ADVERTISEMENT

ಸೌಲಭ್ಯ ಕಲ್ಪಿಸದಿದ್ದರೆ ಉಪವಾಸ ಸತ್ಯಾಗ್ರಹ

ಹಂದಿ ಜೋಗಿ ಸಂಘದಿಂದ ಪಾಲಿಕೆ ಆಯುಕ್ತರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2020, 14:41 IST
Last Updated 8 ಆಗಸ್ಟ್ 2020, 14:41 IST

ತುಮಕೂರು: ಹಂದಿ ಸಾಕಾಣಿಕೆಗೆ ಮತ್ತು ನಮ್ಮ ವಾಸಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದರೆ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ ಎಂದು ಹಂದಿ ಜೋಗಿ ಸಂಘದ ಪದಾಧಿಕಾರಿಗಳು ಮಹಾನಗರ ಪಾಲಿಕೆ ಆಯುಕ್ತರಾದ ರೇಣುಕಾ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಸಾಂಕ್ರಾಮಿಕ ರೋಗದ ಭೀತಿಯ ಕಾರಣ ನಗರದಲ್ಲಿನ ಬಿಡಾಡಿ ಹಂದಿಗಳನ್ನು ಮಾಲೀಕರು ನಗರದಿಂದ ಹೊರಗೆ ಸಾಗಿಸಬೇಕು, ಇಲ್ಲದಿದ್ದರೆ ಕ್ರಮಕೈಗೊಳ್ಳಲಾಗುವುದು ಎಂದು ಪಾಲಿಕೆ ಆಯುಕ್ತರು ಇತ್ತೀಚೆಗೆ ಸೂಚನೆ ನೀಡಿದ್ದರು. ಈ ಪ್ರಯುಕ್ತ ಹಂದಿ ಜೋಗಿ ಸಂಘವು ಹಂದಿ ಸಾಕಾಣಿಕೆದಾರರಿಗೆ ಸೂಕ್ತ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದೆ.

ಸಮುದಾಯದ ನೂರಾರು ಕುಟುಂಬಗಳು ನಗರದಲ್ಲಿ ಹಂದಿ ಸಾಕಾಣಿಕೆ ಮಾಡಿಕೊಂಡು ಜೀವನ ನಡೆಸುತ್ತಿವೆ. ಇದೇ ಅವರ ಬದುಕಿಗೆ ಮೂಲ. ಬಿಡಾಡಿ ಹಂದಿಗಳನ್ನು ನಗರದಿಂದ ಹೊರಗೆ ಸಾಗಿಸಿ ಎಂದು ಸೂಚಿಸಿದ್ದೀರಿ. ಆದರೆ ಅವುಗಳನ್ನು ಸಾಗಿಸಲು ಮತ್ತು ಅಲ್ಲಿ ಸಾಕಲು ನಮಗೆ ಸೂಕ್ತ ವ್ಯವಸ್ಥೆಗಳು ಇಲ್ಲ ಎಂದಿದ್ದಾರೆ.

ADVERTISEMENT

ಈ ಹಿಂದಿನ ಆಯುಕ್ತರು ನಮ್ಮ ವಾಸಕ್ಕೆ ಮತ್ತು ಹಂದಿ ಸಾಕಾಣಿಕೆಗೆ ಅಣ್ಣೇನಹಳ್ಳಿ, ಅಜ್ಜಗೊಂಡನಹಳ್ಳಿ ಬಳಿ ಜಮೀನು ಗುರುತಿಸಿದ್ದರು. ಅಣ್ಣೇನಹಳ್ಳಿಯಲ್ಲಿ ಹಂದಿ ಜೋಗಿಗಳ ವಾಸಕ್ಕೆ ಮತ್ತು ಅಜ್ಜಗೊಂಡನಹಳ್ಳಿ ಬಳಿ ಹಂದಿ ಸಾಕಾಣಿಕೆಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ. ಇಲ್ಲದಿದ್ದರೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.