ADVERTISEMENT

ಫುಟ್‌ಪಾತ್ ವ್ಯಾಪಾರಿಗಳಿಗೆ ಶುಲ್ಕ

ತುಮಕೂರು ಮಹಾನಗರ ಪಾಲಿಕೆ ಬಜೆಟ್ l ರಸ್ತೆ, ಚರಂಡಿ, ಬೀದಿ ದೀಪಕ್ಕೆ ಒತ್ತು l ಅನುದಾನ ನಿರೀಕ್ಷೆಯೇ ಹೆಚ್ಚು

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 4:20 IST
Last Updated 10 ಏಪ್ರಿಲ್ 2021, 4:20 IST
ಬಜೆಟ್ ಮಂಡನೆ ಸಮಯದಲ್ಲಿ ಪಾಲಿಕೆ ಸದಸ್ಯರ ಜತೆ ನಳೀನ ಇಂದ್ರಕುಮಾರ್
ಬಜೆಟ್ ಮಂಡನೆ ಸಮಯದಲ್ಲಿ ಪಾಲಿಕೆ ಸದಸ್ಯರ ಜತೆ ನಳೀನ ಇಂದ್ರಕುಮಾರ್   

ತುಮಕೂರು: ಮಹಾನಗರ ಪಾಲಿಕೆ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ರಸ್ತೆ, ಚರಂಡಿ ನಿರ್ಮಾಣ, ಬೀದಿ ದೀಪ, ಘನತ್ಯಾಜ್ಯ ವಿಲೇವಾರಿಗೆ ಆದ್ಯತೆ ನೀಡಲಾಗಿದೆ. ಫುಟ್‌ಪಾತ್ ವ್ಯಾಪಾರಿಗಳಿಗೆ ಹಾಗೂ ತರಕಾರಿ ಮಾರುಕಟ್ಟೆ ಬಳಿ ವಾಹನ ನಿಲುಗಡೆಗೆ ಶುಲ್ಕ ವಿಧಿಸಲು ನಿರ್ಧರಿಸಲಾಗಿದೆ.

ತೆರಿಗೆ ಹಣಕಾಸು ಹಾಗೂ ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ನಳೀನ ಇಂದ್ರಕುಮಾರ್ ಶುಕ್ರವಾರ ಬಜೆಟ್ ಮಂಡಿಸಿದರು.

ಸಾರ್ವಜನಿಕ ಸ್ಥಳಗಳಲ್ಲಿ ಎಲ್‌ಇಡಿ ದೀಪ ಅಳವಡಿಕೆ ಹಾಗೂ ನಿರ್ವಹಣೆಯನ್ನು ಖಾಸಗಿಯವರಿಗೆ ನೀಡಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಎಲ್‌ಇಡಿ ದೀಪ ಅಳವಡಿಕೆ ಮಾಡುತ್ತಿದ್ದರೂ ಪಾಲಿಕೆ ಸಹ ಅದಕ್ಕೆ ಹಣ ಮೀಸಲಿಟ್ಟಿದೆ. ಎಲ್‌ಇಡಿ ದೀಪ ಅಳವಡಿಕೆ ಕೆಲಸ ಪೂರ್ಣಗೊಳ್ಳುವ ಹಂತದಲ್ಲಿದ್ದು, ಇದರ ನಿರ್ವಹಣೆ, ದುರಸ್ತಿ, ವಿದ್ಯುತ್ ಸಾಮಗ್ರಿ ಖರೀದಿ, ವಿದ್ಯುತ್ ಬಿಲ್ ಪಾವತಿಗಾಗಿ ₹15.87 ಕೋಟಿ, ಹೊಸದಾಗಿ ವಿದ್ಯುತ್ ದೀಪ ಅಳವಡಿಕೆ, ಹೈಮಾಸ್ಟ್ ದೀಪ ಅಳವಡಿಕೆಗೆ ₹21.87 ಕೋಟಿ ಸೇರಿದಂತೆ ಒಟ್ಟು ₹37.74 ಕೋಟಿ ಒದಗಿಸಲಾಗಿದೆ.

ADVERTISEMENT

ಪರಿಶಿಷ್ಟರ ಕಲ್ಯಾಣ: ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ವಿವಿಧ ಸೌಲಭ್ಯ ಕಲ್ಪಿಸಲು, ಪರಿಶಿಷ್ಟರು ವಾಸಿಸುವ ಪ್ರದೇಶಗಳ ಅಭಿವೃದ್ಧಿಗೆ ₹8.47 ಕೋಟಿ ಒದಗಿಸಲಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳಿಗೆ ₹85.11 ಲಕ್ಷ ನಿಗದಿಗೊಳಿಸಲಾಗಿದೆ.

ವೇತನಕ್ಕೆ ₹18 ಕೋಟಿ: ಪಾಲಿಕೆ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿ, ಸಿಬ್ಬಂದಿಗೆ ವೇತನ, ಭತ್ಯೆ ರೂಪದಲ್ಲಿ ವರ್ಷಕ್ಕೆ ₹18 ಕೋಟಿ ವೆಚ್ಚವಾಗಲಿದೆ.

ಎಸ್‌ಎಫ್‌ಸಿ ಮುಕ್ತ ನಿಧಿಯಿಂದ ₹5 ಕೋಟಿ, ಎಸ್‌ಎಫ್‌ಸಿ ವಿಶೇಷ ಅನುದಾನದಿಂದ ₹10 ಕೋಟಿ, ವಿದ್ಯುತ್ ಶುಲ್ಕ ‍ಪಾವತಿಗೆ ರಾಜ್ಯ ಸರ್ಕಾರದಿಂದ ₹30 ಕೋಟಿ, ಅಜ್ಜಗೊಂಡನಹಳ್ಳಿಯಲ್ಲಿರುವ ಘನತ್ಯಾಜ್ಯ ನಿರ್ವಹಣಾ ಘಟಕದ ಕೆಲಸ ಪೂರ್ಣಗೊಳಿಸಲು ₹8.40 ಕೋಟಿ, ಅಮೃತ್ ಯೋಜನೆಯಲ್ಲಿ ₹3 ಕೋಟಿ, 15ನೇ ಹಣಕಾಸು ಆಯೋಗದಿಂದ ₹16 ಕೋಟಿ,ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಲ್ಲಿ ₹42 ಕೋಟಿ ಅನುದಾನ ನಿರೀಕ್ಷಿಸಲಾಗಿದೆ.

ಆಸ್ತಿ ತೆರಿಗೆ ವಸೂಲಿಗೆ ಒತ್ತು

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ವಸೂಲಿಗೆ ಪಾಲಿಕೆ ಬಜೆಟ್‌ನಲ್ಲಿ ಒತ್ತು ನೀಡಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ₹32 ಕೋಟಿ, ಕುಡಿಯುವ ನೀರು ಪೂರೈಕೆಯಿಂದ ₹12 ಕೋಟಿ ಸಂಗ್ರಹಿಸುವ ಗುರಿ ಹಾಕಿಕೊಳ್ಳಲಾಗಿದೆ. ಒಟ್ಟಾರೆಯಾಗಿ ನಗರದ ವಿವಿಧ ಮೂಲಗಳಿಂದ ₹60.49 ಕೋಟಿ ಆದಾಯ ನಿರೀಕ್ಷಿಸಲಾಗಿದೆ.

ಆಸ್ತಿ ತೆರಿಗೆ ಮೇಲಿನ ದಂಡ ರೂಪದಲ್ಲಿ ₹2 ಕೋಟಿ, ಆಸ್ತಿ ಹಕ್ಕು ಬದಲಾವಣೆಯಿಂದ ₹1 ಕೋಟಿ, ಘನತ್ಯಾಜ್ಯ ಕರದಿಂದ ₹2 ಕೋಟಿ, ಉದ್ದಿಮೆ ಪರವಾನಗಿ ಶುಲ್ಕದಿಂದ ₹1.50 ಕೋಟಿ, ಕಟ್ಟಡ ಪರವಾನಗಿ ಶುಲ್ಕ, ಒಳಚರಂಡಿ ಶುಲ್ಕ, ಹೊಸದಾಗಿ ಒಳಚರಂಡಿ ಸಂಪರ್ಕ, ರಸ್ತೆ ಕಡಿತದಿಂದ ತಲಾ ₹1 ಕೋಟಿ, ಖಾಸಗಿ ಬಸ್ ನಿಲ್ದಾಣ, ಶಿರಾ ಗೇಟ್‌ನಲ್ಲಿರುವ ಮಳಿಗೆಗಳಿಂದ ₹1.58 ಕೋಟಿ ಬಾಡಿಗೆ ವಸೂಲಿ ಮಾಡಲು ಉದ್ದೇಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.