ADVERTISEMENT

ಗೂಳೂರು ಗಣಪತಿ ವಿಸರ್ಜನೆ: ಮದ್ಯ ಮಾರಾಟ ನಿಷೇಧ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2018, 16:25 IST
Last Updated 14 ಡಿಸೆಂಬರ್ 2018, 16:25 IST
ಗೂಳೂರು ಗಣೇಶ
ಗೂಳೂರು ಗಣೇಶ   

ತುಮಕೂರು: ತಾಲ್ಲೂಕಿನ ಗೂಳೂರು ಗ್ರಾಮದಲ್ಲಿರುವ ಹೆಸರಾಂತ ಮಹಾ ಗಣಪತಿ ಮೂರ್ತಿಯ ವಿಸರ್ಜನೆ ಹಿನ್ನಲೆಯಲ್ಲಿ ಡಿಸೆಂಬರ್ 15 ಮತ್ತು 16 ರಂದು ಗೂಳೂರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾನಪದ ಕಲಾತಂಡ, ನೃತ್ಯತಂಡದೊಂದಿಗೆ ವಿಜೃಂಭಣೆಯ ಮೆರವಣಿಗೆ ನಡೆಯಲಿದೆ.

ಈ ಸಂದರ್ಭದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಡಿಸೆಂಬರ್ 15 ರ ಬೆಳಿಗ್ಗೆ 6 ಗಂಟೆಯಿಂದ 17 ರ ಬೆಳಿಗ್ಗೆ 6 ಗಂಟೆಯವರೆಗೆ ಗೂಳೂರು ಗ್ರಾಮದ ವ್ಯಾಪ್ತಿಯಲ್ಲಿರುವ ಗೂಳೂರು-ಕೈದಾಳ ರಸ್ತೆ ವೆಂಕಟೇಶ್ವರ ಬಾರ್ ಹಾಗೂ ರೆಸ್ಟೋರೆಂಟ್‌ನಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ. ಕೆ.ರಾಕೇಶ್ ಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.

ಇಂದು ಉತ್ಸವ
ನರಕ ಚರ್ತುದರ್ಶಿಯಂದು ಆರಂಭವಾದ ಗೂಳೂರು ಗಣಪನ ಪೂಜಾ ಕೈಂಕರ್ಯಗಳು ಕಾರ್ತಿಕ ಮಾಸದಲ್ಲಿ ಸಂಪೂರ್ಣಗೊಂಡಿದ್ದು, ಸಕಲ ಧಾರ್ಮಿಕ ವಿಧಿವಿಧಾನಗಳ ಮೂಲಕ ಡಿ.15 ರಂದು ಐತಿಹಾಸಿಕ ಗೂಳೂರು ಮಹಾಗಣಪತಿಯ ಉತ್ಸವ ನಡೆಯಲಿದೆ ಎಂದು ದೇವಾಲಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತಿ ಸದಸ್ಯ ಗೂಳೂರು ಶಿವಕುಮಾರ್ ತಿಳಿಸಿದ್ದಾರೆ.

ADVERTISEMENT

ರಾತ್ರಿ 8 ಗಂಟೆಗೆ ಗ್ರಾಮದ 18 ಕೋಮಿನ ಜನರು ಒಗ್ಗೂಡಿ ನಿರ್ಮಿಸಿರುವ ಸರ್ವಾಲಂಕೃತ ವಾಹನದಲ್ಲಿ ಗಣಪತಿ ಮೂರ್ತಿಯನ್ನು ಸ್ಥಾಪಿಸಲಾಗುವುದು ನಂತರ ಇಡೀರಾತ್ರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಾದಸ್ವರ, ಕರಡಿಮಜಲು, ನಾಸಿಕ್ ಡೋಲು, ನಂದಿಕೋಲು, ಕೀಲು ಕುದುರೆ, ಬೊಂಬೆಕುಣಿತ, ವೀರಭದ್ರನ ಕುಣಿತ, ಡೊಳ್ಳುಕುಣಿತ, ಪೂಜಾಕುಣಿತ, ಸೋಮನ ಕುಣಿತದಂತಹ ಜನಪದ ಕಲಾತಂಡಗಳ ಜೊತೆಗೆ ಬಾಣಬಿರುಸು, ಸಿಡಿಮದ್ದಿನ ಸದ್ದಿನೊಂದಿಗೆ ಮೆರವಣಿಗೆ ನಡೆಸಲಾಗುವುದು.

ಮೆರವಣಿಗೆ ಸಂದರ್ಭದಲ್ಲಿ ಮಾಜಿ ಶಾಸಕರಾದ ಬಿ.ಸುರೇಶ್‌ಗೌಡ, ಎಚ್.ನಿಂಗಪ್ಪ, ಮಾರುತಿ ಸಾಮಿಲ್‌ನ ಹನುಮಂತಪ್ಪ, ಸ್ಫೂರ್ತಿ ಡೆವಲಪರ್ಸ್‌ ಚಿದಾನಂದ್, ಸುಗ್ಗನಹಳ್ಳಿ ಲಕ್ಷ್ಮೀನರಸಿಂಹ ಎಲೆಕ್ಟ್ರಿಕ್‌ನ ನರಸಿಂಹಮೂರ್ತಿ, ಗೂಳೂರಿನವರಾದ ಜಿ.ನಂಜೇಗೌಡ, ಲಕ್ಷ್ಮೀಕಾಂತ ಭಾಗವಹಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.