ADVERTISEMENT

ವಿಶ್ವಕರ್ಮರಿಗೆ ರಾಜಕೀಯ ಸ್ಥಾನ ನೀಡಿ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2020, 6:59 IST
Last Updated 18 ಸೆಪ್ಟೆಂಬರ್ 2020, 6:59 IST
ತುಮಕೂರಿನಲ್ಲಿ ಗುರುವಾರ ವಿಶ್ವಕರ್ಮ ಜಯಂತಿ ಆಚರಿಸಲಾಯಿತು. ನೀಲಕಂಠಾಚಾರ್ಯ ಸ್ವಾಮೀಜಿ, ಶಾಸಕ ಜಿ.ಬಿ.ಜ್ಯೋತಿಗಣೇಶ್, ಮುಖಂಡ ಎಚ್.ಪಿ.ನಾಗರಾಜಾಚಾರ್ ಇತರರು ಪಾಲ್ಗೊಂಡಿದ್ದರು
ತುಮಕೂರಿನಲ್ಲಿ ಗುರುವಾರ ವಿಶ್ವಕರ್ಮ ಜಯಂತಿ ಆಚರಿಸಲಾಯಿತು. ನೀಲಕಂಠಾಚಾರ್ಯ ಸ್ವಾಮೀಜಿ, ಶಾಸಕ ಜಿ.ಬಿ.ಜ್ಯೋತಿಗಣೇಶ್, ಮುಖಂಡ ಎಚ್.ಪಿ.ನಾಗರಾಜಾಚಾರ್ ಇತರರು ಪಾಲ್ಗೊಂಡಿದ್ದರು   

ತುಮಕೂರು: ವಿಶ್ವಕರ್ಮ ಸಮುದಾಯಕ್ಕೆ ರಾಜಕೀಯ ಸ್ಥಾನಮಾನ ನೀಡುವಂತೆ ಜಿಲ್ಲಾ ವಿಶ್ವಕರ್ಮ ಸೇವಾ ಸಮಿತಿ ಅಧ್ಯಕ್ಷ ಎಚ್.ಪಿ.ನಾಗರಾಜಾಚಾರ್ ಇಲ್ಲಿ ಗುರುವಾರ ಮನವಿ ಮಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಏರ್ಪಡಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ‘ವಿಶ್ವಕರ್ಮ ಸಮುದಾಯದವರು ಪಂಚ ಕುಲಕಸುಬುಗಳನ್ನು ಮಾಡುತ್ತಾ ಬಂದಿದ್ದಾರೆ. ಕಲೆ ವಾಸ್ತುಶಿಲ್ಪಕ್ಕೆ ಅಪರಿಮಿತ ಕೊಡುಗೆ ನೀಡಿದ್ದಾರೆ. ಬೇಲೂರು, ಹಳೇಬೀಡು, ಸೋಮನಾಥ ಪುರ ದೇಗುಲಗಳು ಸಮುದಾಯದವರ ಕಲೆಗೆ ಸಾಕ್ಷಿಪ್ರಜ್ಞೆಯಂತಿವೆ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಜಿ.ಬಿ.ಜ್ಯೋತಿಗಣೇಶ್, ‘ವಿಶ್ವಕರ್ಮ ಸಮುದಾಯದ ಜನ ಕಲೆಗೆ ಹೆಸರಾದವರು, ಶ್ರಮಜೀವಿಗಳು. ಕುಲ ಕಸುಬಿಗೆ ಅಂಟಿ ಕೂರದೆ ವಿದ್ಯಾವಂತರಾಗಿ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಅವಕಾಶಗಳನ್ನು ಪಡೆದುಕೊಂಡು ಪ್ರಗತಿ ಸಾಧಿಸಬೇಕು’ ಎಂದು ಸಲಹೆ ಮಾಡಿದರು.

ADVERTISEMENT

ನಗರದ ವಿಶ್ವಕರ್ಮ ಸಮುದಾಯದ ಅರ್ಹರಿಗೆ ಶೀಘ್ರ ಸರಕಾರಿ ಸಂಸ್ಥೆಯಲ್ಲಿ ನಾಮ ನಿರ್ದೇಶನದ ಅವಕಾಶ ಕಲ್ಪಿಸಲಾಗುವುದು. ಸಮುದಾಯದ ಧಾರ್ಮಿಕ, ಸಾಮಾಜಿಕ ಸೇವಾ ಕಾರ್ಯಗಳಿಗೆ ಅಗತ್ಯ ನೆರವು ನೀಡಲಾಗುವುದು ಎಂದರು.

ಸಾನ್ನಿಧ್ಯ ವಹಿಸಿದ್ದ ನಿಟ್ಟರಹಳ್ಳಿ ಅಭಯಹಸ್ತೆ ಆದಿಲಕ್ಷ್ಮಿ ಸಂಸ್ಥಾನ ಮಠದ ನೀಲಕಂಠಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಸಮಾಜದ ಮುಖಂಡರಾದ ಎಚ್.ಎಸ್. ವೆಂಕಟರಮಣಾಚಾರ್, ಬಿ.ವಿ.ಗಂಗಾರಾಜಾಚಾರ್, ಎನ್.ವಿಶ್ವಮೂರ್ತಿ, ನರಸಿಂಹಸ್ವಾಮಿ, ಬಿ.ಜಕಣಾಚಾರ್, ಗಜೇಂದ್ರಾಚಾರ್, ಟಿ.ಎಚ್.ನವೀನ್, ಎಚ್.ಸತೀಶ್, ಚೇತನ್‍ ಕುಮಾರ್, ಬಿ.ಶಶಿಧರ್, ಮಂಜುನಾಥ್, ಟಿ.ಎಚ್.ಸತೀಶ್, ಕನ್ನಡ ಸಂಸ್ಕೃತಿ ಇಲಾಖೆ ಅಧಿಕಾರಿ ಸುರೇಶ್ ಹಾಜರಿದ್ದರು.

ಕಾರ್ಯಕ್ರಮಕ್ಕೂ ಮುನ್ನಾ ಚಿಕ್ಕಪೇಟೆ ಕಾಳಿಕಾಂಬಾ, ವಿಶ್ವಕರ್ಮ, ಬಸವಣ್ಣ ದೇವಾಲಯ, ಪಾಂಡುರಂಗ ನಗರದ ಗಾಯತ್ರಿ ವಿಶ್ವಕರ್ಮ, ವೀರಬ್ರಹ್ಮೇಂದ್ರಸ್ವಾಮಿ ದೇವಾ ಲಯದಲ್ಲಿ ವಿಶೇಷ ಪೂಜೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.