ತುಮಕೂರು: ನಗರದ ಶಿರಾಗೇಟ್‌ನ ವೆಂಕಟೇಶಪುರದಲ್ಲಿ ಆಸ್ತಿ ವಿಚಾರಕ್ಕೆ ಮೊಮ್ಮಗ ಅಜ್ಜಿಯನ್ನು ಮರದ ತುಂಡಿನಿಂದ ಹೊಡೆದು ಕೊಲೆ ಮಾಡಿದ್ದು, ಆರೋಪಿಯನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಭೀಮಕ್ಕ (87) ಕೊಲೆಯಾದವರು. ಯೋಗಾನಂದ್ (23) ಕೊಲೆ ಮಾಡಿದ ಆರೋಪಿ.
ಭೀಮಕ್ಕ ತನ್ನ ಮಗ ಎಸ್.ನಾರಾಯಣ ಹೆಸರಿಗೆ ಆಸ್ತಿ ಬರೆದಿದ್ದರು. ನಾರಾಯಣರ ಮಗ ಯೋಗಾನಂದ್ ‘ನನ್ನ ಹೆಸರಿಗೆ ಆಸ್ತಿ ನೋಂದಣಿ ಮಾಡುವುದು ಬಿಟ್ಟು, ನಿನ್ನ ಮಗನ ಹೆಸರಿಗೆ ಮಾಡಿದ್ದೀಯ. ನಿನ್ನ ಮತ್ತು ನಿನ್ನ ಮಗನನ್ನು ಕೊಲೆ ಮಾಡಿ ನನ್ನ ಹೆಸರಿಗೆ ಆಸ್ತಿ ಮಾಡಿಕೊಳ್ಳುತ್ತೇನೆ’ ಎಂದು ಜುಲೈ 27ರಂದು ಗಲಾಟೆ ತೆಗೆದಿದ್ದನು.
ಭೀಮಕ್ಕ ತಲೆ ಹಿಡಿದು ಗೋಡೆಗೆ ನೂಕಿದ್ದು, ನಿತ್ರಾಣಗೊಂಡು ಸ್ಥಳದಲ್ಲಿ ಕುಸಿದು ಬಿದ್ದಿದ್ದರು. ಕೆಲಸದ ನಿಮಿತ್ತ ಹೊರಗಡೆ ಹೋಗಿದ್ದ ನಾರಾಯಣ ಮನೆಗೆ ಬಂದು ಮಾತ್ರೆ ತಂದು ಕೊಟ್ಟ ನಂತರ ಭೀಮಕ್ಕ ಚೇತರಿಸಿಕೊಂಡಿದ್ದರು.
ಮಂಗಳವಾರ ಬೆಳಿಗ್ಗೆ ಆಸ್ತಿ ವಿಚಾರವಾಗಿ ಮತ್ತೆ ಗಲಾಟೆಯಾಗಿದೆ. ನಾರಾಯಣ ಮಗನ ಹತ್ತಿರ ಈ ಬಗ್ಗೆ ಚರ್ಚಿಸಿದ್ದಾರೆ. ಇದೇ ವೇಳೆ ಯೋಗಾನಂದ್ ತಂದೆ ನಾರಾಯಣ, ಅಜ್ಜಿ ಭೀಮಕ್ಕ ಅವರಿಗೆ ಮರದ ತುಂಡಿನಿಂದ ಹೊಡೆದಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಭೀಮಕ್ಕ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮೃತಪಟ್ಟಿದ್ದಾರೆ.
ನಾರಾಯಣ ನೀಡಿದ ದೂರಿನ ಮೇರೆಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.