ADVERTISEMENT

ತುಮಕೂರು: ಅಮಾನಿಕೆರೆಗೆ ಬಂತು ನೀರು

ಪ್ರಾಯೋಗಿಕವಾಗಿ ಅಮಾನಿಕೆರೆಗೆ ಹರಿದ ಹೇಮಾವತಿ

​ಪ್ರಜಾವಾಣಿ ವಾರ್ತೆ
Published 11 ಜುಲೈ 2020, 13:29 IST
Last Updated 11 ಜುಲೈ 2020, 13:29 IST
ಅಮಾನಿಕೆರೆಗೆ ಪ್ರಾಯೋಗಿಕವಾಗಿ ಹೇಮಾವತಿ ನೀರು ಹರಿಸಿದ್ದು ಈ ವೇಳೆ ಸಂಸದ ಜಿ.ಎಸ್.ಬಸವರಾಜ್, ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಹಾಜರಿದ್ದರು
ಅಮಾನಿಕೆರೆಗೆ ಪ್ರಾಯೋಗಿಕವಾಗಿ ಹೇಮಾವತಿ ನೀರು ಹರಿಸಿದ್ದು ಈ ವೇಳೆ ಸಂಸದ ಜಿ.ಎಸ್.ಬಸವರಾಜ್, ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಹಾಜರಿದ್ದರು   

ತುಮಕೂರು: ನಗರದ ಅಮಾನಿಕೆರೆಗೆ ಬುಗಡನಹಳ್ಳಿ ಕೆರೆಯಿಂದ ಪೈಪ್‍ಲೈನ್ ಮೂಲಕ ಹೇಮಾವತಿ ನೀರು ತುಂಬಿಸುವ ಪ್ರಾಯೋಗಿಕ ಕಾರ್ಯ ಯಶಸ್ವಿಯಾಗಿದೆ.

ಈ ವೇಳೆ ಹಾಜರಿದ್ದ ಸಂಸದ ಜಿ.ಎಸ್.ಬಸವರಾಜ್, ‘ನಗರದಲ್ಲಿ 24*7 ಕುಡಿಯುವ ನೀರು ಸೌಲಭ್ಯಕ್ಕೆ ಹೆಚ್ಚುವರಿ ಸುಧಾರಣೆಗಾಗಿ ಹೇಮಾವತಿ ನೀರನ್ನು ಅಮಾನಿಕೆರೆಗೆ ತುಂಬಿಸಲಾಗುತ್ತಿದೆ. ಸ್ಮಾರ್ಟ್‍ಸಿಟಿ ಅನುದಾನದ ₹ 32.38 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಯೋಜನೆ ಅನುಷ್ಠಾನ ಜವಾಬ್ದಾರಿಯನ್ನು ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಗೆ ನೀಡಲಾಗಿದೆ’ ಎಂದು ಹೇಳಿದರು.

ಮಳೆಗಾಲದಲ್ಲಿ ಬುಗಡನಹಳ್ಳಿ ಕೆರೆ ತುಂಬಿದ ನಂತರ ಪೈಪ್‌ಲೈನ್ ಮೂಲಕ ಅಮಾನಿಕೆರೆಗೆ ನೀರು ತುಂಬಿಸಲಾಗುತ್ತದೆ. ಬೇಸಿಗೆಯಲ್ಲಿ ಬುಗಡನಹಳ್ಳಿ ಜಲಸಂಗ್ರಹಾರದಲ್ಲಿ ನೀರಿನ ಕೊರತೆ ಉಂಟಾದಾಗ ಅಮಾನಿಕೆರೆ ನೀರು ಬಳಸಲಾಗುತ್ತದೆ. ಅಮಾನಿಕೆರೆಯು 173 ಎಂಸಿಎಫ್‌ಟಿ ನೀರು ಸಾಮರ್ಥ್ಯವನ್ನು ಹೊಂದಿದೆ ಎಂದರು.

ADVERTISEMENT

ಪ್ರತಿದಿನ ಪೈಪ್‌ಲೈನ್ ಮೂಲಕ 2 ಎಂಸಿಎಫ್‌ಟಿ ನೀರನ್ನು ಅಮಾನಿಕೆರೆಗೆ ಸರಬರಾಜು ಮಾಡಬಹುದಾಗಿದೆ. ಅಧಿಕೃತವಾಗಿ ಅಮಾನಿಕೆರೆಗೆ ನೀರು ಹರಿಸಲು ಪ್ರಾರಂಭಮಾಡಿದ 90 ದಿನಗಳಲ್ಲಿ ಕೆರೆಯನ್ನು ಸಂಪೂರ್ಣವಾಗಿ ತುಂಬಿಸಬಹುದು. ನೀರು ತುಂಬಿಸುವುದರಿಂದ ಸುತ್ತಮುತ್ತಲಿನ ಪ್ರದೇಶದ ಅಂತರ್ಜಲ ಮಟ್ಟದಲ್ಲಿ ಸುಧಾರಣೆ ಆಗಲಿದೆ ಎಂದು ತಿಳಿಸಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್‍, ‘ಇದು ಪ್ರಾಯೋಗಿಕ ಪರೀಕ್ಷೆ ಅಷ್ಟೇ. ಮುಂದಿನ ದಿನಗಳಲ್ಲಿ ಅಮಾನಿಕೆರೆಗೆ ನೀರು ತುಂಬಿಸುವ ಕಾರ್ಯಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕೃತವಾಗಿ ಚಾಲನೆ ನೀಡುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.