ADVERTISEMENT

ಹುಳಿಯಾರು | ಗೋಮಾಳ ಅತಿಕ್ರಮಣ ವಿವಾದ: ತೆರವಿಗೆ ತಹಶೀಲ್ದಾರ್‌ ಆದೇಶ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2025, 14:05 IST
Last Updated 12 ಏಪ್ರಿಲ್ 2025, 14:05 IST
ಹುಳಿಯಾರು ಹೋಬಳಿ ಕಾರೇಹಳ್ಳಿ ಗೇಟ್‌ನ ವಿವಾದಿತ ಸ್ಥಳಕ್ಕೆ ತಹಶೀಲ್ದಾರ್‌ ಕೆ.ಪುರಂದರ ತೆರಳಿ ಪರಿಶೀಲಿಸಿದರು
ಹುಳಿಯಾರು ಹೋಬಳಿ ಕಾರೇಹಳ್ಳಿ ಗೇಟ್‌ನ ವಿವಾದಿತ ಸ್ಥಳಕ್ಕೆ ತಹಶೀಲ್ದಾರ್‌ ಕೆ.ಪುರಂದರ ತೆರಳಿ ಪರಿಶೀಲಿಸಿದರು   

ಹುಳಿಯಾರು: ಹೋಬಳಿಯ ಕಾರೇಹಳ್ಳಿ ಗೇಟ್‌ ಬಳಿಯ ಸರ್ಕಾರಿ ಗೋಮಾಳವನ್ನು ಕಾರೇಹಳ್ಳಿ ಗ್ರಾಮದ ಒಬ್ಬರು ಆಕ್ರಮಿಸಿಕೊಂಡಿದ್ದಾರೆ ಎಂದು ಆರೋಪಿಸಿದ ಗ್ರಾಮಸ್ಥರು ಅದನ್ನು ವಿರೋಧಿಸಿ ಅದೇ ಜಾಗದಲ್ಲಿ ಗುಡಿಸಲು ನಿರ್ಮಾಣಕ್ಕೆ ಶನಿವಾರ ಮುಂದಾಗಿದ್ದು, ವಾಗ್ವಾದಕ್ಕೆ ಕಾರಣವಾಯಿತು.

ತಹಶೀಲ್ದಾರ್‌ ಸ್ಥಳಕ್ಕೆ ಭೇಟಿ ನೀಡಿ ಎರಡೂ ಕಡೆಯವರು ಕೂಡಲೇ ತೆರವುಗೊಳಿಸುವಂತೆ ಆದೇಶಿಸಿದ ನಂತರ ವಾಗ್ವಾದ ತಿಳಿಯಾಯಿತು.

ಏನಿದು ವಿವಾದ: ಕಂಪನಹಳ್ಳಿ ಗ್ರಾಮದಲ್ಲಿ ಒಂದು ಎಕರೆ ಸರ್ಕಾರಿ ಗೋಮಾಳವಿತ್ತು. ಇದೇ ಜಾಗದಲ್ಲಿ ಕಾರೇಹಳ್ಳಿ ಗ್ರಾಮದ ನಿಂಗರಾಜು ಎಂಬುವವರು ಅಂಗಡಿ ಇಟ್ಟುಕೊಂಡಿದ್ದರು. ನಂತರ ಉಳಿದ ಜಾಗದಲ್ಲಿ ತೆಂಗಿನ ಸಸಿ ನೆಟ್ಟಿದ್ದರು. ಅಲ್ಲದೆ ಇದೇ ಸ್ಥಳದಲ್ಲಿ ಗ್ರಾಮಕ್ಕೆ ಸರ್ಕಾರದಿಂದ ಕುಡಿಯುವ ನೀರು ಸರಬರಾಜು ಮಾಡುವ ಪೈಪ್‌ಲೈನ್‌ ಕೂಡ ಹಾದು ಹೋಗಿತ್ತು. ಇತ್ತೀಚೆಗೆ ಇದೇ ನೀರಿನಿಂದ ನಿಂಗರಾಜು ಹಾಗೂ ಪಕ್ಕದವರೊಬ್ಬರು ಸಸಿಗಳಿಗೆ ನೀರುಣಿಸಿ ಕೊಳ್ಳುತ್ತಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದರು.

ADVERTISEMENT

ಗ್ರಾಮಸ್ಥರು ಶನಿವಾರ ಸರಂಜಾಮುಗಳೊಂದಿಗೆ ತೆರಳಿ ಗುಡಿಸಲು ನಿರ್ಮಾಣಕ್ಕೆ ಮುಂದಾದರು. ವಿಷಯ ವಿಕೋಪಕ್ಕೆ ತಿರುಗುವುದನ್ನು ಅರಿತು ಪೊಲೀಸರು ಮಧ್ಯೆ ಪ್ರವೇಶಿಸಿದರು. ನಂತರ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್‌ ಕೆ.ಪುರಂದರ ಪರಿಶೀಲಿಸಿ ಎರಡೂ ಕಡೆಯವರು ಎರಡು ದಿನದೊಳಗೆ ಅಂಗಡಿ ಹಾಗೂ ಗುಡಿಸಲುಗಳನ್ನು ತೆರವುಗೊಳಿಸಬೇಕು. ಇಲ್ಲವಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.