ADVERTISEMENT

ತುರುವೇಕೆರೆ: ಗಣಪತಿ ವಿಸರ್ಜನೆ ಸಂಭ್ರಮ, ರಾಜಬೀದಿಗಳಲ್ಲಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2021, 4:34 IST
Last Updated 15 ಡಿಸೆಂಬರ್ 2021, 4:34 IST
ಪ್ರಸಿದ್ಧ ಸತ್ಯಗಣಪತಿ ಜಾತ್ರಾ ಮಹೋತ್ಸವದ ಅಂಗವಾಗಿ ಸತ್ಯಗಣಪತಿ ಹಾಗೂ ಗ್ರಾಮದೇವತೆ ಉಡುಸಲಮ್ಮ ದೇವಿಯ ಪುಷ್ಪ ಅಲಂಕಾರ ಉತ್ಸವ ನಡೆಯಿತು
ಪ್ರಸಿದ್ಧ ಸತ್ಯಗಣಪತಿ ಜಾತ್ರಾ ಮಹೋತ್ಸವದ ಅಂಗವಾಗಿ ಸತ್ಯಗಣಪತಿ ಹಾಗೂ ಗ್ರಾಮದೇವತೆ ಉಡುಸಲಮ್ಮ ದೇವಿಯ ಪುಷ್ಪ ಅಲಂಕಾರ ಉತ್ಸವ ನಡೆಯಿತು   

ತುರುವೇಕೆರೆ: ಪಟ್ಟಣದ ಇತಿಹಾಸ ಪ್ರಸಿದ್ಧ ಗಣಪತಿಯ ವಿಸರ್ಜನಾ ಮಹೋತ್ಸವವು ಮಂಗಳವಾರ ಸಂಜೆ ತೆಪ್ಪೋತ್ಸವದೊಂದಿಗೆ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ನೆರವೇರಿತು.

ಸತ್ಯಗಣಪತಿ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಕಳೆದು ಒಂದು ವಾರದಿಂದ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಜಾತ್ರೆಯ ಅಂಗವಾಗಿ ಪಟ್ಟಣದ ವಿವಿಧ ರಸ್ತೆಗಳನ್ನು ಸಿಂಗರಿಸಲಾಗಿತ್ತು.

ಬೀದಿಬದಿ ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಿದ್ದರು. ಈ ಬಾರಿಯೂ ಕೊರೊನಾದಿಂದ ಮನರಂಜನಾ ಕಾರ್ಯಕ್ರಮಗಳು ಸರಳ ನಡೆದವು. ಸೋಮವಾರ ಸಂಜೆ ಮಹಾಮಂಗಳಾರತಿಯೊಂದಿಗೆ ಪಟ್ಟಣದ ರಾಜಬೀದಿಗಳಲ್ಲಿ ಲಿಂಗದ ವೀರರ ಕುಣಿತ, ನಾಸಿಕ್ ಡೋಲ್ ಒಳಗೊಂಡಂತೆ ಗ್ರಾಮ ದೇವತೆ ಉಡುಸಲಮ್ಮ ಹಾಗೂ ಸತ್ಯಗಣಪತಿಯನ್ನು ಭವ್ಯವಾದ ಪುಷ್ಪ ಮಂಟಪದಲ್ಲಿಟ್ಟು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ADVERTISEMENT

ಬೆಸ್ಕಾಂ ಕಚೇರಿ ಆವರಣದಲ್ಲಿ ಸ್ಥಳೀಯ ಕಲಾವಿದರಿಂದ ‘ಕುರುಕ್ಷೇತ್ರ’ ನಾಟಕ ಪ್ರದರ್ಶನ ನಡೆಯಿತು. ಕಲಾವಿದ ಕೊಳಾಲ ಮೀಸೆ ರಾಮಣ್ಣ ಅವರಿಗೆ ಬೆಳ್ಳಿ ಕಿರೀಟ ನೀಡಿ ಸನ್ಮಾನಿಸಲಾಯಿತು.

ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮಗಳು ಕಡಿಮೆಯಾಗಿದ್ದು, ಭಕ್ತಾದಿಗಳಿಗೆ ನಿರಾಸೆ ಮೂಡಿಸಿತು. ಸೋಮವಾರ ಸಂಜೆ ಪ್ರಾರಂಭವಾದ ಮೆರವಣಿಗೆಯು ಪಟ್ಟಣದಲ್ಲೆಲ್ಲ ಸಾಗಿ ಮಂಗಳವಾರ ಸಂಜೆ 5ಗಂಟೆಗೆ ತುರುವೇಕೆರೆ ಕೆರೆ ಕೋಡಿಯ ಬಳಿ ಆಗಮಿಸಿತು. ಮಹಾ ಮಂಗಳಾರತಿಯೊಂದಿಗೆ ಕೆರೆಯಲ್ಲಿ ಗಣೇಶನನ್ನು ತೆಪ್ಪದಲ್ಲಿ ಕುಳ್ಳಿರಿಸಿ ತೆಪ್ಪೋತ್ಸವ ಮಾಡಲಾಯಿತು. ನೂರಾರು ಭಕ್ತರು ಕಣ್ತುಂಬಿಸಿಕೊಂಡರು.

ನಂತರ ಗಣಪತಿಯನ್ನು ಕೆರೆಯಲ್ಲಿ ವಿಸರ್ಜಿಸುವುದರೊಂದಿಗೆ ಈ ವರ್ಷದ ಜಾತ್ರೆಗೆ ತೆರೆ ಬಿದ್ದಿತು. ಮುಂಜಾಗ್ರತೆಯಾಗಿ ಪೊಲೀಸ್ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.