಸಹಯೋಗದಲ್ಲಿ 15 ದಿನ ಪ್ರಾಯೋಗಿಕವಾಗಿ ಯೋಜನೆ ರೂಪಿಸಿದ್ದಾರೆ.
ಶಾಸಕ ಟಿ.ಬಿ.ಜಯಚಂದ್ರ ಮಾತನಾಡಿ, ನಗರದ ಜಾಜಮ್ಮನಕಟ್ಟೆಯಲ್ಲಿ ನಡೆಯುವ 15 ದಿನಗಳ ಪ್ರಾಯೋಗಿಕ ಪರೀಕ್ಷೆಯ ಸಾಧಕ– ಭಾದಕಗಳನ್ನು ಗಮನಿಸಿ ಯೋಜನೆ ಯಶಸ್ವಿಯಾದರೆ ಶಿರಾ ನಗರ ಸೇರಿದಂತೆ ರಾಜ್ಯದ ಇತರೆಡೆಗೆ ವಿಸ್ತರಿಸಲಾಗುವುದು ಎಂದರು.
ನೀರಿನಲ್ಲಿರುವ ಪಾಚಿ, ಫಂಗಸ್, ರಾಸಾಯನಿಕ ವಸ್ತುಗಳು ಸೇರಿದಂತೆ ನಿರುಪಯುಕ್ತ ವಸ್ತುಗಳನ್ನು ನಾಶಪಡಿಸಿ ನೀರನ್ನು ನೈಸರ್ಗಿವಾಗಿ ಶುದ್ಧೀಕರಿಸುವ ಕೆಲಸ ಮಾಡಲಾಗುವುದು. ಇದರಿಂದಾಗಿ ಸೊಳ್ಳೆಗಳ ನಿರ್ಮೂಲನೆ ಜೊತೆಗೆ ನೀರು ಒಂದೇ ಕಡೆ ಸಂಗ್ರಹವಾಗಿ ದುರ್ವಾಸಬೆ ಬರುವುದನ್ನು ತಡೆಯಬಹುದಾಗಿದೆ. ಉತ್ತಮ ಪರಿಸರ ನಿರ್ಮಾಣಕ್ಕೂ ಅನುಕೂಲವಾಗುವುದು ಎಂದರು.
ಕಂಪನಿಯ ವ್ಯವಸ್ಥಾಪಕ ಸ್ಟೀಪನ್ ರಾಜ್ ಮಾತನಾಡಿ, ‘ಬೆಸಿಲಿಸ್ ಕನ್ಸೋಲ್ಟಿಯಂ’ ಎನ್ನುವ ಬ್ಯಾಕ್ಟೀರಿಯವನ್ನು ನೀರಿಗೆ ಸೇರಿಸುವ ಮೂಲಕ ನೈಸರ್ಗಿಕವಾಗಿ ನೀರನ್ನು ಶುದ್ಧೀಕರಿಸಬಹುದಾಗಿದೆ ಎಂದು ಹೇಳಿದರು.
ತಮಿಳುನಾಡಿನ ವಿವಿಧ ಕಡೆ ಯೋಜನೆ ಈಗಾಗಲೇ ಯಶಸ್ವಿಯಾಗಿದೆ. ಇದರಿಂದ ಯಾವುದೇ ಅಡ್ಡಪರಿಣಾಮ ಉಂಟಾಗುವುದಿಲ್ಲ. ಚರಂಡಿ, ಸಾರ್ವಜನಿಕ ಶೌಚಾಲಯ ಸೇರಿದಂತೆ ನೀರು ಸಂಗ್ರಹವಾಗುವ ಎಲ್ಲ ಕಡೆ ಬಳಕೆ ಮಾಡಬಹುದಾಗಿದೆ ಎಂದರು.
ಕಂಪನಿ ಸ್ವಂತ ಖರ್ಚಿನಲ್ಲಿ 15 ದಿನ ನಗರಸಭೆ ತೋರಿಸಿದ ಕಡೆ ಪ್ರಾಯೋಗಿಕವಾಗಿ ಶುದ್ಧೀಕರಿಸುವ ಕೆಲಸ ಮಾಡುವ ಮೂಲಕ ಯೋಜನೆಯನ್ನು ಮನದಟ್ಟು ಮಾಡಿಕೊಡಲಾಗುವುದು ಎಂದರು.
ನಗರಸಭೆ ಪೌರಾಯುಕ್ತ ರುದ್ರೇಶ್, ಅಧ್ಯಕ್ಷ ಜೀಷಾನ್ ಮೆಹಮೂದ್, ಉಪಾಧ್ಯಕ್ಷ ಲಕ್ಷ್ಮೀಕಾಂತ್, ಸ್ಥಾಯಿ ಸಮಿತಿ ಅಧ್ಯಕ್ಷ ಅಜಯ್ ಕುಮಾರ್, ಸದಸ್ಯರಾದ ಆರ್.ರಾಮು, ಬಿ.ಎಂ.ರಾಧಾಕೃಷ್ಣ, ಆರ್.ರಾಘವೇಂದ್ರ, ಸ್ವಾತಿ ಮಂಜೇಶ್, ಆಶ್ರಮ ಸಮಿತಿ ಸದಸ್ಯ ವಾಜರಹಳ್ಳಿ ರಮೇಶ್, ಸೊರೆಕುಂಟೆ ಸತ್ಯನಾರಾಯಣ, ನರೇಶ್ ಗೌಡ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.