ತುರುವೇಕೆರೆ: ತಾಲ್ಲೂಕಿನ ಪುರ ಗ್ರಾಮದ ರತ್ನಮ್ಮ ಅವರಿಗೆ ಸೇರಿದ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆ ಭಸ್ಮವಾಗಿದೆ.
ಮನೆಯೊಳಗಿದ್ದ ರತ್ನಮ್ಮ ಕೂಡಲೇ ಮನೆಯಿಂದ ಹೊರಗೆ ಓಡಿದ್ದಾರೆ. ಗ್ರಾಮಸ್ಥರು ಬಂದು ಬೆಂಕಿಯನ್ನು ಆರಿಸುವ ವೇಳೆಗಾಗಲೇ ಮನೆಯೊಳಗಿದ್ದ ಎಲ್ಲ ವಸ್ತುಗಳು ಭಸ್ಮವಾಗಿವೆ.
ಕೂಲಿ ಕೆಲಸ ಮಾಡುತ್ತಾ ಜೀವನ ನಡೆಸುತ್ತಿದ್ದ ರತ್ನಮ್ಮ ಒಬ್ಬರೇ ಈ ಮನೆಯಲ್ಲಿ ನೆಲೆಸಿದ್ದರು. ಈಗ ಮನೆ ಸಂಪೂರ್ಣ ಭಸ್ಮವಾಗಿರುವುದರಿಂದ ಜೀವನಕ್ಕೆ ಯಾವುದೇ ಮಾರ್ಗ ಇಲ್ಲದಂತಾಗಿದೆ. ಸದ್ಯ ರತ್ನಮ್ಮ ಅವರಿಗೆ ಗ್ರಾಮದ ಶಾಲೆಯ ಕೊಠಡಿಯಲ್ಲಿ ತಾತ್ಕಾಲಿಕವಾಗಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಗ್ರಾಮಸ್ಥರೇ ರತ್ನಮ್ಮಗೆ ಊಟ, ಉಪಾಹಾರ ನೀಡುತ್ತಿದ್ದಾರೆ.
ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ಹೇಮಂತ್ ಕುಮಾರ್ ಭೇಟಿ ನೀಡಿ ಮಹಜರು ನಡೆಸಿದರು. ಸರ್ಕಾರ ರತ್ನಮ್ಮ ಅವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.