ADVERTISEMENT

ವೀರಶೈವ– ಲಿಂಗಾಯತರ ಒಡೆಯಲು ಹುನ್ನಾರ

ಸೇವಾಧೀಕ್ಷಾ ಸಮಾರಂಭದಲ್ಲಿ ಮಹಾಸಭಾದ ಅಧ್ಯಕ್ಷ ಶಂಕರ ಮಹಾದೇವ ಬಿದರಿ ಆರೋಪ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 4:11 IST
Last Updated 26 ಜುಲೈ 2025, 4:11 IST
ಗುಬ್ಬಿ ತಾಲ್ಲೂಕು ಹೇರೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಪದಾಧಿಕಾರಿಗಳಿಗೆ ಸೇವಾಧೀಕ್ಷಾ ಪ್ರಮಾಣ ಪತ್ರ ವಿತರಿಸಲಾಯಿತು
ಗುಬ್ಬಿ ತಾಲ್ಲೂಕು ಹೇರೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಪದಾಧಿಕಾರಿಗಳಿಗೆ ಸೇವಾಧೀಕ್ಷಾ ಪ್ರಮಾಣ ಪತ್ರ ವಿತರಿಸಲಾಯಿತು   

ಗುಬ್ಬಿ: ಸಾವಿರಾರು ವರ್ಷಗಳ ಇತಿಹಾಸವಿರುವ ವೀರಶೈವ- ಲಿಂಗಾಯತರು ಒಂದೇ ಆಗಿದ್ದರೂ ಕೆಲವರು ಸಮುದಾಯವನ್ನು ಒಡೆಯಲು ಹುನ್ನಾರ ನಡೆಸುತ್ತಿರುವುದು ದುರಾದೃಷ್ಟಕರ ಎಂದು ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಂಕರ ಮಹಾದೇವ ಬಿದರಿ ಹೇಳಿದರು.

ಕಸಬಾ ಹೋಬಳಿ ಹೇರೂರಿನಲ್ಲಿ ಶುಕ್ರವಾರ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದಿಂದ ಏರ್ಪಡಿಸಿದ್ದ ಸೇವಾಧೀಕ್ಷಾ ಸಮಾರಂಭ, ಸದಸ್ಯತ್ವ ಅಭಿಯಾನ, ಬೆಟ್ಟದಹಳ್ಳಿ ಚಂದ್ರಶೇಖರ ಸ್ವಾಮೀಜಿ ಪೀಠಾರೋಹಣ ಸುವರ್ಣ ಮಹೋತ್ಸವ ಮತ್ತು ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಬಸವಾದಿ ಶರಣರ ಬಗ್ಗೆ ಬೇರೆಯವರು ಸಮುದಾಯಕ್ಕೆ ಹೇಳಿಕೊಡುವ ಅಗತ್ಯವಿಲ್ಲ. ಸಮುದಾಯದ ಸ್ವಾಮೀಜಿ ಸಮುದಾಯದಲ್ಲಿ ಒಡಕು ಮೂಡಿಸದೆ, ಒಗ್ಗಟ್ಟು ಮೂಡಿಸಬೇಕು ಎಂದು ತಿಳಿಸಿದರು.

ADVERTISEMENT

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಸಿ. ಸೋಮಶೇಖರ್ ಮಾತನಾಡಿ, ಬಸವಾದಿ ಶರಣರ ಆಶಯದಂತೆ ಸಮುದಾಯದಲ್ಲಿರುವ ಎಲ್ಲಾ ಹುಳುಕುಗಳನ್ನು ತೆಗೆದು ಆದರ್ಶ ಸಮಾಜ ನಿರ್ಮಾಣಕ್ಕೆ ಎಲ್ಲರೂ ಮುಂದಾಗಬೇಕಿದೆ. ಗ್ರಾಮೀಣ ಭಾಗಗಳಲ್ಲಿ ವೀರಶೈವ ಲಿಂಗಾಯತ ಧರ್ಮದ ಸಿದ್ಧಾಂತಗಳನ್ನು ಪ್ರಚುರ ಪಡಿಸುವ ಮೂಲಕ ಸಮುದಾಯದವರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.

ಬಸವಣ್ಣ ಅವರನ್ನು ಸಾಂಸ್ಕೃತಿಕ ಪ್ರತಿನಿಧಿ ಎಂದು ಘೋಷಿಸಿರುವ ಸರ್ಕಾರ ಯಾವುದೇ ಅನುದಾನ ನೀಡದೆ ತಾರತಮ್ಯ ಎಸಗುತ್ತಿದೆ. ಪ್ರತಿ ತಾಲ್ಲೂಕಿನಲ್ಲಿಯೂ ಶರಣ ಭವನ ಅಥವಾ ಬಸವ ಭವನ ನಿರ್ಮಾಣಕ್ಕೆ ಸರ್ಕಾರ ಮುಂದಾಗಬೇಕು ಒಂದು ಒತ್ತಾಯಿಸಿದರು.

ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾ ರಾಜ್ಯ ಕಾರ್ಯದರ್ಶಿ ಎಸ್‌.ಆರ್. ನಟರಾಜು ಮಾತನಾಡಿ, ವೀರಶೈವ- ಲಿಂಗಾಯತರನ್ನು ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸದಿರುವುದರಿಂದ ಕೇಂದ್ರ ಸರ್ಕಾರದ ಯಾವುದೇ ಉದ್ಯೋಗ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಸಮುದಾಯದವರು ಸ್ಥಾನ ಪಡೆಯಲು ಸಾಧ್ಯವಾಗುತ್ತಿಲ್ಲ. ಮಹಾಸಭಾಕ್ಕೆ ತಾಲ್ಲೂಕಿನಲ್ಲಿ ಹೆಚ್ಚು ಸದಸ್ಯರನ್ನು ನೋಂದಣಿ ಮಾಡುವ ಮೂಲಕ ಸಂಘಟನೆಯನ್ನು ಬಲ ಗೊಳಿಸಬೇಕಿದೆ. ಶೈಕ್ಷಣಿಕ ಸಾಧನೆ ಮಾಡಲು ಅನುಕೂಲವಾಗುವಂತೆ ವಿದ್ಯಾರ್ಥಿಗಳನ್ನು ಉತ್ತೇಜಿಸುವ ಕಾರ್ಯಗಳಿಗೆ ಮಹಾಸಭಾ ಮುಂದಾಗಬೇಕು ಎಂದು ತಿಳಿಸಿದರು.

ಬೆಟ್ಟದಹಳ್ಳಿ ಗವಿಮಠದ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ವೀರಶೈವ- ಲಿಂಗಾಯತರು ಮಾತಿಗಿಂತ ಕಾಯಕಕ್ಕೆ ಆದ್ಯತೆ ನೀಡಬೇಕಿದೆ. ದುಡಿದು ಹಂಚಿ ತಿನ್ನುವುದು ವೀರಶೈವ ಧರ್ಮ ಪರಂಪರೆ. ಸಮುದಾಯದವರು ತಾರತಮ್ಯ ತ್ಯಜಿಸಿ ಒಂದಾದಲ್ಲಿ ಅಭಿವೃದ್ಧಿಯತ್ತ ಸಾಗಲು ಸಾಧ್ಯ ಎಂದು ತಿಳಿಸಿದರು.

ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ವಿವಿಧ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಸೇವಾಧೀಕ್ಷೆ, ಪ್ರಮಾಣ ಪತ್ರ ಹಾಗೂ ವಚನ ಗಾಯನ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ದೊಡ್ಡಗುಣಿ ರಂಭಾಪುರಿ ಶಾಖ ಮಠದ ರೇವಣ್ಣ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ತೆವಡೆಹಳ್ಳಿ ಗದ್ದುಗೆ ಮಠದ ಗೋಸಲ ಚೆನ್ನಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ, ಗೊಲ್ಲಹಳ್ಳಿ ಮಠದ ವಿಭವ ವಿದ್ಯಾಶಂಕರ ದೇಶಿ ಕೇಂದ್ರ ಸ್ವಾಮೀಜಿ, ತೊರೆಮಠದ ಚಂದ್ರಶೇಖರ ದೇಶಿ ಕೇಂದ್ರ ಸ್ವಾಮೀಜಿ, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ಮಹಿಳಾ ಘಟಕದ ರಾಷ್ಟ್ರೀಯ ಅಧ್ಯಕ್ಷೆ ವೀಣಾ ಕಾಶಪ್ಪ, ಮಹಿಳಾ ವಿಭಾಗದ ರಾಜ್ಯ ಘಟಕದ ಅಧ್ಯಕ್ಷೆ ಮುಕ್ತಾಂಬ, ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ಪರಮೇಶ್, ತಾಲ್ಲೂಕು ಘಟಕದ ಅಧ್ಯಕ್ಷ ಎಸ್ ಮಂಜುನಾಥ್, ನಿರ್ದೇಶಕರು, ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡ ಎಸ್.ಡಿ. ದಿಲೀಪ್ ಕುಮಾರ್, ಸಿ. ಮಲ್ಲಿಕಾರ್ಜುನಯ್ಯ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ಹಾಗೂ ಮಹಾಸಭಾದ ಸದಸ್ಯರು ಭಾಗವಹಿಸಿದ್ದರು.

ಫೋಟೋ 02ಸುದ್ದಿ 01: ಕಸಬಾ ಹೋಬಳಿ ಹೇರೂರಿನಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ವಿವಿಧ ಮಠಾಧೀಶರು ಹಾಗೂ ಗಣ್ಯರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.