ADVERTISEMENT

ಗುರಿ ಸಾಧನೆಗೆ ಮಾರ್ಗದರ್ಶನ ಅವಶ್ಯ: ಶುಭಾ ಕಲ್ಯಾಣ್

ಸಿಇಟಿ, ಕಾಮೆಡ್ ಕೆ ಪ್ರಿ ಕೌನ್ಸೆಲಿಂಗ್ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 18 ಮೇ 2019, 5:45 IST
Last Updated 18 ಮೇ 2019, 5:45 IST
ತುಮಕೂರು ಜಿಲ್ಲಾ ಪಂಚಾಯಿತಿ ಸಿಇಒ ಶುಭಾ ಕಲ್ಯಾಣ್ ಮಾತನಾಡಿದರು.
ತುಮಕೂರು ಜಿಲ್ಲಾ ಪಂಚಾಯಿತಿ ಸಿಇಒ ಶುಭಾ ಕಲ್ಯಾಣ್ ಮಾತನಾಡಿದರು.   

ತುಮಕೂರು: ಪ್ರಜಾವಾಣಿ ಡೆಕ್ಕನ್ ಹೆರಾಲ್ಡ್ ವತಿಯಿಂದ ಆಯೋಜಿಸಲಾದ ಸಿಇಟಿ ಕಾಮೆಡ್ ಕೆಪ್ರಿ - ಕೌನ್ಸೆಲಿಂಗ್ ಕಾರ್ಯಕ್ರಮ ತುಮಕೂರು ವಿಶ್ವವಿದ್ಯಾನಿಲಯದ ಸದಾನಂದ ಮೈಯಾ ಬ್ಲಾಕ್ ಸಭಾಂಗಣದಲ್ಲಿ ಪ್ರಾರಂಭಗೊಂಡಿತು.

ಉದ್ಘಾಟನೆ ಮಾಡಿದ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್, ‘ವಿದ್ಯಾರ್ಥಿಗಳಿಗೆ ಹೆಚ್ಚಿನ ಸಮಯ ಅವಕಾಶ ಇರುತ್ತದೆ. ಆ ಸಮಯ ಸದ್ಬಳಕೆ ಮಾಡಿಕೊಳ್ಳಬೇಕು. ಸಾಮಾಜಿಕ ಜಾಲತಾಣ ಅತೀಯಾದ ಬಳಕೆ ರೋಗದಂತೆ ಅವರಿಸಿಕೊಳ್ಳುತ್ತಿದೆ. ಈ ಬಗ್ಗೆ ಎಚ್ಚರಿಕೆವಹಿಸಿ ಅಧ್ಯಯನದತ್ತ ಗಮನ ಹರಿಸಬೇಕು. ಯೋಜಮೆ ಎಂಬುದು ಯಶಸ್ಸಿಗೆ ಬಹುಮುಖ್ಯವಾದುದು. ಅಧ್ಯಯನದಲ್ಲಿ ಗಮನ ಇರಲಿ. ಬೇರೆಯವರೊಂದಿಗೆ ಹೋಲಿಕೆ ಮಾಡಿಕೊಳ್ಳಬಾರದು. ನಿಮ್ಮ ಗುರಿ ಸಾಧನೆಯತ್ತ ಲಕ್ಷ್ಯವಿರಲಿ’ ಎಂದು ನುಡಿದರು.

ನೀವು ದೇಶವ್ಯಾಪಿ ಇರುವ ನಿಮ್ಮಂತಹ ವಿದ್ಯಾರ್ಥಿಗಳೊಂದಿಗೆ ಸ್ಪರ್ಧೆ ಮಾಡುತ್ತಿದ್ದೀರಿ. ಹೀಗಾಗಿ ಹೆಚ್ಚಿನ ಪರಿಶ್ರಮ ಅಗತ್ಯವಾಗಿದೆ ಎಂದು ನುಡಿದರು.

ADVERTISEMENT

ವೈದ್ಯಕೀಯ, ಎಂಜಿನಿಯರಿಂಗ್ ಕೋರ್ಸ್ ಸಿಗದೇ ಇದ್ದರೆ ನಿರಾಶರಾಗುವ ಅಗತ್ಯವಿಲ್ಲ. ಸ್ಪರ್ಧಾತ್ಮಕ ಯುಗದಲ್ಲಿ ಸಾಕಷ್ಟು ಅವಕಾಶಗಳಿವೆ ಎಂದರು.

ಮುಖ್ಯ ಅತಿಥಿ ತುಮಕೂರು ವಿವಿ ಕುಲಪತಿ ಪ್ರೊ. ಸಿದ್ದೇಗೌಡ ಮಾತನಾಡಿ, ‘ಸ್ಪರ್ಧಾತ್ಮಕ ಯುಗದಲ್ಲಿ ಏನೆಲ್ಲ ತಾಂತ್ರಿಕ ನೆರವು ಇದ್ದರೂ ಮಾರ್ಗದರ್ಶನ ಅಗತ್ಯವಾಗಿದೆ. ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸಲು ಆಯೋಜಿಸಿರುವ ಇಂತಹ ಮಾರ್ಗದರ್ಶನ ಶಿಬಿರ ಅವಶ್ಯ’ ಎಂದರು.

ಸಮುದಾಯ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಉಪಯುಕ್ತವಾದ ಇಂತಹ ಕಾರ್ಯಗಳಿಗೆ ವಿಶ್ವವಿದ್ಯಾನಿಲಯ ಸದಾ ಕೈ ಜೋಡಿಸುತ್ತದೆ ಎಂದು ನುಡಿದರು.

ಸಂಪನ್ಮೂಲ ವ್ಯಕ್ತಿಗಳಾದ ಡಾ.ಎಸ್.ರಾಜೇಶ್ವರ, ಡಾ.ಆರ್.ಎಂ. ಸ್ವಾಮಿ, ಪಿ.ಜೆ.ಜಯಶೀಲ, ಎಸ್.ಸದಾಶಿವಯ್ಯ, ಪ್ರಜಾವಾಣಿ ಬ್ಯೂರೊ ಮುಖ್ಯಸ್ಥ ಎನ್. ಸಿದ್ದೇಗೌಡ, ಪ್ರಸರಣ ವಿಭಾಗದ ರಾಘವೇಂದ್ರ ನಾಯರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.