ಸಾಂದರ್ಭಿಕ ಚಿತ್ರ
ತುಮಕೂರು: ಆನ್‌ಲೈನ್ ಮೂಲಕ ಪಾರ್ಟ್ ಟೈಮ್ ಕೆಲಸ ಮಾಡುತ್ತಾ, ಹೆಚ್ಚಿನ ಹಣ ಗಳಿಸಬಹುದು ಎಂಬ ಆಸೆಗೆ ಬಿದ್ದ ಎಂಜಿನಿಯರ್ ₹13.60 ಲಕ್ಷ ಕಳೆದುಕೊಂಡಿದ್ದಾರೆ.
ನಗರದ ಸಪ್ತಗಿರಿ ಬಡಾವಣೆಯ ನಿವಾಸಿ ಮಂಜುನಾಥ್ ಎಂಬುವರಿಂದ ಸೈಬರ್ ಕಳ್ಳರು ಹಣ ಪೀಕಿದ್ದಾರೆ. 2023ರ ನ.30ರಂದು ವಾಟ್ಸ್ ಆ್ಯಪ್ ಮುಖಾಂತರ ಮೆಸೇಜ್ ಮಾಡಿದ ಸೈಬರ್ ವಂಚಕರು ‘ವಿಕ್ಟೀರಿಯಸ್ ಎಸ್‌ಇಒ ಗ್ಲೋಬಲ್ ಏಜೆನ್ಸಿ’ ಯಿಂದ ಮೆಸೇಜ್ ಮಾಡುತ್ತಿರುವುದಾಗಿ ಪರಿಚಯಿಸಿ ಕೊಂಡಿದ್ದಾರೆ. ಆನ್‌ಲೈನ್‌ನಲ್ಲಿ ಪಾರ್ಟ್ ಟೈಮ್ ಕೆಲಸ ಮಾಡಿ, ಪ್ರತಿ ದಿನ ₹3 ಸಾವಿರದಿಂದ ₹7 ಸಾವಿರದ ವರೆಗೆ ಗಳಿಸಬಹುದು ನಂಬಿಸಿದ್ದಾರೆ.
ನಂತರ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಿಗೆ ರೇಟಿಂಗ್ಸ್ ನೀಡಿ ಹೆಚ್ಚಿನ ಲಾಭ ಪಡೆಯಬಹುದು ಎಂದಿದ್ದಾರೆ. ಇದಕ್ಕಾಗಿ ಕೆಲವು ಟಾಸ್ಕ್‌ಗಳನ್ನು ನೀಡಿದ್ದು, ಎಲ್ಲವನ್ನು ಪೂರ್ಣಗೊಳಿಸಿದ ನಂತರ ಮಂಜುನಾಥ್ ಅವರ ಬ್ಯಾಂಕ್ ಖಾತೆಯ ವಿವರ ಪಡೆದು ₹300 ವರ್ಗಾವಣೆ ಮಾಡಿದ್ದಾರೆ. ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಪಡೆಯಬಹುದು ಎಂದೂ ತಿಳಿಸಿದ್ದಾರೆ. ಮಂಜುನಾಥ್ ಮೊದಲಿಗೆ ₹2 ಸಾವಿರ ಹೂಡಿಕೆ ಮಾಡಿದ್ದು, ಅವರ ಖಾತೆಗೆ ₹2,800 ವಾಪಸ್ ಹಾಕಿದ್ದಾರೆ.
ಇನ್ನೂ ಹೆಚ್ಚಿನ ಹಣ ಹೂಡಿಕೆ ಮಾಡುವಂತೆ ಪ್ರೇರೇಪಿಸಿದ್ದಾರೆ. ಮಂಜುನಾಥ್ ಸೈಬರ್ ಕಳ್ಳರು ತಿಳಿಸಿದ ಯುಪಿಐ ಐ.ಡಿ ಮತ್ತು ವಿವಿಧ ಬ್ಯಾಂಕ್ ಖಾತೆಗಳಿಗೆ ಜ.26ರ ವರೆಗೆ ಒಟ್ಟು ₹13,65,500 ವರ್ಗಾವಣೆ ಮಾಡಿದ್ದಾರೆ. ಇದರಲ್ಲಿ ಅವರಿಗೆ ಕೇವಲ ₹5 ಸಾವಿರ ಮಾತ್ರ ವಾಪಸ್ ಹಾಕಿದ್ದಾರೆ. ಕಳ್ಳರನ್ನು ಪತ್ತೆ ಹಚ್ಚಿ ಹಣ ವಾಪಸ್ ಕೊಡಿಸುವಂತೆ ಮಂಜುನಾಥ್ ಠಾಣೆಯ ಮೊರೆ ಹೋಗಿದ್ದು, ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.