ತಿಪಟೂರು: ತಾಲ್ಲೂಕಿನ ರಂಗಾಪುರ ಗುರುಪರದೇಶೀಕೇಂದ್ರ ಸ್ವಾಮೀಜಿ ಸಮುದಾಯ ಭವನದಲ್ಲಿ ಮಂಗಳವಾರ ಕೊನೇಹಳ್ಳಿ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದಿಂದ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ನಡೆಯಿತು.
ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಸಾಯನಿಕ ಮುಕ್ತವಾಗಿ ಸಾವಯವ ಕೃಷಿಗೆ ಒತ್ತು ನೀಡಿ, ಸಿರಿಧಾನ್ಯಗಳ ಉತ್ಪಾದನೆಗೆ ಉತ್ತೇಜನ ನೀಡಲು ಕೃಷಿಕರ ಮನೆಗಳಲ್ಲಿ ಅನುಷ್ಠಾನವಾಗಲು ಅಧಿಕಾರಿಗಳು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.
ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದಿಂದ ಮೇ 29ರಿಂದ ಜೂನ್ 12ರ ವರೆಗೂ ವಿಕಸಿತ ಕೃಷಿ ಸಂಕಲ್ಪ ಅಭಿಯಾನವನ್ನು ಪೂರ್ವ ಮುಂಗಾರು ಹಂಗಾಮಿನಲ್ಲಿ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಜರುಗುತ್ತಿವೆ. ಮುಂಗಾರಿಗೆ ಕೃಷಿ ಸಿದ್ಧತೆ ಮಾಡಿಕೊಳ್ಳಲು ರೈತರಿಗೆ ಮಾಹಿತಿ, ಪ್ರಾತ್ಯಕ್ಷಿಕೆ ನೀಡುವ ಕಾರ್ಯಕ್ರಮವಾಗಿದೆ ಎಂದರು.
ಕೆರೆಗೋಡಿ ರಂಗಾಪುರ ಮಠದ ಗುರುಪರದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ರೈತ ಪರವಾಗಿ ಸರ್ಕಾರ ಮತ್ತು ಇಲಾಖೆಗಳು ಶ್ರಮಿಸಿದರೆ ದೇಶದ ಬೆನ್ನಲುಬಾದ ರೈತನ ಬದುಕು ಹಸನಾಗುತ್ತದೆ. ವೈಜ್ಞಾನಿಕವಾಗಿ ಬೆಳೆಗಳನ್ನು ಬೆಳಯಲು ಮಣ್ಣಿನ ಸಾರಾಂಶ ಪರೀಕ್ಷಿಸಬೇಕು. ಉತ್ತಮ ಬಿತ್ತನೆ ಬೀಜಗಳ ಬಗ್ಗೆ ಮಾಹಿತಿ, ನವೀನ ರೀತಿಯ ಗೊಬ್ಬರಗಳ ಬಗ್ಗೆ ರೈತರಿಗೆ ವಿಜ್ಞಾನಿಗಳು ಮಾಹಿತಿ ನೀಡಬೇಕಿದೆ ಎಂದು ಹೇಳಿದರು.
ರಂಗನಾಥ ತೆಂಗು ಉತ್ಪಾದಕರ ಸಂಘದಿಂದ ಶಂಕರಮೂರ್ತಿ, ರಾಜಶೇಖರ್ ಹನಿನೀರಾವರಿ ಯೋಜನೆಯಲ್ಲಿ ಸಹಾಯಧನಕ್ಕೆ ಪಿವಿಸಿ ಪೈಪ್‌ಗಳ ಬಳಕೆಗೆ ಅವಕಾಶ ನೀಡಬೇಕು, ಸೊಗಡು ಜನಪದ ಹೆಜ್ಜೆ ಸಂಸ್ಥೆಯಿಂದ ಸಿರಿಗಂಧಗುರು ನಗರ ಪ್ರದೇಶದಲ್ಲಿ ವಾಸ ಮಾಡುತ್ತಿದ್ದು ಗ್ರಾಮಾಂತರ ಪ್ರದೇಶದಲ್ಲಿ ಜಮೀನು ಹೊಂದಿರುವ ರೈತರಿಗೆ ನರೇಗಾ ಯೋಜನೆಯಲ್ಲಿ ಕಾಮಗಾರಿ ಮಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕೃಷಿ ಮಳಿಗೆ, ರೈತ ಉಪಕರಣಗಳ ಮಾರಾಟ ಮಳಿಗೆಗಳನ್ನು ಆಯೋಜಿಸಲಾಗಿತ್ತು. ಮಾಜಿ ಸಚಿವ ಬಿ.ಸಿ.ನಾಗೇಶ್, ಜಿ.ಕೆ.ವಿ.ಕೆ ಕೃಷಿವಿಶ್ವವಿದ್ಯಾಲಯದ ನಿರ್ದೇಶಕ ವೈ.ಎನ್.ಶಿವಲಿಂಗಯ್ಯ, ಕೃಷಿ ಜಂಟಿ ನಿರ್ದೇಶಕ ಎನ್.ರಮೇಶ್, ತಾಲ್ಲೂಕು ದಂಡಾಧಿಕಾರಿ ಪವನ್‌ಕುಮಾರ್, ಇಒ ಎಚ್.ಎಂ. ಸುದರ್ಶನ್, ಕೊನೇಹಳ್ಳಿ ಕೆವಿಕೆ ಮುಖ್ಯಸ್ಥ ಗೋವಿಂದಗೌಡ, ಕೃಷಿಕ ಸಮಾಜದ ತಾಲ್ಲೂಕು ಅಧ್ಯಕ್ಷ ಎಂ.ಎಸ್.ಯೋಗೀಶ್, ರಂಗಾಪುರ ಗ್ರಾ.ಪಂ ಅಧ್ಯಕ್ಷ ವಿಶ್ವನಾಥ್ ಎಚ್.ಎಸ್, ನಗರಸಭಾ ಸದಸ್ಯ ರಾಮ್‌ಮೋಹನ್, ಶಶಿಕಿರಣ್, ತೋಟಗಾರಿಕೆ ಅಧಿಕಾರಿ ಶಾರದಮ್ಮ, ದಿಶಾ ಯೋಜನೆ ಸದಸ್ಯರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.