ADVERTISEMENT

ಜೈನ ಮಂದಿರದಲ್ಲಿ ಧಾರ್ಮಿಕ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 18 ಮೇ 2025, 15:40 IST
Last Updated 18 ಮೇ 2025, 15:40 IST
ಗುಬ್ಬಿ ತಾಲ್ಲೂಕು ಬಿದರೆ ಸುಪಾಶ್ವನಾಥ ಜೈನ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸ್ವಾಮೀಜಿ ಹಾಗೂ ಮಹಿಳೆಯರು
ಗುಬ್ಬಿ ತಾಲ್ಲೂಕು ಬಿದರೆ ಸುಪಾಶ್ವನಾಥ ಜೈನ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸ್ವಾಮೀಜಿ ಹಾಗೂ ಮಹಿಳೆಯರು   

ಗುಬ್ಬಿ: ಸಮುದಾಯದಲ್ಲಿ ಒಗ್ಗಟ್ಟು ರೂಢಿಸಿಕೊಂಡಾಗ ಮಾತ್ರ ಸಮುದಾಯಕ್ಕೆ ಅಗತ್ಯ ಸೌಲಭ್ಯಗಳನ್ನು ಪಡೆಯಲು ಸಾಧ್ಯ ಎಂದು ನರಸಿಂಹರಾಜಾಪುರದ ಸಿಂಹನಗದ್ದೆ ಲಕ್ಷ್ಮಿಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಹೇಳಿದರು.

ಚೇಳೂರು ಹೋಬಳಿ ಬಿದರೆ ಗ್ರಾಮದ ಸುಪಾಶ್ವನಾಥ ಜೈನ ಮಂದಿರದಲ್ಲಿ ಭಾನುವಾರ ನಡೆದ ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿದರು.

ಬಿದರೆ ಗ್ರಾಮದಲ್ಲಿರುವ ಜಿನಮಂದಿರ ಪ್ರಾಚೀನ ಇತಿಹಾಸ ಹೊಂದಿದೆ. ಇದರ ಮಹತ್ವವನ್ನು ಎಲ್ಲರಿಗೂ ತಿಳಿಸಿಕೊಡುವ ನಿಟ್ಟಿನಲ್ಲಿ ಸಮುದಾಯ ಮುಂದಾಗಬೇಕಿದೆ. ಈ ಭಾಗದಲ್ಲಿ ಸಮುದಾಯದವರು ಅಲ್ಪಸಂಖ್ಯೆಯಲ್ಲಿದ್ದರೂ ಉತ್ತಮ ಧಾರ್ಮಿಕ ಕಾರ್ಯಗಳನ್ನು ಮಾಡುತ್ತಿರುವುದು ಪ್ರಶಂಸನೀಯ ಎಂದು ಹೇಳಿದರು.

ADVERTISEMENT

ಪುರಾತನ ಜಿನಮಂದಿರವಾಗಿರುವ ಇಲ್ಲಿಗೆ ಭಕ್ತರು ಬಂದು ಹೋಗಲು ಸಾರಿಗೆ ಸೌಕರ್ಯದ ಕೊರತೆ ಇರುವುದರಿಂದ ಸಂಸದರು ಹಾಗೂ ಶಾಸಕರು ಅಗತ್ಯವಿರುವ ಸಾರಿಗೆ ಸೌಕರ್ಯ ಒದಗಿಸಿಕೊಟ್ಟಲ್ಲಿ ಅನುಕೂಲವಾಗುವುದು ಎಂದು ತಿಳಿಸಿದರು.

ಶಾಸಕ ಎಸ್.ಆರ್. ಶ್ರೀನಿವಾಸ್ ಮಾತನಾಡಿ, ಧಾರ್ಮಿಕ ಆಚರಣೆಯ ಜೊತೆಗೆ ತಂದೆ ತಾಯಿಗಳಿಗೂ ಗೌರವ ಕೊಡುವುದನ್ನು ರೂಢಿಸಿಕೊಂಡಾಗ ಮನುಷ್ಯ ಉನ್ನತಮಟ್ಟ ತಲುಪಲು ಸಾಧ್ಯ. ಮಾತಿಗಿಂತ ಮಾಡುವ ಕೆಲಸದಲ್ಲಿ ಶ್ರದ್ಧೆ ತೋರಿದಲ್ಲಿ ಬದುಕನ್ನು ಸಾರ್ಥಕ ಪಡಿಸಿಕೊಳ್ಳಬಹುದು ಎಂದು ಅವರು ತಿಳಿಸಿದರು.

ಸುಪಾಶ್ವನಾಥ ಸ್ವಾಮಿ ಮೂರ್ತಿಯನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ಸಮುದಾಯದ ಮಹಿಳೆಯರು ಪೂರ್ಣಕುಂಭ ಹೊತ್ತು ದೇವರ ಮೂರ್ತಿ ಜೊತೆ ಹೆಜ್ಜೆ ಹಾಕಿದರು.

ಸಮುದಾಯದ ಮುಖಂಡರು, ಭಕ್ತರು, ಗ್ರಾಮಸ್ಥರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.