ಶಿರಾ: ನರೇಗಾ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಗ್ರಾಮ ಪಂಚಾಯಿತಿಗಳು ಅಭಿವೃದ್ಧಿಯತ್ತ ಸಾಗಬೇಕು ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.
ತಾಲ್ಲೂಕಿನ ರತ್ನಸಂದ್ರ ಗ್ರಾಮದಲ್ಲಿ ಬುಧವಾರ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ನರೇಗಾ ಯೋಜನೆ ಮಾಜಿ ಪ್ರಧಾನಿ ಮನಮೋಹನಸಿಂಗ್ ಅವರ ಕೊಡುಗೆ. ಇದು ವಿಶ್ವದ ಗಮನ ಸೆಳೆದಿದೆ. ಅದನ್ನು ಸಮರ್ಪಕವಾಗಿ ಬಳಸಿಕೊಂಡು ಹೆಚ್ಚು ಮಾನವ ದಿನಗಳನ್ನು ಸೃಜಿಸಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಮಾತನಾಡಿ, ಜನಪ್ರತಿನಿಧಿಗಳು ಸಹ ಎರಡು ಅವಧಿಗೆ ಮಾತ್ರ ಆಯ್ಕೆಯಾಗುವಂತೆ ಸಂವಿಧಾನದಲ್ಲಿ ಸೇರಿಸಿದ್ದರೆ ಆಸಕ್ತಿ ಇರುವ ಇನ್ನು ಅನೇಕ ಮಂದಿಗೆ ಅಧಿಕಾರ ಸಿಗುತ್ತಿತ್ತು. ಕಾಂಗ್ರೆಸ್‌ನಲ್ಲಿ ಶಾಸಕ ಟಿ.ಬಿ.ಜಯಚಂದ್ರ ಅವರು ಹಿರಿಯ ಶಾಸಕರಾಗಿದ್ದರೂ ಅವರನ್ನು ನಿರ್ಲಕ್ಷಿಸಲಾಗಿದೆ. ಅವರಿಗೆ ಸಚಿವ ಸ್ಥಾನ ದೊರೆತರೆ ಕ್ಷೇತ್ರ ಅಭಿವೃದ್ಧಿಯತ್ತ ಸಾಗುವುದು. ಈ ಬಾರಿ ಅವರು ಹೋರಾಟ ಮಾಡಿಯಾದರು ಅಧಿಕಾರ ಪಡೆಯಬೇಕು ಎಂದರು.
ಮಾಗೋಡು ಮತ್ತು ರತ್ನಸಂದ್ರದಲ್ಲಿ ನೂತನವಾಗಿ ನಿರ್ಮಿಸಿರುವ ಗ್ರಾ.ಪಂ ಕಚೇರಿಗಳ ಮುಂದೆ ಸೋಲಾರ್ ಹೈ ಮಾಸ್ಟ್ ದೀಪ ಆಳವಡಿಸಲಾಗುವುದು ಎಂದು ಭರವಸೆ ನೀಡಿದರು.
ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿ.ಪ್ರಭು, ತಾ.ಪಂ ಇಒ ಹರೀಶ್, ಪಿಡಿಒ ಜುಂಜೇಗೌಡ, ಅಧ್ಯಕ್ಷೆ ನಿಂಗಮ್ಮ ಶ್ರೀರಂಗಪ್ಪ, ಉಪಾಧ್ಯಕ್ಷ ದಿಲೀಪ್ ಕುಮಾರ್, ಗುಳಿಗೇನಹಳ್ಳಿ ನಾಗರಾಜು, ಅರೇಹಳ್ಳಿ ರಮೇಶ್, ಬಾಂಬೆ ರಾಜಣ್ಣ, ಎಸ್.ರಾಮಚಂದ್ರಪ್ಪ, ಶ್ರೀರಂಗಪ್ಪ, ರಂಗಸ್ವಾಮಿ, ತಿಮ್ಮಣ್ಣ, ಕೆಂಪನಹಳ್ಖಿ ಶಿವಣ್ಣ, ಅರೇಹಳ್ಳಿ ಗಿರೀಶ್, ತಾ.ಪಂ ಯೋಜನಾಧಿಕಾರಿ ರಂಗನಾಥ್, ಸಹಾಯಕ ನಿರ್ದೇಶಕ ಕನಕಪ್ಪ, ಗ್ರಾ.ಪಂ ಸದಸ್ಯರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.