
ತುಮಕೂರು: ಐರೋಪ್ಯ ಒಕ್ಕೂಟ (ಇಯು) ಜತೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿರುವುದನ್ನು ಸಿಪಿಐಎಂ ವಿರೋಧಿಸಿದ್ದು, ಭಾರತದ ಆರ್ಥಿಕ ಹಿತಾಸಕ್ತಿಗಳನ್ನು ಇ.ಯು.ಕ್ಕೆ ಸಂಪೂರ್ಣವಾಗಿ ಬಲಿ ನೀಡಿದಂತಾಗಿದೆ ಎಂದು ಆರೋಪಿಸಿದೆ.
ಹೊಸ ಒಪ್ಪಂದ ಪ್ರಕಾರ ಇ.ಯು ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುವ ಶೇ 90ಕ್ಕೂ ಹೆಚ್ಚು ಸರಕುಗಳ ಮೇಲಿನ ಶುಲ್ಕ ರದ್ದುಗೊಳ್ಳಲಿದೆ, ಇಲ್ಲವೆ ಗಣನೀಯವಾಗಿ ಕಡಿಮೆಯಾಗಲಿದೆ. ಆಟೊಮೊಬೈಲ್, ಕಬ್ಬಿಣ, ಉಕ್ಕು, ಔಷಧಿಗಳು, ವೈನ್, ಸಂಸ್ಕರಿಸಿದ ಆಹಾರ, ಕುರಿ ಮಾಂಸದ ಆಮದು ಶುಲ್ಕ ಇಳಿಕೆಯಾಗಲಿದೆ. ಇದರಿಂದಾಗಿ ದೇಶಿ ಉತ್ಪಾದನೆ ಮೇಲೆ ಪರಿಣಾಮ ಬೀರಲಿದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಸೈಯದ್ ಮುಜೀಬ್, ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಹೇಳಿದ್ದಾರೆ.
ಭಾರತದ ಆಟೊಮೊಬೈಲ್, ಔಷಧ, ಯಂತ್ರೋಪಕರಣ ಉದ್ಯಮಗಳು ತೀವ್ರ ಪ್ರತಿಕೂಲ ಪರಿಣಾಮ ಎದುರಿಸಲಿವೆ. ಆಮದು ಹೆಚ್ಚಳದಿಂದ ಉದ್ಯೋಗದ ಮೇಲೆ ನೇರ ಪರಿಣಾಮವಾಗಲಿದೆ. ಕಾರು, ವೈನ್ ಬೆಲೆ ಕಡಿಮೆಯಾಗಿ ಶ್ರೀಮಂತ ವರ್ಗಕ್ಕೆ ಪ್ರಯೋಜನವಾದರೆ, ಕಾರ್ಮಿಕರು, ರೈತರು, ಜನಸಾಮಾನ್ಯರ ಜೀವನೋಪಾಯ ನಾಶವಾಗಲಿದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.
ಬಜೆಪಿ ನೇತೃತ್ವದ ಕೇಂದ್ರ ಸರ್ಕಾರ ಎಫ್‌ಟಿಎ ಮಾತುಕತೆಗಳ ಸಮಯದಲ್ಲಿ ರೈತರು, ಕಾರ್ಮಿಕರ ಹಿತಾಸಕ್ತಿ ಬಲಿಕೊಡುತ್ತಾ ಬಂದಿದೆ. ಇ.ಯು ಒಪ್ಪಂದದ ಪೂರ್ಣ ವಿವರಗಳನ್ನು ಲೋಕಸಭೆ ಮುಂದಿಟ್ಟು, ಚರ್ಚಿಸಬೇಕು. ಜನ ವಿರೋಧಿಯಾಗಿರುವ ಮುಕ್ತ ವ್ಯಾಪಾರ ಒಪ್ಪಂದಗಳನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.