ADVERTISEMENT

ರಾಜಕಾರಣಿಗೆ ಮೂರು ಕಾಸಿನ ಕಿಮ್ಮತ್ತಿಲ್ಲ: ಕೆ.ಎನ್‌.ರಾಜಣ್ಣ

ಸರ್ಕಾರಿ ನಿವೃತ್ತ ನೌಕರರ ದಿನ ಆಚರಣೆಯಲ್ಲಿ ಸಚಿವ ರಾಜಣ್ಣ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2024, 7:09 IST
Last Updated 8 ಜನವರಿ 2024, 7:09 IST
<div class="paragraphs"><p>ತುಮಕೂರಿನಲ್ಲಿ ಭಾನುವಾರ&nbsp;ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದಿಂದ ಹಮ್ಮಿಕೊಂಡಿದ್ದ ನೌಕರರ ದಿನ ಆಚರಣೆ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು. </p></div>

ತುಮಕೂರಿನಲ್ಲಿ ಭಾನುವಾರ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದಿಂದ ಹಮ್ಮಿಕೊಂಡಿದ್ದ ನೌಕರರ ದಿನ ಆಚರಣೆ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು.

   

ತುಮಕೂರು: ಸಾರ್ವಜನಿಕರು ಈ ಹಿಂದೆ ಸರ್ಕಾರಿ ನೌಕರರು, ರಾಜಕಾರಣಿಗಳನ್ನು ಬಹಳ ಗೌರವದಿಂದ ನೋಡುತ್ತಿದ್ದರು. ಈಗ ತುಂಬಾ ಅಗೌರವದಿಂದ ಕಾಣುತ್ತಿದ್ದಾರೆ. ಮುಂದೆ ಇದಕ್ಕಿಂತ ಕೆಟ್ಟ ಕಾಲ ಬರಬಹುದು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಆತಂಕ ವ್ಯಕ್ತಪಡಿಸಿದರು.

ನಗರದಲ್ಲಿ ಭಾನುವಾರ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದಿಂದ ಹಮ್ಮಿಕೊಂಡಿದ್ದ ನೌಕರರ ದಿನ ಆಚರಣೆ ಮತ್ತು ಹಿರಿಯರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ADVERTISEMENT

ಅಧಿಕಾರದ ಅವಧಿಯಲ್ಲಿ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಿ, ಈಗ ನಿವೃತ್ತಿ ಜೀವನ ನಡೆಸುತ್ತಿದ್ದಾರೆ. ಹುಟ್ಟಿದ ನಂತರ ಸಾವು ಖಚಿತ, ಸರ್ಕಾರಿ ಸೇವೆಯಲ್ಲಿ ನಿವೃತ್ತಿ ಸಹಜ. ಎಲ್ಲರು ಉತ್ತಮ ಕೆಲಸ ಮಾಡಿ ಜನರಿಂದ ಪ್ರಶಂಸೆ ಪಡೆದಿದ್ದಾರೆ. ನಿಮ್ಮ ಕಾಲವೇ ಒಂದು ಸುವರ್ಣ ಯುಗ. ನೌಕರರಿಗೆ ಸಾರ್ವಜನಿಕರಿಂದ ಕೀರ್ತಿ, ಗೌರವ, ನೆಮ್ಮದಿ, ಸಂತೋಷ ಸಿಗುತ್ತಿತ್ತು. ಈಗ ಕಾಲ ಬದಲಾಗಿದೆ. ಮಾಧ್ಯಮಗಳ ಪ್ರಭಾವದಿಂದ ಪ್ರಸ್ತುತ ನೌಕರರು, ರಾಜಕಾರಣಿಗಳಿಗೆ ಮೂರು ಕಾಸಿನ ಕಿಮ್ಮತ್ತಿಲ್ಲದಂತಾಗಿದೆ ಎಂದು ಬೇಸರದ ಮಾತುಗಳನ್ನಾಡಿದರು.

ನೌಕರರ ಕಡೆಗಾಲದಲ್ಲಿ ನೆಮ್ಮದಿಯ ಜೀವನಕ್ಕಾಗಿ ಸರ್ಕಾರ ಗೌರವ ಧನ ನೀಡುತ್ತಿದೆ. ನೌಕರರಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ಸಿದ್ಧವಿದೆ. ಜೀವನದಲ್ಲಿ ಅನುಭವಗಳು ಕಲಿಸಿದ ಪಾಠವನ್ನು ಯಾವ ವಿಶ್ವವಿದ್ಯಾಲಯಗಳು ಹೇಳಿ ಕೊಡುವುದಿಲ್ಲ. ನಿಮ್ಮ ಅನುಭವಗಳನ್ನು ಮುಂದಿನ ಪೀಳಿಗೆಯ ಜತೆ ಹಂಚಿ ಕೊಂಡರೆ ಅವರು ಸರಿ ದಾರಿಯಲ್ಲಿ ಸಾಗಲು ಸಹಾಯಕವಾಗುತ್ತದೆ ಎಂದು ಹೇಳಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್‌ ‘ನಿವೃತ್ತರ ವಾಣಿ’ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ, ನಿವೃತ್ತ ನೌಕರರ ನೆಮ್ಮದಿಯ ಜೀವನಕ್ಕೆ ಸಮಾಜ ಹಾಗೂ ಅವರ ಕುಟುಂಬದವರು ಕಾಳಜಿ ವಹಿಸಬೇಕು. ಸಂಘಕ್ಕೆ ನಿವೇಶನ ಮಂಜೂರು ಮಾಡಲು ಅಗತ್ಯ ಕ್ರಮಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಮಹಾನಗರ ಪಾಲಿಕೆಯ ಆಯುಕ್ತೆ ಬಿ.ವಿ.ಅಶ್ವಿಜ, ವಿಕಲಚೇತನರ ಹಾಗೂ ಅಂಗವಿಕಲರ ಸಬಲೀಕರಣ ಇಲಾಖೆಯ ಕಲ್ಯಾಣಾಧಿಕಾರಿ ಎಂ.ರಮೇಶ್, ನಿವೃತ್ತ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಪುಟ್ಟನರಸಯ್ಯ, ಖಜಾಂಚಿ ಪಿ.ನರಸಿಂಹರೆಡ್ಡಿ, ಆಂತರಿಕ ಲೆಕ್ಕಪರಿಶೋಧಕ ವೆಂಕಟಾಚಲಶೆಟ್ಟಿ, ಪದಾಧಿಕಾರಿಗಳಾದ ರಾಜಯ್ಯ, ಚಂದ್ರಶೇಖರ್, ಅನಂತರಾಮಯ್ಯ ಇತರರು ಉಪಸ್ಥಿತರಿದ್ದರು.

ಹಗಲು ಯೋಗ ಕ್ಷೇಮ ಕೇಂದ್ರಕ್ಕೆ ಆಗ್ರಹ :

ನಿವೃತ್ತಿಯ ನಂತರ ಸರ್ಕಾರದಿಂದ ಬರುವ ಪಿಂಚಣಿಯ ಹಣ ಮಾತ್ರೆಗಳಿಗೆ ಸಾಲುವುದಿಲ್ಲ. ಸರ್ಕಾರ ಉಚಿತವಾಗಿ ಆರೋಗ್ಯ ಸೇವೆ ಒದಗಿಸಬೇಕು’ ಎಂದು ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಒತ್ತಾಯಿಸಿದರು. ಜಿಲ್ಲೆಯಲ್ಲಿ 30 ಸಾವಿರ ಜನ ನಿವೃತ್ತ ನೌಕರರು 70 ಸಾವಿರಕ್ಕೂ ಹೆಚ್ಚು ಮಂದಿ ಹಿರಿಯ ನಾಗರಿಕರಿದ್ದಾರೆ. ಈಗಿರುವ ಸಂಘದ ಕಟ್ಟಡ ಸಾಲುತ್ತಿಲ್ಲ. ಸಂಘದ ಮಹಾಮನೆಯ ತರ ಮತ್ತೊಂದು ಕಟ್ಟಡ ನಿರ್ಮಾಣಕ್ಕೆ ಅಗತ್ಯ ಜಾಗ ಕಲ್ಪಿಸಬೇಕು. ಸರ್ಕಾರ ಗುರುತಿಸುವ ಜಾಗದಲ್ಲಿ ‘ಹಗಲು ಯೋಗ ಕ್ಷೇಮ ಕೇಂದ್ರ’ ನಿರ್ಮಿಸಲಾಗುವುದು. ಇದರಿಂದ ಹಿರಿಯ ನಾಗರಿಕರಿಗೆ ಅನುಕೂಲವಾಗಲಿದೆ. ಸರ್ಕಾರ ಇದಕ್ಕೆ ಸ್ಪಂದಿಸಿ ಅಗತ್ಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.