ADVERTISEMENT

ತುಮಕೂರು: ಅಂತರ್ಜಲ ಹೆಚ್ಚಳಕ್ಕೆ ಉಪಗ್ರಹದ ನೆರವು

ಅಂತರ್ಜಲ ಚೇತನ ಯೋಜನೆ ಅನುಷ್ಠಾನಕ್ಕೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 2 ಮೇ 2020, 17:32 IST
Last Updated 2 ಮೇ 2020, 17:32 IST
ತುಮಕೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳು ಭಾಗವಹಿಸಿದ್ದರು
ತುಮಕೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳು ಭಾಗವಹಿಸಿದ್ದರು   

ತುಮಕೂರು: ‘ಅಂತರ್ಜಲ ಚೇತನ’ ಯೋಜನೆ ಅನುಷ್ಠಾನಕ್ಕೆ ಸಾಂಪ್ರದಾಯಿಕ ನೀರಿನ ಹರಿವು ಇರುವ ಪ್ರದೇಶಗಳನ್ನು ಉಪಗ್ರಹ ಆಧಾರಿತ ತಂತ್ರಜ್ಞಾನದಿಂದ ಗುರುತಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಶನಿವಾರ ಹೇಳಿದರು.

ಯೋಜನೆ ಜಾರಿ ಸಂಬಂಧ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.

ಮಳೆನೀರು ಸಂಗ್ರಹ, ಮಣ್ಣಿನ ಸವಕಳಿ ತಡೆಯುವುದು, ಮಣ್ಣಿನ ತೇವಾಂಶ ಹೆಚ್ಚಿಸುವುದು, ಸ್ವಾಭಾವಿಕ ಹಳ್ಳಗಳ ಉದ್ದಕ್ಕೂ ಕೃತಕವಾದ ಅಂತರ್ಜಲ ಮರುಪೂರಣ ರಚನೆಗಳನ್ನು ನಿರ್ಮಿಸಲು, ಸ್ವಾಭಾವಿಕ ಸಸ್ಯವರ್ಗವನ್ನು ಹೆಚ್ಚಿಸಲು ‘ಅಂತರ್ಜಲ ಚೇತನ’ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.

ADVERTISEMENT

ಯೋಜನೆ ಅನುಷ್ಠಾನಕ್ಕೆ ತಗಲುವ ಕಾಮಗಾರಿ ವೆಚ್ಚವನ್ನು ನರೇಗಾದಿಂದ ಭರಿಸಲಾಗುವುದು. ಅನುಷ್ಠಾನಕ್ಕೆ ತಾಂತ್ರಿಕ ನೆರವನ್ನು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ಪಡೆಯಲಾಗುತ್ತಿದೆ ಎಂದು ವಿವರಿಸಿದರು.

ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ದೃಷ್ಟಿಯಿಂದ 330 ಗ್ರಾ.ಪಂ ವ್ಯಾಪ್ತಿಯಲ್ಲಿ ಯೋಜನೆ ಜಾರಿ ಮಾಡಲಾಗುತ್ತಿದೆ. ಯಾವ ಸ್ಥಳಗಳಲ್ಲಿ ಯಾವ ರೀತಿಯ ಮಳೆ ನೀರು ಸಂಗ್ರಹ ರಚನೆಗಳನ್ನು ಅಳವಡಿಸಬೇಕು ಎಂಬುವುದರ ಕುರಿತು ಕಾರ್ಯಯೋಜನೆ ತಯಾರಿಸಲಾಗಿದೆ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ವಾಸವಿರುವ ಆಸಕ್ತ ಯುವ ಜನರನ್ನು ಕಾಯಕ ಬಂಧುಗಳನ್ನಾಗಿ ಆಯ್ಕೆ ಮಾಡಿ ಕಾಮಗಾರಿ ಸ್ಥಳಗಳಲ್ಲಿ ನಿಯೋಜಿಸಲಾಗುತ್ತದೆ. ಪ್ರಸಕ್ತ ಆರ್ಥಿಕ ವರ್ಷ ಮುಗಿಯುವುದರೊಳಗೆ ಜಿಲ್ಲೆಯಾದ್ಯಂತ ಎಲ್ಲಾ ಜಲಾನಯನ ಪ್ರದೇಶಗಳಲ್ಲಿ ನೀರಿನ ಪುನಶ್ಚೇತನ ಕಾಮಗಾರಿಗಳನ್ನು ಪೂರ್ಣಗೊಳಿಸಲು ಗುರಿ ಹೊಂದಲಾಗಿದೆ ಎಂದು ಹೇಳಿದರು.

ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಕಾರ್ಯಾಚರಣ ನಿರ್ದೇಶಕ ರವೀಂದ್ರ ದೇಸಾಯಿ, ಜಿ.ಪಂ ಉಪಕಾರ್ಯದರ್ಶಿ (ಅಭಿವೃದ್ಧಿ) ಟಿ.ಕೆ.ರಮೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.