ಕುಣಿಗಲ್: ಶಾಸಕ ರಂಗನಾಥ್ ಮಂಗಳವಾರ ಪುರಸಭೆಯ ಐದು ವಾರ್ಡ್‌ಗಳ ಮನೆಮನೆಗೆ ಭೇಟಿ ನೀಡಿ ಇ-ಖಾತೆ ಮಾಡಿಸುವಂತೆ ಸಲಹೆ ನೀಡಿದರು.
19ನೇ ವಾರ್ಡ್‌ನಲ್ಲಿ ಇ- ಖಾತಾ ಅಭಿಯಾನಕ್ಕೆ ಚಾಲನೆ ನೀಡಿದ ರಂಗನಾಥ್, ಅಧಿಕೃತ ಮತ್ತು ಅನಧಿಕೃತ ಆಸ್ತಿ ದಾಖಲೆಗಳನ್ನು ಪಡೆಯಲು ಸರ್ಕಾರ ಇ- ಖಾತಾ, ಬಿ–ಖಾತಾಗಳಿಗೆ ಅವಕಾಶ ನೀಡಿ ಎರಡು ತಿಂಗಳಾಗಿವೆ. ನಿರೀಕ್ಷಿತ ಪ್ರಗತಿ ಕಾಣದ ಕಾರಣ ಮನೆಮನೆಗೆ ಭೇಟಿ ನೀಡಿ ತೆರಿಗೆ ಪಾವತಿಸಿ ಆಸ್ತಿ ದಾಖಲೆಗಳನ್ನು ಪಡೆದುಕೊಳ್ಳಲು ತಿಳಿಸಿದರು.
ಪಟ್ಟಣದಲ್ಲಿ 6,500 ಅಧಿಕೃತ ಮತ್ತು 3,700 ಅನಧಿಕೃತ ಆಸ್ತಿಗಳಿದ್ದು, ಎಲ್ಲ ಆಸ್ತಿಗಳಿಗೂ ದಾಖಲೆಗಳನ್ನು ಪಡೆದುಕೊಳ್ಳಲು ಮೇ 10ರವರೆಗೆ ಅವಕಾಶ ನೀಡಲಾಗಿದ್ದು, ಸದುಪಯೋಗ ಪಡೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಉಳಿದ ವಾರ್ಡ್‌ಗಳಿಗೂ ಭೇಟಿ ನೀಡಿ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ಮಂಜುಳಾ, ಇ- ಖಾತಾ ಪಡೆದುಕೊಳ್ಳಲು ಪುರಸಭೆ ಕಚೇರಿಯಲ್ಲಿ ಪ್ರತ್ಯೇಕ ಕೌಂಟರ್ ಮತ್ತು ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಪುರಸಭೆ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷ ಮಲ್ಲಿಪಾಳ್ಯ ಶ್ರೀನಿವಾಸ್, ಸದಸ್ಯರಾದ ದೇವರಾಜು, ರಂಗಸ್ವಾಮಿ, ಪರಿಸರ ಎಂಜನಿಯರ್ ಚಂದ್ರಶೇಖರ್, ಮಾಜಿ ಸದಸ್ಯ ಶಂಕರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.