ADVERTISEMENT

ಶಿರಾ: ಬೆಟ್ಟದಂತೆ ಬೆಳೆಯುತ್ತಿದೆ ಕಸದ ರಾಶಿ

ಎಚ್.ಸಿ.ಅನಂತರಾಮು
Published 30 ಡಿಸೆಂಬರ್ 2024, 7:25 IST
Last Updated 30 ಡಿಸೆಂಬರ್ 2024, 7:25 IST
ಶಿರಾ ಕಸ ವಿಲೇವಾರಿ ಘಟಕದಲ್ಲಿ ಬಿದ್ದಿರುವ ಕಸದ ರಾಶಿ
ಶಿರಾ ಕಸ ವಿಲೇವಾರಿ ಘಟಕದಲ್ಲಿ ಬಿದ್ದಿರುವ ಕಸದ ರಾಶಿ   

ಶಿರಾ: ನಗರದಾದ್ಯಂತ ಉತ್ಪತ್ತಿಯಾಗುವ ಹಸಿ-ಒಣ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವಲ್ಲಿ ನಗರಸಭೆ ಆಡಳಿತ ವಿಫಲವಾಗಿದ್ದು, ನಗರದ ಹೊರವಲಯದ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಸದ ರಾಶಿ ಬೆಟ್ಟದಂತೆ ಬೆಳೆದಿದೆ.

ನಗರದ ಹೊರವಲಯದ ಭೂವನಹಳ್ಳಿ ಗ್ರಾಮದ ಬಳಿ 11 ಎಕರೆ ಪ್ರದೇಶದಲ್ಲಿ ಕಸ ವಿಲೇವಾರಿ ಘಟಕ ನಿರ್ಮಿಸಲಾಗಿದೆ.

ನಗರದಲ್ಲಿ 80 ಸಾವಿರ ಜನಸಂಖ್ಯೆ ಇದ್ದು, ಪ್ರತಿನಿತ್ಯ 22 ರಿಂದ 26 ಟನ್ ಕಸ ಸಂಗ್ರಹವಾಗುತ್ತಿದೆ. ಕಸವನ್ನು ಟ್ರ್ಯಾಕ್ಟರ್‌ಗಳ ಮೂಲಕ ವಿಲೇವಾರಿ ಘಟಕಕ್ಕೆ ತಂದು ಸುರಿಯುತ್ತಾರೆ. ಹಸಿ ಹಾಗೂ ಒಣ ಕಸವನ್ನು ವಿಂಗಡಣೆ ಮಾಡಿ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಆದರೆ, ಆ ಕೆಲಸವಾಗುತ್ತಿಲ್ಲ. ಕಸ ವಿಲೇವಾರಿ ಘಟಕದಲ್ಲಿ ಯಾವುದೇ ವೈಜ್ಞಾನಿಕ ಕ್ರಮ ಅನುಸರಿಸದೆ ಕಸವನ್ನು ಒಂದೇ ಕಡೆ ರಾಶಿ ಮಾಡಲಾಗಿದೆ. ಹಲವು ವರ್ಷ ಕಸವನ್ನು ಒಂದೇ ಕಡೆ ಗುಡ್ಡೆ ಹಾಕಲಾಗಿದ್ದು, ಬೆಟ್ಟದಂತೆ ಏರುತ್ತಿದೆ. ಅದರ ಮೇಲೆ ಗಿಡಗಂಟಿಗಳು ಬೆಳೆದು ಅರಣ್ಯದಂತಾಗಿದೆ.

ADVERTISEMENT

ಕಸವನ್ನು ನಿಯಮಾನುಸಾರ ವಿಲೇವಾರಿ ಮಾಡಿ ಜೈವಿಕ ಗೊಬ್ಬರವನ್ನಾಗಿ ಪರಿವರ್ತಿಸಿ ರೈತರಿಗೆ ಮಾರಾಟ ಮಾಡಬೇಕು. ಅದು ಸ್ಥಳೀಯ ಆಡಳಿತಕ್ಕೆ ಆದಾಯದ ಮೂಲವೂ ಆಗಿದೆ. ಇಲ್ಲಿ ಅಲ್ಪಪ್ರಮಾಣದ ಕಸದಲ್ಲಿ ನೆಪಕ್ಕಾಗಿ ಮಾತ್ರ ಎರೆಹುಳು ಗೊಬ್ಬರ ತಯಾರಿಸಲಾಗುತ್ತಿದ್ದು, ದೊಡ್ಡ ಪ್ರಮಾಣದ ಕಸವನ್ನು ಬೆಟ್ಟದಂತೆ ರಾಶಿ ಹಾಕಲಾಗಿದೆ.

ವೈಜ್ಞಾನಿಕವಾಗಿ ಕಸವನ್ನು ಗೊಬ್ಬರವನ್ನಾಗಿ ಮಾಡಲು ಯಂತ್ರಗಳಿದ್ದರೂ ಅವುಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ನಗರಸಭೆ ವಿಫಲವಾಗಿದ್ದು ಯಂತ್ರಗಳು ತುಕ್ಕು ಹಿಡಿಯುವಂತಾಗಿದೆ. ಘಟಕದ ಹೆಸರಿನಲ್ಲಿ ದಾಖಲೆಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದ್ದು, ಅಪಾರ ಪ್ರಮಾಣದಲ್ಲಿ ಅವ್ಯವಹಾರ ನಡೆದಿದೆ ಎಂದು ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆದರೂ ಪ್ರಯೋಜನವಾಗಿಲ್ಲ.

ದಶಕಗಳ ಹಿಂದೆ ಸಂಗ್ರಹಿಸಿರುವ ಕಸ ನೆಲದಲ್ಲೇ ಕೊಳೆತು ಅಂತರ್ಜಲದೊಂದಿಗೆ ಸೇರಿ ಸುತ್ತಲಿನ ಪರಿಸರವನ್ನು ಹಾಳು ಮಾಡುತ್ತಿದೆ.

ಕಸ ವಿಲೇವಾರಿ ಘಟಕದ ಸಮೀಪದಲ್ಲಿಯೇ ಮೊರಾರ್ಜಿ, ಅಂಬೇಡ್ಕರ್, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ವಿದ್ಯಾರ್ಥಿ ನಿಲಯ, ಜಗಜೀವನರಾಂ ಭವನ ಇದೆ. ಜೊತೆಗೆ ಸುತ್ತಲೂ ಕೃಷಿ ಜಮೀನುಗಳಿದ್ದು ರೈತರು ಹೊಲದಲ್ಲಿ ಕೆಲಸ ಮಾಡಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಸ ಕರಗಿ ನೀರಾಗಿ ಅಂತರ್ಜಲ ಸೇರುತ್ತಿದೆ. ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕುಡಿಯುವ ನೀರಿನ ಜೊತೆ ಸೇರುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಮಕ್ಕಳಿಗೆ ನೆಗಡಿ, ಕೆಮ್ಮು, ಶ್ವಾಸಕೋಶದ ಸಮಸ್ಯೆ ಸಾಮಾನ್ಯ ಎಂಬಂತಾಗಿದೆ.

ಮಳೆಗಾಲದಲ್ಲಿ ವ್ಯಾಪಕ ತೊಂದರೆ ಅನುಭವಿಸುತ್ತಿದ್ದು ದುರ್ವಾಸನೆ ಬೀರುತ್ತಿದೆ. ಬೇಸಿಗೆಯಲ್ಲಿ ಕಸಕ್ಕೆ ಬೆಂಕಿ ಬಿದ್ದಾಗ ಕಡುಕಪ್ಪು ವಿಷಕಾರಿ ಹೊಗೆ ಉಂಟಾಗುವುದರಿಂದ ಸ್ಥಳೀಯರು ಉಸಿರಾಟದ ತೊಂದರೆಗೆ ಸಿಲುಕುತ್ತಿದ್ದಾರೆ.

ಶಿರಾ ಕಸ ವಿಲೇವಾರಿ ಘಟಕದಲ್ಲಿ ಬಿದ್ದಿರುವ ಕಸದ ರಾಶಿ

ನಾಯಿಗಳ ಕಾಟಕ್ಕೆ ಬೇಸತ್ತ ಜನ: ಕಸ ವಿಲೇವಾರಿ ಘಟಕದಿಂದ ಬೀದಿನಾಯಿಗಳ ಹಾವಳಿ ಹೆಚ್ಚುತ್ತಿದ್ದು, ಸ್ಥಳೀಯರು ತಿರುಗಾಡಲು ಭಯಪಡುವಂತಾಗಿದೆ. ಕೋಳಿ ತ್ಯಾಜ್ಯ, ಮಾಂಸದ ತ್ಯಾಜ್ಯಗಳನ್ನು ಘಟಕದಲ್ಲಿ ತಂದು ಸುರಿಯುವ ಕಾರಣ ನಾಯಿಗಳು ಅಲ್ಲಿಯೇ ಬೀಡು ಬಿಟ್ಟಿವೆ.

ರೈತರ ಕುರಿ, ಮೇಕೆ, ದನ-ಕರುಗಳನ್ನು ನಾಯಿಗಳು ಕಚ್ಚಿ ಗಾಯಗೊಳಿಸುತ್ತಿವೆ. ಹತ್ತಾರು ಬೀದಿನಾಯಿಗಳು ಕುರಿ, ಮೇಕೆ ಮೇಲೆ ದಾಳಿ ನಡೆಸಿ ಕೊಂದು ಹಾಕಿದ ನಿದರ್ಶನಗಳಿವೆ.

ಶಿರಾ ಕಸ ವಿಲೇವಾರಿ ಘಟಕದಲ್ಲಿ ಬಿದ್ದಿರುವ ಕಸದ ರಾಶಿ

ಒಂದೇ ಬಾರಿ ಕಸ ವಿಲೇವಾರಿ

ತ್ಯಾಜ್ಯ ಘಟಕದಲ್ಲಿರುವ 40 ಸಾವಿರ ಟನ್ ಕಸವನ್ನು ಒಂದೇ ಬಾರಿ ವಿಲೇವಾರಿ ಮಾಡಲು ಯೋಜನೆ ರೂಪಿಸಲಾಗಿದೆ. ಟೆಂಡ‌ರ್ ಮುಗಿದಿದ್ದು ಕಾರ್ಯಾದೇಶ ನೀಡಲಾಗಿದೆ. ಶೀಘ್ರದಲ್ಲಿ ಕಸ ವಿಲೇವಾರಿ ಕೆಲಸ ಪ್ರಾರಂಭವಾಗುವುದು. ಇದರ ನಂತರ ಪ್ರತಿನಿತ್ಯ ಕಸವನ್ನು ವೈಜ್ಞಾನಿಕವಾಗಿ ವಿಗಂಡಿಸಿ ಗೊಬ್ಬರ ತಯಾರಿಸಲಾಗುವುದು ಇದರಿಂದ ಕಸದ ಸಮಸ್ಯೆ ಬಗೆಹರಿಯುವುದು.

ರುದ್ರೇಶ್, ನಗರಸಭೆ ಪೌರಾಯುಕ್ತ

ಅನಾಮಿಕ ವ್ಯಕ್ತಿಗಳಿಗೆ ಅವಕಾಶ

ನಗರಸಭೆ ಅಧ್ಯಕ್ಷರಾಗಿದ್ದ ಸಮಯದಲ್ಲಿ ಕಸ ವಿಲೇವಾರಿ ಘಟಕದಲ್ಲಿ ಕಸ‌ ವಿಲೇವಾರಿಗೆ ಒತ್ತು ನೀಡಿದ್ದೆ. ಆದರೆ ಅಧಿಕಾರ ಬದಲಾದ ನಂತರ ಯಾವುದೇ ಕೆಲಸ‌ವಾಗುತ್ತಿಲ್ಲ. ಕಸ ವಿಲೇವಾರಿ ಘಟಕದಲ್ಲಿ ಏನು ನಡೆಯುತ್ತದೆ ಎನ್ನುವುದು ಯಾರಿಗೂ ತಿಳಿಯುವುದಿಲ್ಲ. ಘಟಕದಲ್ಲಿ ಇದ್ದ ಮೂರು ಹಸುಗಳನ್ನು ಅಕ್ರಮವಾಗಿ ಮಾರಾಟ ಮಾಡಿಕೊಂಡಿದ್ದಾರೆ. ಈ ಬಗ್ಗೆ ಯಾರ ಮೇಲೂ ಕ್ರಮ ಕೈಗೊಂಡಿಲ್ಲ. ನಗರಸಭೆ ಗಮನಕ್ಕೆ ತರದೆ ಘಟಕದಲ್ಲಿ ಅನಾಮಿಕ ವ್ಯಕ್ತಿಗಳಿಗೆ ಕಸ ವಿಂಗಡಣೆ ಮಾಡಲು ಅವಕಾಶ ನೀಡಲಾಗಿದೆ. ಪೌರಾಯುಕ್ತರು ನಗರಸಭೆ ಆಡಳಿತವನ್ನು ಕತ್ತಲಿನಲ್ಲಿ ನಡೆಸುತ್ತಿದ್ದಾರೆ.

ಅಂಜಿನಪ್ಪ, ನಗರಸಭೆ ಸದಸ್ಯ

ಸಮರ್ಪಕವಾಗಿ ಬಳಕೆಯಾಗದ ಘಟಕ

ಹೆಸರಿಗೆ ಮಾತ್ರ ಕಸ ವಿಲೇವಾರಿ ಘಟಕ ಇದೆ. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳದ ಕಾರಣ ಸಮೀಪದ ಗ್ರಾಮಗಳ ಜನರು ಸಂಕಷ್ಟ ಎದುರಿಸುವಂತಾಗಿದೆ. ಕುಡಿಯುವ ನೀರು ಸಹ ಮಲಿನವಾಗಿದೆ. ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಘಟಕದ ಸುತ್ತ ವಸತಿ ಶಾಲೆ, ವಿದ್ಯಾರ್ಥಿ ನಿಲಯ ಇದ್ದು ಸಾವಿರಾರು ಮಕ್ಕಳು ವ್ಯಾಸಂಗ ಮಾಡುತ್ತಿದ್ದರೂ ಯಾರು ಈ ಬಗ್ಗೆ ಕ್ರಮ ತೆಗೆದುಕೊಂಡಿಲ್ಲ.

ಬಂಡೆ ರಾಮಕೃಷ್ಣ, ಎಪಿಎಂಸಿ ಮಾಜಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.