ತುಮಕೂರಿನಲ್ಲಿ ಶನಿವಾರ ನಡೆದ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ 75ನೇ ವರ್ಷದ ‘ಅಮೃತ ಮಹೋತ್ಸವ’ ಕಾರ್ಯಕ್ರಮದಲ್ಲಿ ‘ಸಹಕಾರ ಸಾರ್ವಭೌಮ’ ಅಭಿನಂದನಾ ಗ್ರಂಥವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಿದರು.
ತುಮಕೂರು: ಸಮಾಜದ ಎಲ್ಲ ಬಡವರಿಗೆ ಸಹಾಯ ಮಾಡಬೇಕು ಎಂಬ ಕಾಳಜಿ, ದೊಡ್ಡ ಗುಣವನ್ನು ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು ಬೆಳೆಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ಮಾಡಿದರು.
ನಗರದಲ್ಲಿ ಶನಿವಾರ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ 75ನೇ ವರ್ಷದ ‘ಅಮೃತ ಮಹೋತ್ಸವ’ ಕಾರ್ಯಕ್ರಮದಲ್ಲಿ ‘ಸಹಕಾರ ಸಾರ್ವಭೌಮ’ ಅಭಿನಂದನಾ ಗ್ರಂಥ ಸಮರ್ಪಣೆ ಮಾಡಿ ಮಾತನಾಡಿದರು.
ರಾಜಕೀಯ, ಸಹಕಾರಿ ಕ್ಷೇತ್ರಕ್ಕೆ ಹಲವರು ಬರುತ್ತಾರೆ. ಆದರೆ ಸಚಿವ ಕೆ.ಎನ್.ರಾಜಣ್ಣ ಅವರಂತೆ ಬಡವರಿಗೆ ಸಹಾಯ ಮಾಡಬೇಕು ಎಂಬ ದೊಡ್ಡ ಗುಣ ಇರುವುದಿಲ್ಲ. ಈ ಕ್ಷೇತ್ರಕ್ಕೆ ಬಂದವರು ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಸಮಾಜದಲ್ಲಿನ ಅಸಮಾನತೆ ತೊಲಗಿಸಿ, ಸಮಾನತೆ ತರುವ ಗುರಿಯನ್ನು ಹೊಂದಬೇಕು ಎಂದು ಹೇಳಿದರು.
ಜಾತಿ, ಧರ್ಮವನ್ನು ಮೀರಿ ಸಮಾಜದ ಎಲ್ಲ ಬಡವರಿಗೆ ರಾಜಣ್ಣ ನೆರವಾಗಿದ್ದಾರೆ. ತಮ್ಮನ್ನು ನಂಬಿದ್ದ ಸ್ನೇಹಿತರಿಗೆ ಶಕ್ತಿ ಮೀರಿ ಸಹಾಯ ಮಾಡಿದ್ದಾರೆ. ಪರಿಶಿಷ್ಟ ಪಂಗಡದಲ್ಲಿ ಹುಟ್ಟಿ ಸಹಕಾರಿ ಕ್ಷೇತ್ರದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆಯುವುದು ಸುಲಭದ ಕೆಲಸವಲ್ಲ. ಮೀಸಲಾತಿ ಇಲ್ಲದ ಕ್ಷೇತ್ರದಲ್ಲಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗುವುದು ದೊಡ್ಡ ಸಾಧನೆ ಎಂದು ಬಣ್ಣಿಸಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ತುಮಕೂರಿಗೆ ಹೆಚ್ಚಿನ ಶಕ್ತಿ ತುಂಬಲು ಉಪನಗರ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಮೆಟ್ರೋ ವಿಸ್ತರಿಸಲು ಯೋಜನೆ ಸಿದ್ಧವಾಗಿದೆ. ಅಂತರ ನಗರ ರೈಲು ಸಂಚಾರಕ್ಕೂ ಚಿಂತಿಸಲಾಗಿದೆ’ ಎಂದು ಹೇಳಿದರು.
2027ರ ವೇಳೆಗೆ ಎತ್ತಿನಹೊಳೆ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಲಾಗುವುದು. ಈವರೆಗೆ ಆಗಿರುವ ಕೆಲಸ, ಬಾಕಿ ಇರುವ ಕಾಮಗಾರಿಗೆ ಸಂಬಂಧಿಸಿದ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಗೆ ಸಲ್ಲಿಸಲಾಗುವುದು. ಕಾಮಗಾರಿ ಚುರುಕುಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ, ‘ಜಿಲ್ಲೆಗೆ ಮೆಟ್ರೋ ತರುವ ಪ್ರಯತ್ನ ನಡೆದಿದೆ. ದೊಡ್ಡ ಮಟ್ಟದಲ್ಲಿ ಕೈಗಾರಿಕೆಗಳು ಬರಬೇಕಿದೆ. ಹೇಮಾವತಿಯಿಂದ 4 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. 2027ರ ವೇಳೆಗೆ ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸಲಾಗುವುದು. ಭದ್ರಾ ಮೇಲ್ದಂಡೆ ಯೋಜನೆಯಿಂದ ಪಾವಗಡ ಭಾಗಕ್ಕೆ ನೀರು ತರಲಾಗಿದೆ’ ಎಂದು ವಿವರಿಸಿದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಸತೀಶ್ ಜಾರಕಿಹೊಳಿ, ಕೆ.ಎಚ್.ಮುನಿಯಪ್ಪ, ಡಾ.ಎಚ್.ಸಿ.ಮಹದೇವಪ್ಪ, ಎನ್.ಚಲುವರಾಯಸ್ವಾಮಿ, ರಾಮಲಿಂಗಾರೆಡ್ಡಿ, ಶಾಸಕರಾದ ಟಿ.ಬಿ.ಜಯಚಂದ್ರ, ಕೆ.ಷಡಕ್ಷರಿ, ಎಚ್.ವಿ.ವೆಂಕಟೇಶ್, ಶಿವಲಿಂಗೇಗೌಡ, ಬಿ.ಸುರೇಶ್‌ಗೌಡ, ಜಿ.ಬಿ.ಜ್ಯೋತಿಗಣೇಶ್, ವಿಧಾನ ಪರಿಷತ್ ಸದಸ್ಯರಾದ ಎಂ.ಆರ್.ಸೀತಾರಾಮ್, ಆರ್.ರಾಜೇಂದ್ರ, ಮುಖಂಡರಾದ ಎಸ್.ಪಿ.ಮುದ್ದಹನುಮೇಗೌಡ, ಮುರುಗೇಶ್ ನಿರಾಣಿ, ಶಫಿ ಅಹಮ್ಮದ್, ಗಂಗಹನುಮಯ್ಯ, ಶಾಂತಲಾ ರಾಜಣ್ಣ ಮೊದಲಾದವರು ಉಪಸ್ಥಿತರಿದ್ದರು.
ತುಮಕೂರು ಜಿಲ್ಲೆ ಹೆಸರು ಬದಲಾಗದು
ತುಮಕೂರು ಜಿಲ್ಲೆಯ ಹೆಸರನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಸ್ಪಷ್ಟಪಡಿಸಿದರು. ಜಿಲ್ಲೆಗೆ ತನ್ನದೇ ಆದ ಇತಿಹಾಸ ಸಂಸ್ಕೃತಿ ಪರಂಪರೆ ಇದೆ. ಜಿಲ್ಲೆ ಎಷ್ಟೇ ಅಭಿವೃದ್ಧಿಯಾದರೂ ಹೆಸರನ್ನು ಬದಲಿಸುವ ಪ್ರಯತ್ನ ಮಾಡುವುದಿಲ್ಲ ಎಂದು ವಾಗ್ದಾನ ಮಾಡಿದರು. ಇದಕ್ಕೂ ಮುನ್ನ ಮಾತನಾಡಿದ ಸಾಹಿತಿ ಬರಗೂರು ರಾಮಚಂದ್ರಪ್ಪ ‘ಜಿಲ್ಲೆಯ ಅಸ್ಮಿತೆ ಅಳಿಯಬಾರದು. ಹೆಸರು ಬದಲಾವಣೆ ಮೂಲಕ ಜಿಲ್ಲೆಗೆ ಬಂಡವಾಳಶಾಹಿಗಳು ಪ್ರವೇಶಿಸಬಾರದು. ಬಂಡವಾಳ ಬುದ್ಧನಾಗಿ ಬರಬೇಕು ಭಗವಂತನಾಗಿ ಬರಬಾರದು’ ಎಂದು ಒತ್ತಾಯಿಸಿದರು.
ರಾಜಣ್ಣ ಏಕಶಿಲಾ ಬೆಟ್ಟದಂತೆ: ಬರಗೂರು
‘ಮಧುಗಿರಿಯ ಏಕಶಿಲಾ ಬೆಟ್ಟ ಎಷ್ಟು ಗಟ್ಟಿಯಾಗಿದೆಯೋ ಅದೇ ರೀತಿ ಸಚಿವ ಕೆ.ಎನ್.ರಾಜಣ್ಣ ವ್ಯಕ್ತಿತ್ವವೂ ಗಟ್ಟಿಯಾಗಿದೆ. ಕುಸ್ತಿಪಟುಗಳು ಏಕಾಂಗಿಯಾಗಿ ಹೋರಾಟ ಮಾಡಿದಂತೆ ರಾಜಕೀಯವಾಗಿ ಏಕಾಂಗಿ ಹೋರಾಟ ಮಾಡಿಕೊಂಡು ಬಂದಿದ್ದಾರೆ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಬಣ್ಣಿಸಿದರು. ಆಶಯ ನುಡಿಗಳನ್ನಾಡಿದ ಅವರು ‘ಬಡವರ ಪರವಾಗಿ ಕೆಲಸ ಮಾಡುತ್ತಿರುವ ಜಾತ್ಯತೀತ ನಾಯಕ. ಕೂಗುವೀರನಲ್ಲ. ಸಣ್ಣ ರೈತರು ಸಣ್ಣಪುಟ್ಟ ಸಮುದಾಯದವರಿಗೆ ಕೆಲಸ ಮಾಡಿಕೊಟ್ಟಿದ್ದಾರೆ. ಕೊರಳು– ಕರುಳಿನ ಸಮನ್ವಯತೆ ಇದೆ. ವ್ಯಕ್ತಿ–ಶಕ್ತಿ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಸಮಯೋಚಿತ ರಾಜಕಾರಣಿ. ಯಾವುದೇ ಪಕ್ಷದಲ್ಲಿ ಇದ್ದರೂ ಚುನಾವಣೆಯಲ್ಲಿ ಗೆಲ್ಲಿಸುತ್ತಾರೆ ಯಾರನ್ನು ಬೇಕಾದರೂ ಸೋಲಿಸುತ್ತಾರೆ’ ಎಂದು ರಾಜಣ್ಣ ಸಾಧನೆಯನ್ನು ಮೆಲುಕು ಹಾಕಿದರು.
ನ್ಯಾಯ ಪರ– ಅನ್ಯಾಯದ ವಿರುದ್ಧ
‘ನನ್ನ ಇಡೀ ಜೀವನದಲ್ಲಿ ನ್ಯಾಯದ ಪರ ಕೆಲಸ ಮಾಡಿದ್ದೇನೆ. ಅನ್ಯಾಯದ ವಿರುದ್ಧ ಹೋರಾಡಿದ್ದೇನೆ. ಬಡವರ ನೋವನ್ನು ಹತ್ತಿರದಿಂದ ನೋಡಿದ್ದರಿಂದ ಅವರ ಕಷ್ಟ ನಿವಾರಣೆ ಮಾಡುವ ಮನಸ್ಥಿತಿಯನ್ನು ಬೆಳೆಸಿಕೊಂಡಿದ್ದೇನೆ’ ಎಂದು ಸಚಿವ ಕೆ.ಎನ್.ರಾಜಣ್ಣ ತಮ್ಮ ಸಾಧನೆಯ ಹಾದಿಯನ್ನು ನೆನಪಿಸಿಕೊಂಡರು. ‘ಎಲ್ಲ ಜಾತಿ ಧರ್ಮದ ಬಡವರ ಪರ ಕೆಲಸ ಮಾಡಿದ್ದೇನೆ. ಕೆಲವರು ಮನುಷ್ಯತ್ವದಿಂದ ಬಾಳುವುದಿಲ್ಲ. ಅಸಹಾಯಕರಿಗೆ ಸಹಾಯ ಮಾಡುವುದಿಲ್ಲ. ಆದರೆ ಧ್ವನಿ ಇಲ್ಲದವರಿಗೆ ಧ್ವನಿ ಕೊಡಬೇಕು ಎಂಬುದೇ ನನ್ನ ಆಶಯವಾಗಿದೆ. ಅದೇ ಉದ್ದೇಶದೊಂದಿಗೆ ಕೆಲಸ ಮಾಡಿದ್ದೇನೆ’ ಎಂದರು.
ಶ್ರೀನಿವಾಸ್ ಗೈರು
ಸಚಿವ ರಾಜಣ್ಣ ಜತೆಗೆ ಮುನಿಸಿಕೊಂಡಿರುವ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಗೈರು ಹಾಜರಿ ಎದ್ದು ಕಾಣುತಿತ್ತು. ಜಿಲ್ಲೆಯ ಕಾಂಗ್ರೆಸ್ ಶಾಸಕರು ಭಾಗವಹಿಸಿದ್ದರೂ ಶ್ರೀನಿವಾಸ್ ಕುಣಿಗಲ್ ಶಾಸಕ ಡಾ.ಎಚ್.ಡಿ.ರಂಗನಾಥ್ ಮಾತ್ರ ಪಾಲ್ಗೊಂಡಿರಲಿಲ್ಲ. ತುಮುಲ್ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಸಚಿವರ ಜತೆಗೆ ಮುನಿಸಿಕೊಂಡಿರುವ ಶ್ರೀನಿವಾಸ್ ನಂತರದ ದಿನಗಳಲ್ಲಿ ಅಂತರ ಕಾಪಾಡಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.