ADVERTISEMENT

ಗ್ರಾಮೀಣ ಪ್ರದೇಶದಲ್ಲಿ ರಂಗೇರುತ್ತಿದೆ ಕಣ

ಶಿರಾ: ಮೂರು ಪ್ರಮುಖ ಪಕ್ಷಗಳಿಗೂ ಪ್ರತಿಷ್ಠೆಯ ಕಣ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2020, 7:22 IST
Last Updated 13 ಡಿಸೆಂಬರ್ 2020, 7:22 IST

ಶಿರಾ: ತಾಲ್ಲೂಕಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ.

ಉಪಚುನಾವಣೆಯ ಕಾವು ಏರುವುದಕ್ಕೆ ಮುನ್ನವೇ ಗ್ರಾಮ ಪಂಚಾಯಿತಿ ಚುನಾವಣೆ ಬಂದಿದೆ ಈ ಚುನಾವಣೆ ಪಕ್ಷಾತೀತವಾಗಿದ್ದರೂ, ರಾಜಕೀಯ ಪಕ್ಷಗಳು ತಮ್ಮದೇ ಪ್ರಭಾವ ಬೀರುತ್ತಿವೆ. ತಳಮಟ್ಟದಲ್ಲಿ ಪಕ್ಷವನ್ನು ಸಧೃಡಗೊಳಿಸಲು ಕಸರತ್ತು ನಡೆಸುತ್ತಿವೆ.

ತಾಲ್ಲೂಕಿನ 42 ಗ್ರಾಮ ಪಂಚಾಯಿತಿಗಳಿಗೆ 660 ಮಂದಿ ಸದಸ್ಯರನ್ನು ಆಯ್ಕೆ ಮಾಡಬೇಕಿದ್ದು ರಾಜಕೀಯ ಪಕ್ಷಗಳು ತಮ್ಮ ಬೆಂಬಲಿಗರನ್ನು ಹೆಚ್ಚು ಗೆಲ್ಲಿಸಿಕೊಳ್ಳಲು ಕಸರತ್ತು ನಡೆಸುತ್ತಿವೆ.

ADVERTISEMENT

ತಾಲ್ಲೂಕಿನಲ್ಲಿ ಇದುವರೆಗೂ ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿಗರ ಮಧ್ಯೆ ನೇರ ಸ್ಪರ್ಧೆ ನಡೆಯುತ್ತಿತ್ತು. ಆದರೆ ಈ ಬಾರಿ ಬಿಜೆಪಿ ಸಹ ಪ್ರಬಲವಾಗಿರುವುದರಿಂದ ತ್ರಿಕೋನ ಸ್ಪರ್ಧೆ ನಡೆಯಲಿದೆ.

ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಸಿ.ಎ.ರಾಜೇಶ್ ಗೌಡ ಗೆಲುವು ಸಾಧಿಸಿದ ನಂತರ ತಾಲ್ಲೂಕಿನಲ್ಲಿ ‌ರಾಜಕೀಯ ಚಿತ್ರಣ ಬದಲಾಗಿದೆ. ಜೊತೆಗೆ ಬಿಜೆಪಿಯ ಚಿದಾನಂದ ಎಂ.ಗೌಡ ಅವರು ವಿಧಾನಸಭೆಯ ಆಗ್ನೇಯ ಪದವೀಧರ ಕ್ಷೇತ್ರದಿಂದ ಆಯ್ಕೆಯಾಗಿದ್ದು ಬಿಜೆಪಿಗೆ ಆನೆ ಬಲ ಬಂದಂತಾಗಿದೆ.

ಬಿ.ಕೆ.ಮಂಜುನಾಥ್ ಅವರಿಗೆ ನಾರು ಅಭಿವೃದ್ಧಿ ಮಂಡಳಿ ಹಾಗೂ ಎಸ್‌ಆರ್‌ ಗೌಡ ಅವರನ್ನು ರೇಷ್ಮೆ ಉದ್ಯಮ ನಿಗಮದ ಅಧ್ಯಕ್ಷರಾಗಿ ಆಯ್ಕೆ ಮಾಡುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಕ್ಷಕ್ಕೆ ಹೊಸ ಚೈತನ್ಯ ನೀಡಿದ್ದು, ಚುನಾವಣೆಗೆ ಹೊಸ ರಂಗು ಮೂಡಿಸಿದೆ.

ಕಾಂಗ್ರೆಸ್ ಮತ್ತು ಬಿಜೆಪಿ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ. ತಳಮಟ್ಟದಲ್ಲಿ ಬಿಜೆಪಿ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಈ ಚುನಾವಣೆ ವೇದಿಕೆಯಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ನೆಲೆಯನ್ನು ಉಳಿಸಿಕೊಳ್ಳುವ ಸತ್ವ ಪರೀಕ್ಷೆ ಎದುರಾಗಿದೆ.

ಕಾಂಗ್ರೆಸ್ ಉಪಚುನಾವಣೆಯಲ್ಲಿ ಸೋತರೂ ಮುಂದಿನ ಚುನಾವಣೆಗೆ ಸಿದ್ಧತೆ ಪ್ರಾರಂಭಿಸುವಂತೆ ಮಾಜಿ ಸಚಿವ ಟಿ.ಬಿ.ಜಯಚಂದ್ರ ಕಾರ್ಯಕರ್ತರ ಸಭೆ ನಡೆಸಿ ಸೋಲಿನ ಬಗ್ಗೆ ಪರಾಮರ್ಶೆ ನಡೆಸಿ ಕಾರ್ಯಕರ್ತರಲ್ಲಿ ಧೈರ್ಯ ತುಂಬುತ್ತಿದ್ದಾರೆ. ಇವರ ಪುತ್ರ ಸಂಜಯ್ ಜಯಚಂದ್ರ 15 ದಿನಗಳಿಂದ ನಿರಂತರವಾಗಿ ಕಾರ್ಯಕರ್ತರ ಜೊತೆಗೂಡಿ ಅವರ ಸಮಸ್ಯೆಗಳನ್ನು ಅಲಿಸಿ ಪಕ್ಷ ಸಂಘಟಿಸುವ ಮೂಲಕ ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೆಸ್ ಬೆಂಬಲಿಗರನ್ನು ಹೆಚ್ಚು ಗೆಲ್ಲಿಸಿಕೊಳ್ಳಲು ಪ್ರಯತ್ತಿಸುತ್ತಿದ್ದಾರೆ.

ಒಟ್ಟಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಮುಂದೆ ಬರುವ ಚುನಾವಣೆಗೆ ಮೆಟ್ಟಿಲಾಗುವುದರಿಂದ ಮೂರು ಪಕ್ಷಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.