ADVERTISEMENT

ಗುಬ್ಬಿ ಕ್ಷೇತ್ರ | ಬೆಟ್ಟದಷ್ಟು ನಿರೀಕ್ಷೆ ಈಡೇರಿಸುವವರೇ ಶಾಸಕರು?

​ಪ್ರಜಾವಾಣಿ ವಾರ್ತೆ
Published 28 ಮೇ 2023, 23:30 IST
Last Updated 28 ಮೇ 2023, 23:30 IST
ಚುರುಕುಗೊಳ್ಳಬೇಕಿರುವ ಹೇಮಾವತಿ ನಾಲೆ ದುರಸ್ತಿ
ಚುರುಕುಗೊಳ್ಳಬೇಕಿರುವ ಹೇಮಾವತಿ ನಾಲೆ ದುರಸ್ತಿ   

ಶಾಂತರಾಜು ಎಚ್.ಜಿ ಗುಬ್ಬಿ

ಗುಬ್ಬಿ: ಕ್ಷೇತ್ರದಲ್ಲಿ ಸತತ 5 ಬಾರಿ ಆಯ್ಕೆಯಾಗುವ ಮೂಲಕ ಇತಿಹಾಸ ನಿರ್ಮಿಸಿರುವ ಶಾಸಕ ಎಸ್.ಆರ್ ಶ್ರೀನಿವಾಸ್ ಕ್ಷೇತ್ರದ ಹಲವು ಸಮಸ್ಯೆಗಳಿಗೆ ಧ್ವನಿಯಾಗಿ ನಿಲ್ಲಬೇಕಿದೆ. ಅಭಿವೃದ್ಧಿ ಹೆಸರಿನಲ್ಲಿ ಮತಯಾಚನೆ ಮಾಡಿರುವ ಶಾಸಕರು, ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಗಮನಹರಿಸುವವರೇ ಎಂಬ ನಿರೀಕ್ಷೆ ಕ್ಷೇತ್ರದ ಮತದಾರರದ್ದು.

ಅಭಿವೃದ್ಧಿ ವಿಚಾರದಲ್ಲಿ ಶಾಸಕರಿಗೆ ಹಾಗೂ ಸಾರ್ವಜನಿಕರಿಗೆ ಸಹಕರಿಸಬೇಕಾಗಿರುವ ಅಧಿಕಾರಿಗಳು ತಾಲ್ಲೂಕು ಕೇಂದ್ರದಲ್ಲಿಯೇ ವಾಸ್ತವ್ಯ ಇರುವಂತೆ ಶಾಸಕರು ಕ್ರಮಕೈಗೊಳ್ಳಬೇಕಿದೆ. ತಾಲ್ಲೂಕಿನ ಬಹುತೇಕ ಸಂಪರ್ಕ ರಸ್ತೆಗಳು ಹಾಳಾಗಿರುವುದರಿಂದ ಶೀಘ್ರ ದುರಸ್ತಿ ಹಾಗೂ ಹೊಸರಸ್ತೆ ನಿರ್ಮಾಣ ಮಾಡುವತ್ತ ಗಮನ ನೀಡಬೇಕಾಗಿದೆ.

ADVERTISEMENT

ಕ್ಷೇತ್ರದಲ್ಲಿ ನಿರ್ಮಾಣಗೊಂಡಿದ್ದ 175 ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಹಾಳಾಗಿರುವ ಬಹುಪಾಲು ಘಟಕಗಳನ್ನು ದುರಸ್ತಿಗೊಳಿಸಬೇಕಿದೆ. ಪಟ್ಟಣವೂ ಒಳಗೊಂಡಂತೆ ಕ್ಷೇತ್ರದ ಎಲ್ಲ ಗ್ರಾಮಗಳಲ್ಲಿಯೂ ಸಾರ್ವಜನಿಕ ಸ್ಮಶಾನಗಳಿಗೆ ಜಾಗ ಗುರ್ತಿಸಬೇಕಿದೆ. ಬಗರ್ ಹುಕುಂನಲ್ಲಿ ಅರ್ಜಿ ಸಲ್ಲಿಸಿ ಮಂಜೂರಾತಿಗಾಗಿ ಕಾಯುತ್ತಿರುವ ಸಾವಿರಾರು ರೈತರಿಗೆ ಭೂಮಿ ಮಂಜೂರು ಮಾಡಿಸಬೇಕಾಗಿದೆ.

ಪಟ್ಟಣದಲ್ಲಿರುವ ರಂಗಕರ್ಮಿ ಗುಬ್ಬಿ ವೀರಣ್ಣ ಅವರ ಸಮಾಧಿಗೆ ಕಾಯಕಲ್ಪ,ಕನ್ನಡ ಭವನ, ಪತ್ರಿಕಾ ಭವನ ಹಾಗೂ ಪೊಲೀಸ್ ವಸತಿ ಸಮುಚ್ಛಯ ನಿರ್ಮಾಣಕ್ಕೆ ಶಾಸಕರು ಮುಂದಾಗಬೇಕಾಗಿದೆ.

ಶೈಕ್ಷಣಿಕ ಕ್ಷೇತ್ರ

ಹಾಳಾಗಿರುವ ಸರ್ಕಾರಿ ಶಾಲಾ ಕಟ್ಟಡಗಳ ದುರಸ್ತಿ ಹಾಗೂ ನಿರ್ಮಾಣಕ್ಕೆ ಆದ್ಯತೆ ನೀಡುವ ಜತೆಗೆ ಪಟ್ಟಣದ ಸರ್ಕಾರಿ ಪದವಿ ಕಾಲೇಜು ಮೈದಾನದಲ್ಲಿ ನೀರು ನಿಲ್ಲುವುದನ್ನು ತಪ್ಪಿಸಲು ಮಣ್ಣು ತುಂಬಿಸುವ ಕಾರ್ಯ ಮಾಡಬೇಕಾಗಿದೆ. ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಬೇಕಿದೆ. ತಾಲ್ಲೂಕಿಗೆ ಮಂಜೂರಾಗಿರುವ ಸರ್ಕಾರಿ ಐಟಿಐ ಕಾಲೇಜಿಗೆ ಸ್ವಂತ ಕಟ್ಟಡ ಒದಗಿಸುವ ಜತೆಗೆ ಸರ್ಕಾರಿ ಡಿಪ್ಲೊಮೊ ಕಾಲೇಜು ಸ್ಥಾಪನೆಗೆ ಮುಂದಾಗಬೇಕು ಎನ್ನುವುದು ಯುವ ವಿದ್ಯಾರ್ಥಿಗಳ ಒತ್ತಾಯವಾಗಿದೆ.

ಪಟ್ಟಣದಲ್ಲಿರುವ ಅಂಬೇಡ್ಕರ್ ಭವನ ಯಾವುದೇ ಕಾರ್ಯಗಳಿಗೂ ಬಳಸದೆ ಖಾಲಿ ಉಳಿದಿರುವುದರಿಂದ ಅಂಬೇಡ್ಕರ್ ಹೆಸರಿನಲ್ಲಿ ಹೈಟೆಕ್ ಗ್ರಂಥಾಲಯ ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಶಾಸಕರು ಆಲೋಚಿಸಬೇಕಿದೆ. 

ಬಸ್ ನಿಲ್ದಾಣ ಹಾಗೂ ಆಸ್ಪತ್ರೆ: ತಾಲ್ಲೂಕಿನ ಜನರ ಬಹು ದಿನಗಳ ಬೇಡಿಕೆಯಾಗಿರುವ ಸರ್ಕಾರಿ ಬಸ್ ಡಿಪೊ ಸ್ಥಾಪಿಸುವ ಜತೆಗೆ ಎಲ್ಲ ಹೋಬಳಿ ಕೇಂದ್ರಗಳಲ್ಲಿಯೂ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣ ಮಾಡಿ ಎಲ್ಲೆಡೆಯೂ ಬಸ್‌ಗಳು ಸಂಚರಿಸಲು ಕ್ರಮಕೈಗೊಳ್ಳಬೇಕಿದೆ.

ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಒದಗಿಸಿಕೊಡುವ ನಿಟ್ಟಿನಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಒಳಗೊಂಡಂತೆ ತಾಲ್ಲೂಕಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಿ ಹೋಬಳಿ ಕೇಂದ್ರದಲ್ಲಿರುವ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ 24 ಗಂಟೆಗಳ ಸೇವೆ ಲಭ್ಯವಾಗುವಂತೆ ಮಾಡಬೇಕಿದೆ.

ಆಡಳಿತ ಸೌಧ

ತಾಲ್ಲೂಕು ಕೇಂದ್ರದಲ್ಲಿರುವ ಅಬಕಾರಿ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಕಾರ್ಮಿಕ ಕಲ್ಯಾಣ ಇಲಾಖೆ ಹಾಗೂ ದೇವರಾಜ ಅರಸು ನಿಗಮ ಕಚೇರಿಗಳಿಗೆ ಸ್ವಂತ ಕಟ್ಟಡ ಇಲ್ಲದೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ತಾಲ್ಲೂಕು ಆಡಳಿತಸೌಧ ಕಟ್ಟಡವನ್ನು ಮೇಲ್ದರ್ಜೆಗೇರಿಸಿ ಖಾಸಗಿ ಕಟ್ಟಡದಲ್ಲಿ ನಡೆಯುತ್ತಿರುವ ಸರ್ಕಾರಿ ಕಚೇರಿಗಳನ್ನು ಸ್ಥಳಾಂತರಿಸಿದರೆ ಅನುಕೂಲವಾಗಲಿದೆ.

ಪಟ್ಟಣ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಮಾಡುವ ಜತೆಗೆ ಈಗಾಗಲೇ ₹20 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿದ್ದರೂ ಅಪೂರ್ಣಗೊಂಡಿರುವ ಯುಜಿಡಿ ಕಾಮಗಾರಿ ಶೀಘ್ರವೇ ಮುಗಿಸಿ ಸಾರ್ವಜನಿಕರ ಉಪಯೋಗಕ್ಕೆ ಬರುವಂತೆ ಮಾಡಬೇಕಿದೆ.

ಕೃಷಿ ಮತ್ತು ನೀರಾವರಿ: ಹಾಗಲವಾಡಿ ಹಾಗೂ ಮಠದ ಕೆರೆಗಳಿಗೆ ಹೇಮಾವತಿ ನೀರು ಹರಿಸುವ ಜೊತೆಗೆ ಮಂದಗತಿಯಲ್ಲಿ ಸಾಗುತ್ತಿರುವ ಹೇಮಾವತಿ ನಾಲೆ ದುರಸ್ತಿ, ಎತ್ತಿನಹೊಳೆ ನೀರಾವರಿ ಯೋಜನೆ, ಬಿಕ್ಕೇಗುಡ್ಡ ಏತ ನೀರಾವರಿ ಯೋಜನೆಗಳಿಗೆ ಚುರುಕು ಮುಟ್ಟಿಸಬೇಕಿದೆ.

ತಾಲ್ಲೂಕಿನಲ್ಲಿ 250ಕ್ಕೂ ಹೆಚ್ಚು ಕೆರೆ ಅಂಗಳಗಳು ಬಹುಪಾಲು ಒತ್ತುವರಿಯಾಗಿವೆ. ಅವುಗಳನ್ನು ತೆರವುಗೊಳಿಸಬೇಕಿದೆ. ತಾಲ್ಲೂಕಿನ ಬಹುಪಾಲು ರೈತರು ತೆಂಗು,ಅಡಿಕೆ ಹಾಗೂ ಮಾವು ಬೆಳೆಗಳಲ್ಲಿಯೇ ಬದುಕು ಕಂಡುಕೊಂಡಿದ್ದಾರೆ. ಇತ್ತೀಚಿನ ಬೆಲೆ ಕುಸಿತದಿಂದ ರೈತರು ಆತಂಕಕ್ಕೆ ಒಳಗಾಗಿರುವುದರಿಂದ ರೈತರನ್ನು ಉತ್ತೇಜಿಸುವ ನಿಟ್ಟಿನಲ್ಲಿ ತೆಂಗು ಹಾಗೂ ಮಾವು ಉಪ ಉತ್ಪನ್ನಗಳ ಕೈಗಾರಿಕಾ ಘಟಕಗಳನ್ನು ಸ್ಥಾಪಿಸುವತ್ತ ಗಮನ ಹರಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸಂಪರ್ಕಕ್ಕೆ ಸಿಗದ ಶಾಸಕ

ಕ್ಷೇತ್ರದ ಮತದಾರರ ನಿರೀಕ್ಷೆ ಸಮಸ್ಯೆ ಹಾಗೂ ಅಭಿವೃದ್ಧಿ ಕ್ರಿಯಾಯೋಜನೆ ಬಗ್ಗೆ ಶಾಸಕರನ್ನು ಮಾತನಾಡಿಸಲು ಪ್ರಯತ್ನಿಸಿದರೂ ಸಂಪರ್ಕಕ್ಕೆ ಸಿಗಲಿಲ್ಲ. ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಒಮ್ಮೆ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿ ಹೋಗಿದ್ದನ್ನು ಬಿಟ್ಟರೆ ಮತ್ತೆ ಕ್ಷೇತ್ರಕ್ಕೆ ಬಂದಿಲ್ಲ ಎನ್ನುವುದು ಸಾರ್ವಜನಿಕರ ಆರೋಪ.

ವಿದ್ಯುತ್ ಕೈಗಾರಿಕೆಗೆ ಸಿಗಲಿದೆಯೇ ಆದ್ಯತೆ?

ಅಸಮರ್ಪಕ ವಿದ್ಯುತ್ ಸರಬರಾಜುನಿಂದಾಗಿ ರೈತರು ಹಾಗೂ ಸಣ್ಣಪುಟ್ಟ ಉದ್ಯಮಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಗತ್ಯವಿರುವ ಕಡೆ ವಿದ್ಯುತ್ ಸ್ಥಾವರ ಸ್ಥಾಪಿಸಿ ಸಮರ್ಪಕ ವಿದ್ಯುತ್ ಸರಬರಾಜಿಗೆ ಅನುವು ಮಾಡಿಕೊಡದಿದ್ದಲ್ಲಿ ರೈತರು ಹಾಗೂ ಸಣ್ಣಪುಟ್ಟ ಉದ್ಯಮಿಗಳು ಗುಳೆ ಹೋಗುವ ಸಾಧ್ಯತೆ ಇದೆ. ತಾಲ್ಲೂಕಿನಲ್ಲಿ ಸ್ಥಾಪನೆಯಾಗಿರುವ ಎಚ್ಎಎಲ್ ಘಟಕದಲ್ಲಿ ಸ್ಥಳೀಯ ಅರ್ಹ ಅಭ್ಯರ್ಥಿಗಳಿಗೆ ಅವಕಾಶ ಹಾಗೂ ಹೊಸದಾಗಿ ಕೈಗಾರಿಕಾ ವಲಯ ಸ್ಥಾಪಿಸಿ ಯುವಕರಿಗೆ ಉದ್ಯೋಗ ನೀಡುವತ್ತ ಗಮನಹರಿಸಬೇಕು ಎನ್ನುವುದು ನಿರುದ್ಯೋಗಿ ಯುವಕರ ಬೇಡಿಕೆಯಾಗಿದೆ.

ಸಂಪೂರ್ಣ ಹಾಳಾಗಿರುವ ನಿಟ್ಟೂರು -ಚೇಳೂರು ರಸ್ತೆ
ಗುಬ್ಬಿಯಲ್ಲಿ ಅಪೂರ್ಣಗೊಂಡಿರುವ ಯುಜಿಡಿ ಕಾಮಗಾರಿಯಿಂದ ನೀರು ರಸ್ತೆಯಲ್ಲಿಯೇ ಹರಿಯುತ್ತಿರುವುದು
ಪಟ್ಟಣದ ಪದವಿ ಕಾಲೇಜು ಮೈದಾನದಲ್ಲಿ ನೀರು ನಿಂತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.