ADVERTISEMENT

ಈಜಿಮೈಂಡ್ ಕಂಪನಿ ಮುಖ್ಯಸ್ಥನ ಪತ್ನಿ ಬಂಧನ

​ಪ್ರಜಾವಾಣಿ ವಾರ್ತೆ
Published 17 ಜೂನ್ 2019, 18:42 IST
Last Updated 17 ಜೂನ್ 2019, 18:42 IST

ತುಮಕೂರು: ನಗರದ ಈಜಿಮೈಂಡ್ ಮಾರ್ಕೆಟಿಂಗ್ ಇಂಡಿಯಾ ಪ್ರೈ.ಲಿ ಕಂಪನಿಯು ಜನರಿಗೆ ₹ 500 ಕೋಟಿಗೂ ಅಧಿಕ ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಯ ಮುಖ್ಯಸ್ಥ ಮಹಮ್ಮದ್ ಅಸ್ಲಂ ಅವರ ಪತ್ನಿ ಸೂಫಿಯಾ ಖಾನಂ ಅವರನ್ನು ನಗರ ಠಾಣೆ ‍ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಮಹಮ್ಮದ್ ಅಸ್ಲಂ, ಆತನ ಪತ್ನಿ ಸೂಫಿಯಾ ಖಾನಂ, ಸಂಬಂಧಿ ಇಬ್ರಾಹಿಂ ಕಲೀಲ್, ವ್ಯವಸ್ಥಾಪಕ ಶುಮಾಜ್ ಅಹಮ್ಮದ್, ಕಾರು ಚಾಲಕ ಅಸದ್ ವಿರುದ್ಧ ಪ್ರಕರಣ ದಾಖಲಾಗಿದೆ. ‘ಪ್ರಮುಖ ಆರೋಪಿ ಮಹಮ್ಮದ್ ಅಸ್ಲಂ ದುಬೈಗೆ ಪರಾರಿ ಆಗಿದ್ದಾನೆ ಎನ್ನುತ್ತಿದ್ದಾರೆ. ಆದರೆ ಅದು ಖಚಿತವಾಗಿಲ್ಲ. ಎಲ್ಲಿ ಹೋಗಿದ್ದಾನೆ ಎನ್ನುವುದು ಪತ್ತೆ ಆಗಿಲ್ಲ. ಎಲ್ಲ ದಿಕ್ಕಿನಲ್ಲಿಯೂ ತನಿಖೆ ನಡೆಯುತ್ತಿದೆ’ ಎಂದು ಪ್ರಕರಣದ ತನಿಖಾಧಿಕಾರಿಯಾದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾ ರಾಣಿ ತಿಳಿಸಿದ್ದಾರೆ.

‘ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ರಾತ್ರಿ ಒಂದು ದೂರು ದಾಖಲಾಗಿತ್ತು. ಬಳಿಕ 20 ಮಂದಿ ದೂರು ದಾಖಲಿಸಲು ಬಂದಿದ್ದಾರೆ. ಹೂಡಿಕೆಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಳ್ಳುತ್ತೇವೆ. ಕೆಲವರ ವಿಚಾರಣೆ ನಡೆದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.