ADVERTISEMENT

ರಾಜ್ಯಸಭೆಗೆ ದೇವೇಗೌಡ, ತುಮಕೂರಿಗೆ ಅಂಟಿದ ಕಳಂಕ ದೂರ: ಶಾಸಕ ಡಿ.ಸಿ.ಗೌರಿಶಂಕರ್

​ಪ್ರಜಾವಾಣಿ ವಾರ್ತೆ
Published 6 ಜೂನ್ 2020, 17:12 IST
Last Updated 6 ಜೂನ್ 2020, 17:12 IST
ಡಿ.ಸಿ.ಗೌರಿಶಂಕರ್
ಡಿ.ಸಿ.ಗೌರಿಶಂಕರ್   

ತುಮಕೂರು: ‘ಕಳೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರಿನಿಂದ ಸ್ಪರ್ಧಿಸಿ ಸೋತಿದ್ದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ರಾಜ್ಯಸಭೆ ಆಯ್ಕೆ ಆಗುವ ಮೂಲಕ ತುಮಕೂರಿಗೆ ಅಂಟಿರುವ ಕಳಂಕ ತೊಡೆದುಹಾಕುತ್ತಾರೆ ಎಂಬ ವಿಶ್ವಾಸ ಇದೆ’ ಎಂದು ಗ್ರಾಮಾಂತರ ಜೆಡಿಎಸ್ ಶಾಸಕ ಡಿ.ಸಿ.ಗೌರಿಶಂಕರ್ ತಿಳಿಸಿದ್ದಾರೆ.

ಮಾಜಿ ಪ್ರಧಾನಿಯನ್ನು ಸೋಲಿಸಿದ ಕಳಂಕ ಜಿಲ್ಲೆಗೆ ಹೋಗಬೇಕಾದರೆ ದೇವೇಗೌಡರು ರಾಜ್ಯಸಭೆಗೆ ಆಯ್ಕೆ ಆಗಬೇಕು. ಅವರು ರಾಜ್ಯಸಭೆಗೆ ಹೋಗಲು ಒಪ್ಪಿಕೊಳ್ಳಲೇಬೇಕು ಎಂಬ ಒತ್ತಾಯ ಜಿಲ್ಲೆಯ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರದ್ದಾಗಿದೆ ಎಂದಿದ್ದಾರೆ.

ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಕ್ಷದ ಶಾಸಕರು, ವಿಧಾನಪರಿಷತ್ ಸದಸ್ಯರು, ರಾಜ್ಯಸಭಾ ಸದಸ್ಯರು ಭಾಗವಹಿಸಿ ದೇವೇಗೌಡರನ್ನು ರಾಜ್ಯಸಭೆಗೆ ಕಳುಹಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ದೇವೇಗೌಡರು ರಾಜ್ಯಸಭೆಗೆ ಆಯ್ಕೆಯಾಗಲು ಇದುವರೆಗೂ ಒಪ್ಪಿಲ್ಲ. ಎಲ್ಲ ಶಾಸಕರು ಒಟ್ಟಿಗೆ ತೆರಳಿ ಅವರ ಮನವೊಲಿಸಬೇಕು ಎಂದು ತೀರ್ಮಾನಿಸಿದ್ದೇವೆ. ಅವರು ಕೇಂದ್ರ ಸರ್ಕಾರಕ್ಕೆ ಸಲಹೆ, ಸೂಚನೆಗಳನ್ನು ಕೊಡಬೇಕಾಗಿದೆ. ಇದರಿಂದ ದೇಶ, ರಾಜ್ಯಕ್ಕೆ ಒಳ್ಳೆಯ ಹೆಸರು ಬರಲಿದೆ. ಕೊರೊನಾ ಸೋಂಕಿನಿಂದ ದೇಶವೇ ತತ್ತರಿಸಿದೆ. ಇಂತಹ ಸಂದರ್ಭದಲ್ಲಿ ಕೃಷಿ ವಿಚಾರದಲ್ಲಿ ಅವರ ಅನುಭವ ಕೇಂದ್ರ ಸರ್ಕಾರಕ್ಕೆ ಅವಶ್ಯವಾಗಿದೆ ಅತ್ಯವಶ್ಯಕವಾಗಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.