ಗುಬ್ಬಿ: ಸರ್ಕಾರವು ಶಿಕ್ಷಣವನ್ನು ಗ್ಯಾರಂಟಿ ಯೋಜನೆ ಪಟ್ಟಿಯಲ್ಲಿ ಸೇರಿಸಿ ಅವರ ಅಧಿಕಾರ ಅವಧಿಯಲ್ಲಿ ಸಾಧಿಸುವ ಕ್ರಿಯಾ ಯೋಜನೆ ರೂಪಿಸುವ ಬದ್ಧತೆ ತೋರಬೇಕಿದೆ ಎಂದು ಲೇಖಕ ಬರಗೂರು ರಾಮಚಂದ್ರಪ್ಪ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ನಡೆದ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್, ಎನ್‌ಸಿಸಿ, ರೆಡ್ ಕ್ರಾಸ್, ಸ್ಕೌಟ್ಸ್ ಮತ್ತು ಗೈಡ್ಸ್ ವಾರ್ಷಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಶಿಕ್ಷಣವು ವಿದ್ಯಾರ್ಥಿಗಳಲ್ಲಿ ಅಂತಃಕರಣ ಮೂಡಿಸುವಂತಿರಬೇಕು. ಜಾತಿ, ಧರ್ಮಗಳ ಘರ್ಷಣೆ ನಡುವೆ ಯುವ ಮನಸ್ಸುಗಳು ಹಾಳಾಗುತ್ತಿವೆ. ಜಾತಿ ಧರ್ಮಗಳಾಚೆ ಮನುಷ್ಯತ್ವ ರೂಢಿಸಿಕೊಳ್ಳುವ ಮನಸ್ಥಿತಿಯನ್ನು ಶಿಕ್ಷಣ ಪದ್ಧತಿ ಕಲಿಸುವಂತಾಗಬೇಕು ಎಂದು ಹೇಳಿದರು.
ಶೈಕ್ಷಣಿಕ ಅಸಮಾನತೆಯನ್ನು ಚಿಕ್ಕ ಮಕ್ಕಳಲ್ಲಿಯೇ ಬಿತ್ತಲಾಗುತ್ತಿರುವುದು ವಿಪರ್ಯಾಸ. ಶೈಕ್ಷಣಿಕ ತಾರತಮ್ಯ ಹೋಗಲಾಡಿಸಲು ಸರ್ಕಾರ ಬದ್ಧತೆ ತೋರಬೇಕು. ಸರ್ಕಾರಿ ಶಾಲೆಗಳನ್ನು ಸುಧಾರಣೆ ಮಾಡುವತ್ತ ಸರ್ಕಾರ ಚಿಂತಿಸಬೇಕು ಎಂದು ಹೇಳಿದರು.
ಪ್ರಸ್ತುತ ಸಂದರ್ಭದಲ್ಲಿ ಶಿಕ್ಷಣವನ್ನು ಉದ್ಯಮ ವಲಯ ನಿಯಂತ್ರಿಸುತ್ತಿದ್ದು, ಶೈಕ್ಷಣಿಕ ವಾತಾವರಣ ಬದಲಾವಣೆ ಮಾಡುವತ್ತ ಚಿಂತನೆ ನಡೆಸಬೇಕಾದ ಅಗತ್ಯವಿದೆ ಎಂದು ಹೇಳಿದರು.
ಬೇರೆಯವರ ಅಭಿರುಚಿಗೆ ತಕ್ಕಂತೆ ವರ್ತಿಸದೆ ಯುವ ಪೀಳಿಗೆ ಪ್ರಾಮಾಣಿಕತೆ, ಬದ್ಧತೆ ಹಾಗೂ ಸಂಕಲ್ಪ ರೂಢಿಸಿಕೊಂಡು ಮಹತ್ತರ ಸಾಧನೆಯತ್ತ ಗಮನ ಹರಿಸಬೇಕು ಎಂದು ಹೇಳಿದರು.
ಕಿರುತೆರೆ ನಟ ಹನುಮಂತೇಗೌಡ ಮಾತನಾಡಿ, ಸದ್ಯದ ಶಿಕ್ಷಣ ವ್ಯವಸ್ಥೆ ಆಸೆ ಬುರುಕುತನ ಸೃಷ್ಟಿಸುವಂತಿರುವುದು ಬೇಸರದ ಸಂಗತಿ. ಮಕ್ಕಳಲ್ಲಿ ಕ್ರಿಯಾಶೀಲತೆ ಕೊರತೆ ಎದ್ದು ಕಾಣುತ್ತಿದೆ. ಸಾಮಾನ್ಯ ಜ್ಞಾನದ ಅರಿವು ಕ್ಷೀಣಿಸುತ್ತಿದೆ. ಸರ್ಕಾರ ಶೈಕ್ಷಣಿಕ ಕ್ಷೇತ್ರದ ಸುಧಾರಣೆಗಾಗಿ ಸರ್ಕಾರಿ ಶಾಲೆ ಹಾಗೂ ಆಸ್ಪತ್ರೆಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕಿದೆ ಎಂದು ಹೇಳಿದರು.
ಪ್ರಾಂಶುಪಾಲ ಪ್ರಸನ್ನ ಮಾತನಾಡಿ, ಸಾಧನೆಯಿಂದ ಮಾತ್ರ ಎಲ್ಲರ ಗಮನ ಸೆಳೆಯುವ ಜೊತೆಗೆ ಸಮಾಜದಲ್ಲಿ ಉತ್ತಮ ಮನ್ನಣೆ ಪಡೆದುಕೊಳ್ಳಲು ಸಾಧ್ಯ. ಯುವ ಪೀಳಿಗೆ ಮುಂದಿನ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸಾಗಿದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದರು.
ಗಾಯಕ ರಂಗನಾಥ್ ಹಾಡುಗಳ ಮೂಲಕ ವಿದ್ಯಾರ್ಥಿಗಳನ್ನು ರಂಜಿಸಿದರು. ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಕಾಲೇಜಿನ ಪ್ರತಿಭಾನ್ವಿತ ಹಾಗೂ ವಿವಿಧ ಚಟುವಟಿಕೆಗಳಲ್ಲಿ ವಿಜೇತ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ‘ನಮ್ಮ ಕ್ಯಾಂಪಸ್‌ನ ಹಕ್ಕಿಗಳು’ ಎಂಬ ಇ-ಪುಸ್ತಕ ಬಿಡುಗಡೆ ಗೊಳಿಸಲಾಯಿತು.
ಕಾಲೇಜಿನ ಶೈಕ್ಷಣಿಕ ಡೀನ್ ಒ. ನಾಗರಾಜು, ಸಾಂಸ್ಕೃತಿಕ ಸಂಚಾಲಕ ಟಿ. ತಿಮ್ಮಣ್ಣ, ವ್ಯವಸ್ಥಾಪಕ ಶಿವಯ್ಯ, ಕಾಲೇಜಿನ ಪ್ರಾಧ್ಯಾಪಕರು, ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.