ADVERTISEMENT

ನಾಳೆ ಹಸಿರು ಕರ್ನಾಟಕ ಜಾಗೃತಿ ಅಭಿಯಾನ

ನಾಳೆಯಿಂದ ಹಸಿರು ಕರ್ನಾಟಕ ಕಾರ್ಯಕ್ರಮ, ಸ್ವಾತಂತ್ರ್ಯೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2018, 15:16 IST
Last Updated 13 ಆಗಸ್ಟ್ 2018, 15:16 IST
ರಾಕೇಶ್ ಕುಮಾರ್
ರಾಕೇಶ್ ಕುಮಾರ್   

ತುಮಕೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಅರಣ್ಯ ಇಲಾಖೆ ಮಂಗಳವಾರ (ಆಗಸ್ಟ್ 14) ಬೆಳಿಗ್ಗೆ 8 ಗಂಟೆಗೆ ನಗರದ ಟೌನ್ ಹಾಲ್ ನಿಂದ ಮಹಾತ್ಮಗಾಂಧಿ ಕ್ರೀಡಾಂಗಣವರೆಗೆ 'ಹಸಿರು ಕರ್ನಾಟಕ' ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2018-19ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಮುಖ್ಯಮಂತ್ರಿ 'ಹಸಿರು ಕರ್ನಾಟಕ' ಯೋಜನೆಯನ್ನು ಅನುಷ್ಠಾನಗೊಳಿಸಿದ್ದಾರೆ. ಇದರ ಯಶಸ್ವಿಯ ಸಲುವಾಗಿ ರಾಜ್ಯದಾದ್ಯಂತ ಬುಧವಾರದಿಂದ ಚಾಲನೆ ನೀಡಲಾಗುತ್ತಿದೆ. ಹಾಗಾಗಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

'ಮನೆಗೊಂದು ಮರ, ಊರಿಗೊಂದು ತೋಪು, ತಾಲ್ಲೂಕಿಗೊಂದು ಕಿರು ಅರಣ್ಯ, ಜಿಲ್ಲೆಗೊಂದು ಕಾಡು' ಎಂಬ ಘೋಷ ವಾಕ್ಯದೊಂದಿಗೆ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಹೇಳಿದರು.

ADVERTISEMENT

ಅಭಿಯಾನದಲ್ಲಿ ಸ್ವಯಂ ಸೇವಾ ಸಂಘ ಸಂಸ್ಥೆಗಳು ಹಾಗೂ ಇಲಾಖಾ ಸಿಬ್ಬಂದಿ ಸೇರಿದಂತೆ ಸುಮಾರು 500 ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.

ಸಚಿವರಿಂದ ಚಾಲನೆ: ಬುಧವಾರದಿಂದ ಶನಿವಾರದವರೆಗೆ ಹಮ್ಮಿಕೊಂಡಿರುವ ಸಸಿ ನೆಡುವ ಹಸಿರು ಕರ್ನಾಟಕ ಕಾರ್ಯಕ್ರಮಕ್ಕೆ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಜಿಲ್ಲಾ ಉಸ್ತುವಾರಿ ಡಾ.ಜಿ.ಪರಮೇಶ್ವರ ಅವರಿಂದ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಎಲ್ಲ ಸರ್ಕಾರಿ ಶಾಲಾ ಕಾಲೇಜು, ಇಲಾಖೆ ಆವರಣದಲ್ಲಿ ಹಾಗೂ ನಗರದ ಇತರ ಕಡೆ ಲಭ್ಯವಿರುವ ಭೂಮಿಯಲ್ಲಿ ಗಿಡ ನೆಡಲಾಗುವುದು. ಅಲ್ಲದೆ ಸಾರ್ವಜನಿಕರ ಮನೆ ಮುಂದೆ ಜಾಗ ಲಭ್ಯ ಇದ್ದರೆ ಅವರಿಗೂ ನೀಡಲಾಗುವುದು ಎಂದರು.

ಈಗಾಗಲೇ ಕಾರ್ಯಕ್ರಮ ಕುರಿತು ತೋಟಗಾರಿಕಾ ಇಲಾಖೆ, ಆರೋಗ್ಯ, ಕೃಷಿ, ಸಮಾಜ ಕಲ್ಯಾಣ, ಶಿಕ್ಷಣ, ಸಾರಿಗೆ ಇಲಾಖೆ, ಜಿಲ್ಲಾ, ತಾಲ್ಲೂಕು, ಗ್ರಾಮ ಪಂಚಾಯಿತಿ ಆವರಣಗಳಲ್ಲಿ 'ಪೋಸ್ಟರ್'ಗಳನ್ನು ಅಂಟಿಸಲಾಗುತ್ತಿದೆ ಎಂದು ತಿಳಿಸಿದರು.

ಶಿಕ್ಷಕರು ಶಾಲಾ ಮಕ್ಕಳಿಂದ ಬೀಜದುಂಡೆ ಮಾಡಿಸುವುದು. ಪರಿಸರದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಮಾಡಬೇಕು ಎಂದರು.

ಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಪ್ರಾದೇಶಿಕ ಅರಣ್ಯ ವಲಯದ ಉಪಸಂರಕ್ಷಣಾಧಿಕಾರಿ ರಾಮಲಿಂಗೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.